ಮಂಜು ಕೋಟೆ
ಎಚ್.ಡಿ.ಕೋಟೆ: ತಾಲ್ಲೂಕಿನ ಕೆಲ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನೇ ನಡೆಸದೆ ನಕಲಿ ಜಿಪಿಎಸ್ ದಾಖಲಾತಿ ಸಲ್ಲಿಸಿದ ಗುತ್ತಿಗೆ ಸಂಸ್ಥೆಯೊಂದು ೩.೭೫ ಕೋಟಿ ರೂ. ಪಡೆಯುವ ಮೂಲಕ ಭಾರಿ ಅವ್ಯವಹಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಮುಸ್ಲಿಂ ಬ್ಲಾಕ್ ಮತ್ತು ತಾಲ್ಲೂಕಿನ ನಾಗನಹಳ್ಳಿ, ಚಿನ್ನಪ್ಪ ಪಾಳ್ಯ ಗ್ರಾಮಗಳಲ್ಲಿ ಕ್ರೈಸ್ತ ಸಮುದಾಯ ಮತ್ತು ಮುಸ್ಲಿಂ ಜನಾಂಗದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇಲ್ಲಿನ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಒಂದೂವರೆ ವರ್ಷದ ಹಿಂದೆ ೫ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಿದ್ದರು.
ಕೋಟೆಗೆ ೧ ಕೋಟಿ ೭೮ ಲಕ್ಷ ರೂ., ನಾಗನಹಳ್ಳಿ ಗ್ರಾಮಕ್ಕೆ ೧ ಕೋಟಿ ೬೫ ಲಕ್ಷ ರೂ. ಮತ್ತು ಚಿನ್ನಪ್ಪ ಪಾಳ್ಯ ಗ್ರಾಮಕ್ಕೆ ೧ ಕೋಟಿ ೫೦ ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಬೆಂಗಳೂರಿನ ಕೆಆರ್ ಐಬಿಎಲ್ ಸಂಸ್ಥೆಯವರು ಗುತ್ತಿಗೆ ಪಡೆದಿದ್ದರು. ಪ್ರಾರಂಭದಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆಯಿತು. ಆದರೆ, ಅದು ಕಳಪೆ ಕಾಮಗಾರಿ ಎಂದುm ಗ್ರಾಮಸ್ಥರು ಆರೋಪಿಸಿದರು. ನಂತರ ಗುತ್ತಿಗೆ ಸಂಸ್ಥೆಯವರು ಕೇವಲ ಶೇ.೨೦ರಷ್ಟು ಕಾಮಗಾರಿ ನಡೆಸಿ ನಾಪತ್ತೆಯಾಗಿದ್ದರು. ಕಾಮಗಾರಿ ಸಮರ್ಪಕವಾಗಿ ನಡೆಯದಿರುವುದರಿಂದ ಈ ಸ್ಥಳಗಳಲ್ಲಿ ಜನರು ವಾಸಿಸಲು ಮತ್ತು ಓಡಾಡಲು ಬಹಳ ಸಮಸ್ಯೆ ಎದುರಾಯಿತು. ಇದನ್ನು ಗ್ರಾಮಸ್ಥರು ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಅನಿಲ್ ಅವರು, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಶಿಲ್ಪಾ ಅವರಿಗೆ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದ್ದರು.
ಎಚ್.ಡಿ.ಕೋಟೆ, ನಾಗನಹಳ್ಳಿ ಮತ್ತು ಚಿನ್ನಪ್ಪ ಪಾಳ್ಯ ಗ್ರಾಮಗಳಿಗೆ ಶಿಲ್ಪಾ ಅವರು ಭೇಟಿ ನೀಡಿದಾಗ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಎನ್‌ಆರ್‌ಐಜಿ ಯೋಜನೆಯ ಜಿಪಿಎಸ್ ನಕಲಿ ಫೋಟೊಗಳು ಹಾಗೂ ಇನ್ನಿತರ ದಾಖಲಾತಿಗಳನ್ನು ಸಲ್ಲಿಸಿ, ೩ ಕೋಟಿ ೭೫ ಲಕ್ಷ ರೂ. ಪಡೆದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತಿವೆ, ಹೆಚ್ಚುವರಿಯಾಗಿ ೧ ಕೋಟಿ ೨೫ ಲಕ್ಷ ರೂ. ಬಿಡುಗಡೆ ಮಾಡಬೇಕು ಎಂದು ಸಂಸ್ಥೆಯವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಪತ್ರ ಬರೆದಿರುವುದು ಪತ್ತೆಯಾಗಿದೆ.
ಈ ಬೆಳವಣಿಗೆಯಿಂದ ಆತಂಕಗೊಂಡ ಗ್ರಾಮಸ್ಥರು ಲೋಕಾಯುಕ್ತರು ಪಟ್ಟಣಕ್ಕೆ ಅಹವಾಲು ಸ್ವೀಕರಿಸಲು ಭೇಟಿ ನೀಡಿದ್ದ ಸಂದರ್ಭದಲ್ಲಿ ಗುತ್ತಿಗೆ ಸಂಸ್ಥೆಯ ಅವ್ಯವಹಾರದ ಬಗ್ಗೆ ದೂರು ನೀಡಿದ್ದರಲ್ಲದೆ, ಶಾಸಕ ಅನಿಲ್ ಚಿಕ್ಕಮಾದು ಮತ್ತು ಜಿಲ್ಲಾಧಿಕಾರಿ ಜಿ.ಲಕ್ಷಿ ಕಾಂತ್ ರೆಡ್ಡಿ ಅವರಿಗೂ ಮನವಿ ಸಲ್ಲಿಸಿದ್ದಾರೆ.
ಹಿಂದುಳಿದ ತಾಲ್ಲೂಕಿನ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗುವುದೇ ಕಷ್ಟ. ಇಲ್ಲಿ ಬಿಡುಗಡೆಗೊಂಡಿರುವ ಕೋಟ್ಯಂತರ ರೂ. ಅನುದಾನದಲ್ಲಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗುತ್ತಿಗೆ ಸಂಸ್ಥೆಯು ಬೇಕಾಬಿಟ್ಟಿ ಕೆಲಸ ನಿರ್ವಹಿಸಿದೆ. ಅಲ್ಲದೆ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಈ ಪ್ರಕರಣದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
” ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ೫ ಕೋಟಿ ರೂ. ಗಳಿಗೂ ಅಧಿಕ ವೆಚ್ಚದಲ್ಲಿ ಮೂರು ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕಾಮಗಾರಿ ಕೈಗೊಳ್ಳಲಾಗಿತ್ತು. ಕಳಪೆ ಕಾಮಗಾರಿ ಮತ್ತು ಅವ್ಯಹಾರದ ಬಗ್ಗೆ ತನಿಖೆ ನಡೆಸಿ ಸಮಗ್ರ ವರದಿಯನ್ನು ನೀಡುವಂತೆ ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು, ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು.”
ಅನಿಲ್ ಚಿಕ್ಕಮಾದು, ಶಾಸಕ
” ಶಾಸಕರ ನಿರ್ದೇಶನದ ಮೇರೆಗೆ ಕಾಮಗಾರಿಗಳನ್ನು ಪರಿಶೀಲಿಸಲಾಗಿದೆ. ದಾಖಲಾತಿಯಲ್ಲಿ ಕೆಲವೊಂದು ಸಮಸ್ಯೆ ಮತ್ತು ಲೋಪಗಳಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುತ್ತಿಗೆ ಸಂಸ್ಥೆಯವರಿಗೆ ಖುದ್ದು ಹಾಜರಾಗಿ, ಕಾಮಗಾರಿಗಳನ್ನು ತೋರಿಸುವಂತೆ ಸೂಚಿಸಲಾಗಿದೆ. ನಂತರ ಸಮಗ್ರ ವರದಿಯನ್ನು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಲ್ಲಿಸಲಾಗುವುದು.”
ಶಿಲ್ಪಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು





