Mysore
29
scattered clouds

Social Media

ಬುಧವಾರ, 14 ಜನವರಿ 2026
Light
Dark

ಮಂಡ್ಯ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಯೋಧ ಸಾವು

ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ.ಮಾದೇಗೌಡ (44) ಎಂಬುವವರೇ ಹೃದಯಾಘಾತದಿಂದ ಮೃತಟಪಟ್ಟಿರುವ ಯೋಧನಾಗಿದ್ದಾರೆ. ಗಡಿ ಭದ್ರತಾ ಪಡೆ (ಬಿ.ಎಸ್.ಎಫ್.) ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾದೇಗೌಡ ಅವರು, ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಳೆದ 2000ರಲ್ಲಿ ಮೈಸೂರಿನಲ್ಲಿ ನಡೆದ BSF ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿ BSF ಸೇರಿದ್ದ ಮಾದೇಗೌಡ ಅವರು, ಕಳೆದ 25 ವರ್ಷಗಳಲ್ಲಿ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು. ಮೃತರಿಗೆ ಪತ್ನಿ ಎಸ್.ಶಿಲ್ಪಾ, ಪುತ್ರ ಮತ್ತು ಪುತ್ರಿ ಇದ್ದಾರೆ.

ಮಂಡ್ಯಕ್ಕೆ ಆಗಮಿಸಿದ್ದ ಮೃತ ಯೋಧನ ಪಾರ್ಥಿವ ಶರೀರವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಇರಿಸಿ ಪೊಲೀಸರು ಗೌರವ ಸಮರ್ಪಣೆ ಮಾಡಿದರು. ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ, ಎಸ್ಪಿ ಶೋಭಾರಾಣಿ ಅವರು, ಪುಷ್ಪಗುಚ್ಛ ಇರಿಸಿ ಗೌರವ ನಮನ ಸಲ್ಲಿಸಿದರು.

ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಹುತಾತ್ಮ ಯೋಧನಿಗೆ ಗೌರವ ಸಲ್ಲಿಕೆ ಮಾಡಲಾಯಿತು. ಇದೇ ವೇಳೆ ಮೃತ ಕುಟುಂಬಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಸಾಂತ್ವನ ಹೇಳಿದರು.

ಮೃತ ಯೋಧ ಮಾದೇಗೌಡರನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಮಧ್ಯಾಹ್ನದ ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

Tags:
error: Content is protected !!