Mysore
17
clear sky

Social Media

ಬುಧವಾರ, 21 ಜನವರಿ 2026
Light
Dark

ವೈಭವದ ಸುತ್ತೂರು ಜಾತ್ರಾ ಮಹೋತ್ಸವ ಸಂಪನ್ನ

ಕೆ.ಬಿ.ರಮೇಶನಾಯಕ

ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಸಮ್ಮಿಲನವಾಗಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವೈವಭದಿಂದ ತೆರೆ ಬಿದ್ದಿದೆ. ಕಳೆದ ಒಂದು ವಾರದಿಂದ ಜನರು ಲಕ್ಷೆಪಲಕ್ಷ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆಯ ಸೌಂದರ್ಯ ಸವಿದು ಖುಷಿ ಅನುಭವಿಸಿದರೆ, ಕೊನೆಯ ದಿನವಾದ ಮಂಗಳವಾರ ಮತ್ತೊಂದು ವರುಷದ ತವಕದಿಂದಲೇ ಹಿಂತಿರುಗಿದರು. ವಿಶೇಷವಾಗಿ ಆರು ದಿನಗಳ ಕಾಲ ಅಂದಾಜು ೨೫ರಿಂದ ೩೦ ಲಕ್ಷ ಮಂದಿಗೆ ದಾಸೋಹ ವ್ಯವಸ್ಥೆ ಮಾಡಿದ ಬಾಣಸಿಗರು, ಉಣಬಡಿಸಲು ನೆರವಾದ ಸ್ವಯಂಸೇವಕರ ಶ್ರಮಕ್ಕೆ ಮಠದ ಭಕ್ತರು  ಖುಷಿಯಾಗಿದ್ದಾರೆ.

ಸಹಸ್ರ ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಸುತ್ತೂರು ಜಾತ್ರಾ ಮಹೋತ್ಸವದ ಪ್ರಯುಕ್ತ ಈ ಬಾರಿ ಜ.೧೫ರಿಂದ೨೦ರವರೆಗೆ ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ೨೫ ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆಧ್ಯಾತ್ಮಿಕ ಮಾತ್ರವಲ್ಲದೆ ಕೃಷಿ, ಶೈಕ್ಷಣಿಕ ಹಾಗೂ ವೈಜ್ಞಾನಿಕ ವಿಚಾರಗಳ ಬಗ್ಗೆಯೂ ಅರಿವು ಪಡೆದುಕೊಂಡರು.

ಮೊದಲ ದಿನದಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಡಿನ ವಿವಿಧ ಮಠಾಧೀಶರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಗಣ್ಯರು ಚಾಲನೆ ನೀಡಿದ್ದರು.

ಸಾಮೂಹಿಕ ವಿವಾಹ ವಿಶೇಷ: ಈ ಬಾರಿ ನಡೆದ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟ ಜಾತಿಯ ೮೪, ಪರಿಶಿಷ್ಟ ಪಂಗಡದ ೧೫, ಹಿಂದುಳಿದ ವರ್ಗಗಳ ೨೧, ವೀರಶೈವ- ಲಿಂಗಾಯತ ೪ ಹಾಗೂ ಅಂತರ್ಜಾತಿಯ ೧೧ ಜೋಡಿಯ ವಿವಾಹ ನೆರವೇರಿತು. ಇದರಲ್ಲಿ ೩ ಅಂಗವಿಕಲ ಜೋಡಿ ಹಸೆಮಣೆ ಏರಿದ್ದು ವಿಶೇಷವಾಗಿದ್ದರೆ, ಮೂರು ಜೋಡಿ ಮರು ಮದುವೆಯಾಗಿ ಬಾಳ್ವೆ ನಡೆಸುವ ಪ್ರಮಾಣ ಮಾಡಿದರು. ಇದರಲ್ಲಿ ತಮಿಳುನಾಡಿನ ೫ ಜೋಡಿ, ಮೈಸೂರಿನ ೬೭, ಚಾಮರಾಜನಗರದ ೫೩, ಮಂಡ್ಯದ ೬ ಹಾಗೂ ಕಲಬುರಗಿ, ರಾಯಚೂರು, ಬೆಂಗಳೂರು, ರಾಮನಗರ ಜಿಲ್ಲೆಯ ತಲಾ ಒಂದು ಜೋಡಿ ಹಸೆಮಣೆ ಏರಿದ್ದು ಮತ್ತೊಂದು ವಿಶೇಷವಾಗಿತ್ತು.

ರೈತರಿಗೆ ಭರಪೂರ ಮಾಹಿತಿ ನೀಡಿದ ಕೃಷಿ ಬ್ರಹ್ಮಾಂಡ: ಕೃಷಿ ಮೇಳ ಮೊದಲನೇ ದಿನವೇ ಆರಂಭವಾಗಿ ಬಹಳ ಆಕರ್ಷಣೆ ಮಾತ್ರವಲ್ಲ ಅನೇಕರ ಮೆಚ್ಚುಗೆಯೂ ಪಡೆದುಕೊಂಡಿತ್ತು. ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ ಹೆಚ್ಚು ಖರ್ಚಿಲ್ಲದೆ ನಿರ್ಮಿಸಬಹುದಾದ ಸಮಗ್ರ ಕೃಷಿ ಮಾದರಿ, ಒಂದು ಎಕರೆ ಭೂಮಿಯಲ್ಲಿ ಕೃಷಿ ಬ್ರಹ್ಮಾಂಡವನ್ನೇ ಸೃಷ್ಟಿಸಲಾಗಿತ್ತು.

ದನಗಳ ಜಾತ್ರೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜ  ನಗರ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಳ್ಳೀಕಾರ್ ತಳಿಗಳ ರಾಸುಗಳೂ ಸೇರಿ ೨೫೭ ಜೋಡಿ ರಾಸುಗಳು ಪಾಲ್ಗೊಂಡು ಗಮನ ಸೆಳೆದಿದ್ದವು. ಇದಲ್ಲದೆ, ಸಾಂಸ್ಕೃತಿಕ ಮೇಳ, ಭಜನಾ ಮೇಳ, ಕುಸ್ತಿ, ಗಾಳಿಪಟ, ದೋಣಿವಿಹಾರ, ದೇಸಿ ಆಟಗಳು ನೋಡುಗರನ್ನು ಮನರಂಜಿಸಿದ್ದವು. ಕಣ್ಮನ ಸೆಳೆದ ತೆಪ್ಪೋತ್ಸವ: ಲಕ್ಷ ದೀಪೋತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡರೆ, ತೆಪ್ಪೋತ್ಸವ ದಿನದಂದು ಅಂದಾಜು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಾಮೂಹಿಕ ವಿವಾಹದಲ್ಲಿ ವಿವಿಧ ಮಠಗಳ ಮಠಾಧೀಶರು, ವಿವಿಧ ಧರ್ಮಗಳ ಧರ್ಮಗರುಗಳು ಪಾಲ್ಗೊಂಡರೆ, ಕೃಷಿ ವಿಚಾರಸಂಕಿರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ದೇಸಿ ಆಟಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಎಚ್.ಸಿ.ಮಹ ದೇವಪ್ಪ, ಕೆ.ವೆಂಕಟೇಶ್ ಮೊದಲಾದ ನಾಯಕರು ಪಾಲ್ಗೊಂಡಿದ್ದರು. ಭಾನುವಾರ ನಡೆದ ತೆಪ್ಪೋತ್ಸವ, ಕಪಿಲಾ ಆರತಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳು, ಶಾಸಕ ಅನಿಲ್ ಚಿಕ್ಕಮಾದು ಭಾಗವಹಿಸಿ ಆರತಿ ಬೆಳಗಿದರು. ಕೊನೆಯ ದಿನದ ಸಮಾರೋಪದಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಬೇಕಿತ್ತಾದರೂ ಹೊಸದಿಲ್ಲಿಯಲ್ಲಿ ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರಿಂದ ಬರಲಿಲ್ಲ.

ಈ ಆರು ದಿನಗಳ ಕಾಲ ದಿನವಿಡೀ ದಾಸೋಹದ ಕಾರ್ಯದಲ್ಲಿ ತೊಡಗಿದ್ದ ಐನೂರಕ್ಕೂ ಹೆಚ್ಚು ಬಾಣಸಿಗರು, ೫೦೦೦ಕ್ಕೂ ಹೆಚ್ಚು ಸ್ವಯಂಸೇವಕರ ಪಾತ್ರ ಅಪಾರವಾಗಿದೆ. ಒಬ್ಬರಿಗೂ ಊಟ, ತಿಂಡಿ ಇಲ್ಲವೆನ್ನದಂತೆ ದಿನದ ೨೪ ಗಂಟೆಗಳ ಕಾಲವೂ ಇದಕ್ಕಾಗಿ ತಮ್ಮ ಸಮಯ ವಿನಿಯೋಗಿ ಸಿದ್ದರಿಂದ ಬಂದ ಭಕ್ತರೆಲ್ಲರೂ ಇಂದು ಭಾರವಾದ ಮನಸ್ಸಿನಿಂದ ಹಿಂತಿರುಗಿದರು.

ಸಹಸ್ರಾರು ಜನರ ಮನ ತಣಿಸಿದ ನೃತ್ಯ ಪ್ರದರ್ಶನ: ಜಾತ್ರಾ ಮಹೋತ್ಸವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಕಲಾ ತಂಡಗಳು ತಮ್ಮ ಮನಮೋಹಕ ನೃತ್ಯದ ಮೂಲಕ ಸಹಸ್ರಾರು ಜನರ ಮನತಣಿಸುವಂತೆ ಮಾಡುವಲ್ಲಿ ಸಫಲವಾದವು. ಒಂದು ತಂಡಕ್ಕಿಂತ ಮತ್ತೊಂದು ತಂಡದ ನೃತ್ಯ ಚೆಂದ ಅನ್ನುವಂತೆ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಮನರಂಜಿಸಿದ್ದವು. ಇನ್ನೂ ಹಳ್ಳಿಯ ಜನರು ಎಲ್ಲ ಕಡೆ ಕಣ್ಣಾಡಿಸಿಕೊಂಡು ಮನೆಗೆ ಕಡ್ಲೆಪುರಿ, ಬೂಂದಿ ಇನ್ನಿತರ ವಸ್ತುಗಳನ್ನು ಖರೀದಿಸಿಸುತ್ತಿದ್ದರು. ಜಾತ್ರೆಯಲ್ಲಿ ಪ್ರದರ್ಶನ ಕೊಡಲು ತಿಂಗಳಿಂದ ತಾಲೀಮು ನಡೆಸಿದ್ದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡ ಅಮೋಘ ಪ್ರದರ್ಶನ ನೀಡಿ ನೆರೆದಿದ್ದ ಜನರನ್ನು ಮೋಡಿ ಮಾಡಿತು.

ಹತ್ತು ಹಲವು ಕಾರ್ಯಕ್ರಮ: ವಿಚಾರ ಸಂಕಿರಣ, ರೈತರು ಹಾಗೂ ಅವರ ಮಕ್ಕಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ, ೧ರಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಬೇರೆ ಬೇರೆ ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯ ಕುರಿತು ಚಿತ್ರ ರಚಿಸುವ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಗಾಳಿಪಟ ಸ್ಪರ್ಧೆ ಗಮನ ಸೆಳೆದವು.

ಜಾತ್ರೆಯ ಅಂಗವಾಗಿ ಜ.೧೯ರಂದು ರಾಷ್ಟ್ರ ಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆದವು. ಈ ಬಾರಿ ಎರಡು ಮಾರ್ಫಿಟ್ ಕುಸ್ತಿಗಳಿದ್ದು, ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಸುತ್ತೂರು ಕೇಸರಿ ಪ್ರಶಸ್ತಿಯನ್ನು ನಂಜನಗೂಡಿನ ಪೈಲ್ವಾನ್ ಶಿವರಾಜ್, ಸುತ್ತೂರು ಕುಮಾರ ಪ್ರಶಸ್ತಿಯನ್ನು ಕ್ಯಾತನಹಳ್ಳಿಯ ಪೈಲ್ವಾನ್ ಪರಮೇಶ್ ಪಡೆದುಕೊಂಡರು.

ದೇಸಿ ಆಟಗಳ ವೈಭವ:

ಜಾತ್ರೆಯಲ್ಲಿ ದೇಸಿ ಆಟಗಳು ವಿಜೃಂಭಿಸಿದವು. ಸಾರ್ವಜನಿಕರ ಮನೋರಂಜನೆಗಾಗಿ ಜಾತ್ರೆಯ ಎಲ್ಲ ದಿನ ಗಳಲ್ಲಿ ದೋಣಿ ವಿಹಾರ ಏರ್ಪಡಿಸಲಾಗಿತ್ತು. ಗ್ರಾಮೀಣ ಜನತೆಗಾಗಿ ದೇಸಿ ಆಟಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ಸಂತಸಪಟ್ಟರು. ದನಗಳ ಜಾತ್ರೆಯನ್ನು ಕಳೆದ ೫೪ ವರ್ಷಗಳಿಂದಲೂ ಏರ್ಪಡಿಸಲಾಗುತ್ತಿದ್ದು, ಈ ವರ್ಷವೂ ದನಗಳ ಜಾತ್ರೆ ನಡೆಯಿತು. ಇದರ ನಡುವೆ ಜ.೧೯ರಂದು ನಡೆದ ತೆಪ್ಪೋತ್ಸವದಂದು ನಡೆದ ಕಪಿಲಾರತಿ ಮನಮೋಹಕವಾಗಿತ್ತು. ತೆಪ್ಪೋತ್ಸವದ ವೇಳೆ ನಡೆದ ಬಾಣ ಬಿರುಸುಗಳ ಪ್ರದರ್ಶನ ಮೋಡಿ ಮಾಡಿತು. ಈ ಬಾರಿ ೩೦ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ್ದ ತೆಪ್ಪ ನೋಡುಗರ ಕಣ್ಮನ ಸೆಳೆಯಿತು.

Tags:
error: Content is protected !!