Mysore
23
scattered clouds

Social Media

ಸೋಮವಾರ, 12 ಜನವರಿ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ‘ಅರಸು, ಸಿದ್ದರಾಮಯ್ಯ ಎದುರಿಸಿದ ಸವಾಲುಗಳು ವಿಭಿನ್ನ’

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಒಂದು ವಿಶಿಷ್ಟ ದಾಖಲೆಗೆ ಪಾತ್ರರಾದರು. ಇದುವರೆಗೆ ಕರ್ನಾಟಕವನ್ನು ಸುದೀರ್ಘ ಕಾಲ ಆಳಿದ ಮುಖ್ಯಮಂತ್ರಿ ಅಂತ ದೇವರಾಜ ಅರಸರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದು ಸಿದ್ದರಾಮಯ್ಯ ಅವರ ಈಗಿನ ಹೆಗ್ಗಳಿಕೆ.

ಅಂದ ಹಾಗೆ ಇಂತಹ ಬೆಳವಣಿಗೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಕತಾಳೀಯ ಎನ್ನುತ್ತಾರೆ. ಅದೇ ರೀತಿ ಇಂತಹ ದಾಖಲೆಯನ್ನು ಬೇರೆಯವರೂ ಮುರಿಯಬಹುದು ಎನ್ನುತ್ತಾರೆ. ಇದೇ ರೀತಿ ಅವರನ್ನು ವಿರೋಧಿಸುವವರು: ದಾಖಲೆಗಳು ಮುಖ್ಯವಲ್ಲ, ಅಧಿಕಾರದಲ್ಲಿದ್ದಷ್ಟು ಕಾಲ ಏನು ಮಾಡಿದರು ಎಂಬುದು ಮುಖ್ಯ ಎನ್ನುತ್ತಾರೆ.

ಆದರೆ ಇಂತಹ ಅಭಿಪ್ರಾಯಗಳೇನೇ ಇರಲಿ, ದೇವರಾಜ ಅರಸರ ದಾಖಲೆಯನ್ನು ಸಿದ್ದರಾಮಯ್ಯ ಅವರು ಮುರಿದ ಈ ಸಂದರ್ಭವನ್ನು ಬಹುತೇಕರು ಸಂಭ್ರಮದಿಂದ ಗಮನಿಸುತ್ತಾರೆ. ಒಬ್ಬ ನಾಯಕ ಸಮರ್ಥರಲ್ಲದೆ ಹೋದರೆ ಇಂತಹ ವಿಶಿಷ್ಟ ದಾಖಲೆ ಮಾಡಲು ಸಾಧ್ಯವಿರಲಿಲ್ಲ ಎನ್ನುತ್ತಾರೆ. ಇಷ್ಟೆಲ್ಲದರ ನಡುವೆಯೂ ನಾವು ಮಾಡಬೇಕಿರುವುದು ಹೋಲಿಕೆಯಲ್ಲ. ಬದಲಿಗೆ ಮುಖ್ಯಮಂತ್ರಿಯಾದವರು, ಯಾವ ಸಂದರ್ಭದಲ್ಲಿ ಮುಖ್ಯಮಂತ್ರಿಯಾದರು, ಎಂತಹ ಸವಾಲುಗಳಿಗೆ ಮುಖಾಮುಖಿಯಾದರು ಎಂಬುದನ್ನು ಗಮನಿಸಬೇಕು.

ಇಲ್ಲದಿದ್ದರೆ ನಾವು ಒಬ್ಬರನ್ನು, ಮತ್ತೊಬ್ಬರ ಜತೆ ಹೋಲಿಸುವ ಮೂಲಕ ಇತಿಹಾಸಕ್ಕೆ ಮತ್ತು ವರ್ತಮಾನಕ್ಕೆ ಅಪಚಾರ ಮಾಡುತ್ತೇವೆ. ಏಕೆಂದರೆ ದೇವರಾಜ ಅರಸರು ಈ ರಾಜ್ಯದ ಮುಖ್ಯಮಂತ್ರಿ ಯಾದ ಸಂದರ್ಭವೇ ಬೇರೆ, ಅವರು ಎದುರಿಸಿದ ಸವಾಲುಗಳೇ ಬೇರೆ. ಹೀಗಾಗಿ ಇಂತಹ ಸಂದರ್ಭ ಮತ್ತು ಸವಾಲುಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಯಾದವರು ಅದನ್ನು ಹೇಗೆ ಎದುರಿಸಿದರು ಎಂಬುದನ್ನು ಮುಖ್ಯವಾಗಿ ಗಮನಿಸಬೇಕೇ ಹೊರತು,ಇವರು,ಅವರಂತೆ ಎಂದು ಹೋಲಿಸುವುದು ಸರಿಯಲ್ಲ. ಅಂದ ಹಾಗೆ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಈ ರಾಜ್ಯದಲ್ಲಿ ಇಪ್ಪತ್ತಮೂರು ಮಂದಿ ನಾಯಕರು ಒಟ್ಟು ಮೂವತ್ತನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಎಸ್. ನಿಜಲಿಂಗಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಅತ್ಯಂತ ಹೆಚ್ಚು ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅರ್ಥಾತ್,ಈ ನಾಯಕರು ತಲಾ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇನ್ನು ವೀರೇಂದ್ರ ಪಾಟೀಲ್,ದೇವರಾಜ ಅರಸು,ರಾಮಕೃಷ್ಣ ಹೆಗಡೆ, ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ತಲಾ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಉಳಿದಂತೆ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಆರ್.ಗುಂಡೂರಾವ್, ಎಸ್. ಆರ್.ಬೊಮ್ಮಾಯಿ, ಎಸ್.ಬಂಗಾರಪ್ಪ, ಎಂ.ವೀರಪ್ಪಮೊಯ್ಲಿ, ಎಚ್. ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ತಲಾ ಒಂದು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗೆ ಮುಖ್ಯಮಂತ್ರಿಗಳಾದವರ ಪೈಕಿ ಕೆಲವರು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯವಾಗದೇ ಹೋಗಿರಬಹುದು. ಆದರೆ ಮುಖ್ಯಮಂತ್ರಿಗಳಾದ ಬಹುತೇಕರು ಈ ನಾಡಿಗೆ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ.

ಇದೇ ರೀತಿ ಕರ್ನಾಟಕದ ಮುಖ್ಯಮಂತ್ರಿಗಳಾದ ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಅವರು ತಮ್ಮ ತಮ್ಮ ನೆಲೆಯಲ್ಲಿ, ತಮಗೆ ಎದುರಾದ ಸವಾಲುಗಳನ್ನು ಎದುರಿಸಿ ಗುರುತರವಾದ ಸಾಧನೆಯನ್ನು ಮಾಡಿದ್ದಾರೆ.

ಉದಾಹರಣೆಗೆ ದೇವರಾಜ ಅರಸರು ಮುಖ್ಯಮಂತ್ರಿಯಾದ ಸನ್ನಿವೇಶವನ್ನೇ ಗಮನಿಸಿ. ಅರಸರು ಈ ನಾಡಿನ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಮಾಜವಾದಿ ಚಳವಳಿ ಈ ನಾಡಿನಾದ್ಯಂತ ಪಸರಿಸಿತ್ತು. ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಿ, ಎಲ್ಲರಿಗೂ ಸಮಪಾಲು, ಸಮಬಾಳು ಎನ್ನುವ ಕಲ್ಪನೆಯನ್ನು ಮುಂದಿಟ್ಟು ಕೊಂಡ ಮನಸ್ಸುಗಳು ರಾಜಕೀಯ ನೆಲೆಯಲ್ಲಿ ಹೆಚ್ಚಾಗಿದ್ದವು. ಇಂತಹ ಸಂದರ್ಭದಲ್ಲಿ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು, ತಾರತಮ್ಯವನ್ನು ಹೋಗಲಾಡಿಸಲು ಅರಸರು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಈ ಪೈಕಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಉಳುವವನೇ ಹೊಲದೊಡೆಯ ಎಂಬ ಕಾರ್ಯಕ್ರಮ.

ವ್ಯವಸ್ಥೆಯಲ್ಲಿ ಸಂಪತ್ತು ಎಂದರೆ ಭೂಮಿ, ಇಂತಹ ಭೂಮಿ ಉಳ್ಳವರ ಕೈಲಿ ಕೇಂದ್ರೀಕೃತವಾಗಿದೆ. ಹೀಗಾಗಿ ಅಸಮಾನತೆ ಹೆಚ್ಚಾಗಿದೆ ಎಂಬ ವಾದವೇನಿತ್ತು ಇದನ್ನು ಗಂಭೀರವಾಗಿ ಪರಿಗಣಿಸಿದ ದೇವರಾಜ ಅರಸರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾರ್ಯಕ್ರಮವನ್ನು ಜಾರಿಗೆ ತಂದರು.

ಅರಸರ ಈ ಕಾರ್ಯದ ಫಲವಾಗಿ ನಾಡಿನ ಅಸಂಖ್ಯಾತ ಮಂದಿ ಬಡವರು, ಶೋಷಿತರು ಭೂಮಿ ಪಡೆದರು. ಆ ಮೂಲಕ ಜಡಗೊಂಡಿದ್ದ ವ್ಯವಸ್ಥೆಗೆ ಚೈತನ್ಯ ದೊರೆಯಿತು. ಗಮನಿಸಬೇಕಾದ ಸಂಗತಿ ಎಂದರೆ ಕರ್ನಾಟಕದ ನೆಲ ನೆರೆಯ ಆಂಧ್ರಪ್ರದೇಶದಂತೆ ನಕ್ಸಲರ ನೆಲೆಬೀಡು ಆಗದೆ ಹೋದುದಕ್ಕೆ ದೇವರಾಜ ಅರಸರು ಜಾರಿಗೊಳಿಸಿದ ಉಳುವವನೇ ಹೊಲದೊಡೆಯ ಕಾರ್ಯಕ್ರಮ ಮುಖ್ಯ ಕಾರಣ. ಅಂದ ಹಾಗೆ ಈ ರೀತಿ ದೇವರಾಜ ಅರಸರು ಒಂದು ಕಡೆಯಿಂದ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರತೊಡಗಿದರೆ, ಅವರ ಸಚಿವ ಸಂಪುಟದಲ್ಲಿದ್ದ ಬಹುತೇಕ ಸಚಿವರು ಕೂಡ ವ್ಯವಸ್ಥೆಗೆ ಶಕ್ತಿ ತುಂಬುವ ಕೆಲಸ ಮಾಡಿದರು. ಬಿ.ಬಸವಲಿಂಗಪ್ಪನವರ ಒತ್ತಾಸೆಯ ಫಲವಾಗಿ ಮಲಹೊರುವ ಪದ್ಧತಿಯನ್ನು ನಿಷೇಧಿಸಲಾಯಿತು? ಈ ಕಾರ್ಯಕ್ರಮವನ್ನು ಇಡೀ ದೇಶವೇ ನಿಬ್ಬೆರಗಾಗಿ ನೋಡಿತು. ಅರ್ಥಾತ್,ದೇವರಾಜ ಅರಸರು ಹೇಗೆ ವೈಯಕ್ತಿಕ ನೆಲೆಯಲ್ಲಿ ವ್ಯವಸ್ಥೆಯನ್ನು ಭದ್ರಪಡಿಸುವ ಕನಸಿಟ್ಟುಕೊಂಡಿದ್ದರೋ? ಅದೇ ರೀತಿ ಅವರ ಸಚಿವ ಸಂಪುಟದಲ್ಲಿದ್ದ ಬಹುತೇಕ ಸಚಿವರು ಕೂಡ ಅವರ ಉದ್ದೇಶಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದರು.

ಮುಂದೆ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾದ ಸನ್ನಿವೇಶವಿದೆಯಲ್ಲ ಇದ ಸಂಪೂರ್ಣವಾಗಿ ಜಾಗತೀಕರಣದ ತೆಕ್ಕೆಗೆ ಸಿಲುಕಿದ ಕರ್ನಾಟಕ. ಕಳೆದ ಶತಮಾನದ ಅಂತ್ಯದಲ್ಲಿ ಪಿ.ವಿ.ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಗ್ಯಾಟ್ ಒಪ್ಪಂದ ಜಾರಿಯಾಯಿತು. ಇದು ಜಾರಿಗೆ ಬಂದ ನಂತರ ಜಾಗತೀಕರಣ ಎಷ್ಟು ಲಗುಬಗೆಯಿಂದ ದೇಶದೊಳಗೆ ಕಾಲಿಟ್ಟಿತು ಎಂದರೆ,ಕರ್ನಾಟಕವೂಕೂಡ ಅದಕ್ಕೆ ಕೆಂಪು ಹಾಸು ಹಾಕಿ ಸ್ವಾಗತ ಮಾಡಬೇಕಾಯಿತು. ಜಾಗತೀಕರಣದ ಕಾಲಘಟ್ಟದಲ್ಲಿ ಮನುಷ್ಯನ ಮುಖ್ಯ ಗುರಿ ದುಡ್ಡು. ಹೀಗೆ ದುಡ್ಡು ಮಾಡುವುದೇ ಜೀವನದ ಧ್ಯೇಯ ಎಂಬ ವಾತಾವರಣ ಎಷ್ಟು ಬೇಗ ಆವರಿಸಿಕೊಂಡಿತು ಎಂದರೆ ಸಿದ್ದರಾಮಯ್ಯ ಅವರು೨೦೧೩ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗುವ ಕಾಲಕ್ಕೆ ಭದ್ರ ನೆಲೆ ಕಂಡುಕೊಂಡಿತ್ತು.

ಇದಾದ ನಂತರ ಎರಡನೇ ಬಾರಿ ಅಂದರೆ ೨೦೨೩ರಲ್ಲಿ ಮುಖ್ಯಮಂತ್ರಿಯಾಗುವ ಹೊತ್ತಿಗೆ ಅದರ ನೆಲೆ ಭದ್ರವಾಗಿದ್ದಷ್ಟೇ ಅಲ್ಲ, ಈ ಕಾಲಘಟ್ಟದಲ್ಲಿ ವ್ಯವಸ್ಥೆ ದುಡ್ಡಿಲ್ಲದ ಬದುಕನ್ನು ಊಹಿಸಲಾಗದ ಹಂತಕ್ಕೆ ತಲುಪಿತ್ತು. ಇಂತಹ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಡುವ ಅನಿವಾರ್ಯತೆಗೆ ಸಿಲುಕಿದರು. ಅರ್ಥಾತ್,ಒಂದು ಕಡೆ ದುಡ್ಡಿರುವ ಶಕ್ತಿಗಳು ನಿರಾಯಾಸವಾಗಿ ತಲೆ ಎತ್ತಿ ಅಬ್ಬರಿಸುವ ಕಾಲದಲ್ಲಿ ಬದುಕಿಗಾಗಿ ಹಪಹಪಿಸುವ ಮನುಷ್ಯನ ಕಡೆ ನೋಡುವ ಅನಿವಾರ್ಯತೆಗೆ ಮುಖಾಮುಖಿಯಾದರು.

ಹೀಗೆ ತಮಗೆದುರಾದ ಸವಾಲುಗಳಿಗೆ ಮುಖಾಮುಖಿಯಾದ ಅವರು ಐದು ಗ್ಯಾರಂಟಿ ಯೋಜನೆಗಳ ಮೂಲಕ ಈ ರಾಜ್ಯದ ಅಸಂಖ್ಯಾತ ಕುಟುಂಬಗಳಿಗೆ ಶಕ್ತಿ ತುಂಬಿದ್ದು ಸಣ್ಣ ಕೆಲಸವಲ್ಲ. ಏಕೆಂದರೆ, ಜಾಗತೀಕರಣದ ಕಾಲಘಟ್ಟದಲ್ಲಿ ಹಲವರು ಸಾಮಾಜಿಕ ನ್ಯಾಯವನ್ನು ಒಪ್ಪುವುದಿಲ್ಲ. ಬದಲಿಗೆ ಸ್ವಯಂ ಸಾಮರ್ಥ್ಯವೇ ಮನುಷ್ಯನಿಗೆ ಮಾನದಂಡವಾಗಿರಬೇಕು ಎಂಬುದು ಅವರ ವಾದ. ಆದರೆ ಈ ವಾದವನ್ನು ಒಪ್ಪಿದರೆ ವ್ಯವಸ್ಥೆಯನ್ನು ಜಂಗಲ್ ರಾಜ್ ಮಾಡಲು ಒಪ್ಪುವುದೆಂದೇ ಅರ್ಥ. ಏಕೆಂದರೆ ಜಂಗಲ್ ರಾಜ್‌ನಲ್ಲಿ ಬಲಿಷ್ಟ ಪ್ರಾಣಿಗಳು ದುರ್ಬಲ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ. ಆದರೆ ಬಲಿಷ್ಠ ಮನುಷ್ಯ ದುರ್ಬಲ ಮನುಷ್ಯನನ್ನು ಬೇಟೆಯಾಡಿ ಬದುಕುವುದನ್ನು ವಿರೋಽಸುವುದೇ ಸಾಮಾಜಿಕ ನ್ಯಾಯ. ಇಂತಹ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ತಮ್ಮ ಆಡಳಿತವನ್ನು ನಡೆಸಿಕೊಂಡು ಬಂದ ಸಿದ್ದರಾಮಯ್ಯ ಇದೇ ಕಾರಣಕ್ಕಾಗಿ ಇತಿಹಾಸದ ಪುಟಗಳಲ್ಲಿ ಉಳಿಯುತ್ತಾರೆ.

ಕೊನೆಯ ಮಾತು: ದೇವರಾಜ ಅರಸರನ್ನು ಈ ಕಾಲಘಟ್ಟದಲ್ಲಿ ಹುಡುಕಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮುಂದಿನ ದಿನಗಳಲ್ಲಿಸಿದ್ದರಾಮಯ್ಯ ಅವರಂತಹ ನಾಯಕರನ್ನೂ ಹುಡುಕುವುದು ಕಷ್ಟ. ಏಕೆಂದರೆ ಜಾಗತೀಕರಣದ ಜಾಲ ಅದೆಷ್ಟು ಅಪಾಯಕಾರಿಯಾಗಿದೆ ಎಂದರೆ ಅದಾಗಲೇ ವ್ಯವಸ್ಥೆಯಲ್ಲಿ ಜಂಗಲ್ ರಾಜ್‌ನ ಕುರುಹುಗಳು ಸ್ಪಷ್ಟವಾಗಿ ಕಾಣುತ್ತಿವೆ.

” ದೇವರಾಜ ಅರಸರ ದಾಖಲೆಯನ್ನು ಸಿದ್ದರಾಮಯ್ಯ ಅವರು ಮುರಿದ ಈ ಸಂದರ್ಭವನ್ನು ಬಹುತೇಕರು ಸಂಭ್ರಮದಿಂದ ಗಮನಿಸುತ್ತಾರೆ. ಒಬ್ಬ ನಾಯಕ ಸಮರ್ಥರಲ್ಲದೆ ಹೋದರೆ ಇಂತಹ ವಿಶಿಷ್ಟ ದಾಖಲೆ ಮಾಡಲು ಸಾಧ್ಯವಿರಲಿಲ್ಲ ಎನ್ನುತ್ತಾರೆ. ಇಷ್ಟೆಲ್ಲದರ ನಡುವೆಯೂ ನಾವು ಮಾಡಬೇಕಿರುವುದು ಹೋಲಿಕೆಯಲ್ಲ. ಬದಲಿಗೆ ಮುಖ್ಯಮಂತ್ರಿಯಾದವರು ಯಾವ ಸಂದರ್ಭದಲ್ಲಿ ಮುಖ್ಯಮಂತ್ರಿಯಾದರು, ಎಂತಹ ಸವಾಲುಗಳಿಗೆ ಮುಖಾಮುಖಿಯಾದರು, ಎಂಬುದನ್ನು ಗಮನಿಸಬೇಕು. ಇಲ್ಲದಿದ್ದರೆ ನಾವು ಒಬ್ಬರನ್ನು, ಮತ್ತೊಬ್ಬರ ಜತೆ ಹೋಲಿಸುವ ಮೂಲಕ ಇತಿಹಾಸಕ್ಕೆ ಮತ್ತು ವರ್ತಮಾನಕ್ಕೆ ಅಪಚಾರ ಮಾಡುತ್ತೇವೆ. ಏಕೆಂದರೆ ದೇವರಾಜ ಅರಸರು ಈ ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭವೇ ಬೇರೆ, ಅವರು ಎದುರಿಸಿದ ಸವಾಲುಗಳೇ ಬೇರೆ. “

Tags:
error: Content is protected !!