ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಚಿತ್ರವು ಪ್ರತಿಷ್ಠಿತ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದು, ಮತ್ತೊಂದು ಮೈಲಿಗಲ್ಲಿಗೆ ದಾಪುಗಾಲು ಇಟ್ಟಿದೆ. ಇದಷ್ಟೇ ಅಲ್ಲದೆ ಅನುಪಮ ಖೇರ್ ಅವರ ನಿರ್ದೇಶನದ ತನ್ವಿ ದಿ ಗ್ರೇಟ್ ಸಹ ಪಟ್ಟಿಯಲ್ಲಿದೆ ಎನ್ನಲಾಗಿದೆ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಛಾಯಾಗ್ರಹಣ ಸೇರಿದಂತೆ ಪ್ರಮುಖ ಆಸ್ಕರ್ ವಿಭಾಗಗಳಲ್ಲಿ ಪರಿಗಣನೆಗೆ ಒಳಪಟ್ಟಿರುವುದು ಸಂತಸದ ಸಂಗತಿ.
ಈವರೆಗೆ ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಸಿಕ್ಕಿಲ್ಲ. ಈ ಮೊದಲು ‘ಆರ್‍ಆರ್‍ಆರ್’ ಚಿತ್ರದ ನಾಟು ನಾಟು. ಹಾಡು ಆಸ್ಕರ್ ಗೆದ್ದು ದಾಖಲೆ ಬರೆದಿತ್ತು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಸ್‍ನಲ್ಲಿ ಈ ಹಾಡು ಸ್ಥಾನ ಪಡೆದುಕೊಂಡಿತ್ತು. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿ, ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.
ಕಳೆದ ವರ್ಷ ‘ಕಾಂತಾರ-1’ ಹಾಗೂ ‘ಮಹಾವತಾರ್ ನರಸಿಂಹ’ ಚಿತ್ರಗಳು ತೆರೆಕಂಡು ಜನಮನ ಗೆದ್ದಿದ್ದವು. ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ಚಿತ್ರಗಳನ್ನ ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‍ನಲ್ಲಿ ಕಾಣಿಸಿಕೊಂಡ 5 ಭಾರತೀಯ ಚಿತ್ರಗಳಲ್ಲಿ 2 ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ.
98ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಗೆ ಪರಿಗಣಿಸಬಹುದಾದ ವಿಶ್ವದ 201 ಫೀಚರ್ ಫಿಲ್ಮ್‍ಗಳ ಪಟ್ಟಿಯಲ್ಲಿ ಸ್ಯಾಂಡಲ್‍ವುಡ್ ಹೆಮ್ಮೆಯ ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಹಾಗೂ ಅನುಪಮ್ ಖೇರ್ ಅವರ ತನ್ವಿ ದಿ ಗ್ರೇಟ್ ಚಿತ್ರ ಲಿಸ್ಟ್‍ನಲ್ಲಿ ಇದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ರ್ಸ್ ಅಂಡ್ ಸೈನ್ಸಸ್ ಸ್ಪಷ್ಟ ಪಡಿಸಿದೆ. ಎರಡೂ ಭಾರತೀಯ ಸಿನಿಮಾಗಳು ಅಕಾಡೆಮಿಯ ಹೆಚ್ಚುವರಿ ಅರ್ಹತಾ ಮಾನದಂಡಗಳನ್ನು ಪೂರೈಸಿವೆ ಎನ್ನಲಾಗಿದೆ.
ಎರಡು ಸಿನಿಮಾಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಸಿನಿಮಾ ರೇಸ್‍ಗೆ ಪ್ರವೇಶ ಪಡೆದುಕೊಂಡಿದೆ. ರಿಷಬ್ ಅವರು ಕಾಂತಾರ ಸಿನಿಮಾ ನಂತರ ಇಡೀ ದೇಶದ ಮಟ್ಟದಲ್ಲೇ ಮನೆ ಮಾತಾಗಿದ್ದರು. ಕಾಂತಾರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಹ ದಕ್ಕಿತ್ತು. ಸದ್ಯ ಅದರ ಮುಂದಿನ ಭಾಗವಾದ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ವಿದೇಶದ ಮಟ್ಟದಲ್ಲಿ ಸ್ಪರ್ಧಿಸುತ್ತಿರುವುದು ಎಲ್ಲರಲ್ಲೂ ಕುತೂಹಲವನ್ನು ಕೆರಳಿಸಿದೆ.
ಭಾರತಕ್ಕೆ ಸಿಕ್ಕಿಲ್ಲ ಆಸ್ಕರ್
ಇಲ್ಲಿಯವರೆಗೂ ಭಾರತದಲ್ಲಿ ನಿರ್ಮಾಣವಾಗಿರುವ ಯಾವೊಂದು ಸಿನಿಮಾಕ್ಕೂ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಆರ್‍ಆರ್‍ಆರ್ ಸಿನಿಮಾದ ನಾಟು ನಾಟು ಹಾಡಿಗೆ ಮಾತ್ರ ಆಸ್ಕರ್ ಸಿಕ್ಕ ಕಾರಣ ದಾಖಲೆ ಬರೆದಿತ್ತು. ಸದ್ಯ ಮತ್ತೊಂದು ಆಸ್ಕರ್ ಪ್ರಶಸ್ತಿ ದಕ್ಕಿಸಿಕೊಳ್ಳುವ ನಿರೀಕ್ಷೆಯಲ್ಲಿ ಭಾರತೀಯ ಸಿನಿಮಾ ರಂಗ ಎದುರು ನೋಡುತ್ತಿದೆ. ರೇಸ್‍ನಲ್ಲಿ ತನ್ವಿ ದಿ ಗ್ರೇಟ್ ಆಟಿಸಂ ಮತ್ತು ಭಾರತೀಯ ಸೇನೆಯ ಥೀಮ್‍ಗಳನ್ನು ಒಳಗೊಂಡ ಚಿತ್ರ ‘ತನ್ವಿ ದಿ ಗ್ರೇಟ್ ಈ ಸಿನಿಮಾವನ್ನು ಅನುಪಮ್ ಖೇರ್ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿ ಶುಭಾಂಗಿ ನಟಿಸಿದ್ದಾರೆ. ಮೃತ ತಂದೆಯ ಸೇನಾ ಸೇವೆಯಿಂದ ಸ್ಫೂರ್ತಿ ಪಡೆದ ಯುವತಿಯೊಬ್ಬಳು ಅವರ ಹಾದಿಯಲ್ಲೇ ಸಾಗಲು ಬಯಸುವ ಕಥೆ ಇದಾಗಿದೆ.. ಚಿತ್ರದಲ್ಲಿ ಜಾಕಿ ಶ್ರಾಫ್, ಬೋಮನ್ ಇರಾನಿ ಮತ್ತು ಕರಣ್ ಟಕ್ಕರ್ ನಟಿಸಿದ್ದಾರೆ.
ಜನವರಿ 22 ರಿಸಲ್ಟ್ ಹೊರಕ್ಕೆ
ಇದೀಗ ಪ್ರಕಟವಾಗಿರುವ 201 ಚಿತ್ರಗಳ ಪಟ್ಟಿಯಿಂದ ಅಂತಿಮ ನಾಮನಿರ್ದೇಶನಗಳನ್ನು ಜನವರಿ 22 ರಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. ಈ ಮೂಲಕ ಭಾರತೀಯ ಸಿನಿಪ್ರಿಯರಲ್ಲಿ ಆಸ್ಕರ್ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಹೊಂಬಾಳೆ ಅಧಿಕೃತ ಮಾಹಿತಿ
ಈ ಒಂದು ವಿಚಾರವನ್ನ ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಪೇಜ್ ಅಲ್ಲಿಯೇ ಇದನ್ನ ಪೋಸ್ಟರ್ ಸಮೇತ ಹೇಳಿಕೊಂಡಿದೆ. ಹಾಗೆ ಈ ವಿಷಯವನ್ನ ಇಂಗ್ಲಿಷ್ ನಲ್ಲೂ ಬರೆದುಕೊಂಡಿದೆ.
ನಮ್ಮ ಕಾಂತಾರ ಚಾಪ್ಟರನ್ ಒನ್ ನಮ್ಮ ಸಂಸ್ಕøತಿಯಲ್ಲಿ ಬೇರೂರಿರುವ ಹಾಗೂ ದೈವಿಕತೆಯಿಂದ ಪ್ರೇರಿತವಾದ ಕಥೆಯ ಚಿತ್ರವೇ ಆಗಿದೆ.ಈ ಚಿತ್ರ ಆಸ್ಕರ್ (ಅಕಾಡೆಮಿ ಅವಾಡ್ರ್ಸ್) ನ ಅತ್ಯುತ್ತಮ ಚಿತ್ರ ವಿಭಾಗದ ಸ್ಪರ್ಧಾ ಕಣಕ್ಕೆ ಪ್ರವೇಶಿಸಿದೆ. ಇದು ನಮಗೆ ಹೆಮ್ಮೆಯ ವಿಷವೇ ಆಗಿದೆ. ಗೌರವದ ವಿಷಯವೂ ಆಗಿದೆ ಅಂತಲೇ ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ.





