Mysore
21
broken clouds

Social Media

ಶುಕ್ರವಾರ, 02 ಜನವರಿ 2026
Light
Dark

ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

ಕೃಷ್ಣ ಸಿದ್ದಾಪುರ

ಸಿಬ್ಬಂದಿ ಕೊರತೆ, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪನೆ, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆಗ್ರಹ 

ಸಿದ್ದಾಪುರ:ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪಿಸಿ, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣೆಯ ಸರಹದ್ದು ಮಾಲ್ದಾರೆ, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಅಮ್ಮತ್ತಿ, ಮೇಕೂರು ಹೊಸ್ಕೇರಿ, ಹಾಲುಗುಂದ, ಅರೆಕಾಡು ಹೊಸ್ಕೇರಿ, ವಾಲ್ನೂರು, ನೆಲ್ಲಿಹು ದಿಕೇರಿ ಸೇರಿದಂತೆ ೧೦ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು, ಬಹುಪಾಲು ಅರಣ್ಯ ಪ್ರದೇಶ ಹಾಗೂ ಕಾಫಿ ಎಸ್ವೇಟ್‌ಗಳಿಂದ ಕೂಡಿದೆ.

ಅಂದಾಜು ೨೫ರಿಂದ ೩೦ ಸಾವಿರ ಜನಸಂಖ್ಯೆ ಹೊಂದಿರುವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೆನ್ನಯ್ಯನ ಕೋಟೆ ಹಾಗೂ ಪಾಲಿಬೆಟ್ಟದಲ್ಲಿ ೨ ಉಪ ಠಾಣೆಗಳೂ ಇವೆ. ಆದರೆ, ಸಿಬ್ಬಂದಿ ಕೊರತೆಯಿಂದ ಸಂಕಷ್ಟ ಎದುರಾಗಿದೆ. ಪ್ರಸ್ತುತ ಇಬ್ಬರು ಪಿಎಸ್‌ಐಗಳು ಇರಬೇಕಾದ ಠಾಣೆಯಲ್ಲಿ ಒಬ್ಬರು ಪಿಎಸ್‌ಐ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ೫ ಎಎಸ್‌ಐ ಹಾಗೂ ೧೧ ಮಂದಿ ಹೆಡ್ ಕಾನ್ಸ್‌ಟಬಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ೨೪ ಮಂದಿ ಪೊಲೀಸ್ ಕಾನ್ಸ್‌ಟಬಲ್‌ಗಳು ಇರಬೇಕಾದ ಜಾಗದಲ್ಲಿ ಕೇವಲ ೧೬ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಭೆ,ಸಮಾರಂಭ, ಜಾತ್ರೆ, ಟ್ರಾಫಿಕ್ ನಿಯಂತ್ರಣ, ಮಂತ್ರಿ-ಮಹೋದಯರ ಬಂದೋಬಸ್ತ್ ಸೇರಿದಂತೆ ಪ್ರತಿಯೊಂದನ್ನೂ ಇರುವ ಸಿಬ್ಬಂದಿಯೇ ಒತ್ತಡದಲ್ಲಿ ನಿರ್ವಹಿಸಬೇಕಾಗಿದೆ. ಅಂತರ್ ಜಿಲ್ಲಾ ಗಡಿ ಹಂಚಿಕೊಂಡಿರುವ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಪೊಲೀಸ್ ಸಿಬ್ಬಂದಿ ವೈಯಕ್ತಿಕ ರಜೆ ಮೇಲೆ ತೆರಳಿದಾಗ ಮತ್ತಷ್ಟು ಸಮಸ್ಯೆ ಉದ್ಬವಿಸುತ್ತಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಇಲಾಖೆಯನ್ನು ಆಗ್ರಹಿಸಿದ್ದಾರೆ.

ಇದೀಗ ಜಿಲ್ಲೆಯಲ್ಲಿ ಅಡಕೆ, ಕಾಫಿ ಕೊಯ್ಲು ಪ್ರಾರಂಭವಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಗಿಡದಿಂದಲೇ ಫಸಲು ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ರಾತ್ರಿಪಾಳಿಯಲ್ಲಿ ಗಸ್ತು ಹೆಚ್ಚಿಸಲು ಬೆಳೆಗಾರರು ಇಲಾಖೆಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಪಟ್ಟಣದ ೧ ಕಿ.ಮೀ. ವ್ಯಾಪ್ತಿಯಲ್ಲಿ ಮನೆಗೆ ಕನ್ನ ಹಾಕಿದ ಕಳ್ಳನೊಬ್ಬ ನಗದು, ಚಿನ್ನಾಭರಣ ಸೇರಿದಂತೆ ೧೯,೫೫,೦೦೦ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದು, ಸಾರ್ವ ಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ಬ್ರಿಟಿಷರ ಕಾಲದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಸಿದ್ದಾಪುರ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಯಿತು. ೧೯೭೦ರಲ್ಲಿ ಅಂದಿನ ಜನಗಣತಿ ಆಧಾರದಲ್ಲಿ ಸರಹದ್ದು ನಕ್ಷೆ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಪ್ರಸ್ತುತ ಜನಸಂಖ್ಯೆ ಹೆಚ್ಚಳ, ವಾಹನ ದಟ್ಟಣೆಗೆ ಅನುಗುಣವಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವುದು ಅಗತ್ಯವಾಗಿದೆ. ಜೊತೆಗೆ ಠಾಣೆಗೆ ಉತ್ತಮ ಗುಣಮಟ್ಟದ ಕಟ್ಟಡದ ಅವಶ್ಯಕತೆಯೂ ಇದೆ.

” ಸಿದ್ದಾಪುರ ಠಾಣಾ ಸರಹದ್ದು ತುಂಬಾ ಹಳೆಯದಾಗಿದ್ದು, ಪ್ರಸ್ತುತ ನಗರವಾಗಿ ಮಾರ್ಪಟ್ಟಿದೆ. ಪಾಲಿಬೆಟ್ಟ ಹಾಗೂ ಚೆನ್ನಯ್ಯನಕೋಟೆ ಉಪ ಠಾಣೆಗಳನ್ನು ಒಂದುಗೂಡಿಸಿ ಠಾಣೆ ಯಾಗಿ ಮಾರ್ಪಡಿಸಿ, ಮತ್ತಷ್ಟು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದರೆ ಸಮಸ್ಯೆ ಬಗೆಹರಿಸಬಹುದು. ಸಾರ್ವಜನಿಕರು ಕೂಡ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.”

-ಎಂ.ಎಸ್. ವೆಂಕಟೇಶ್, ರಾಜ್ಯ ಎಐಸಿ ಕಾನೂನು ಸಲಹಾ ಸಮಿತಿ ಉಪಾಧ್ಯಕ್ಷರು

” ಕಾಫಿ, ಅಡಕೆ, ಆಭರಣಗಳ ಬೆಲೆ ಜಾಸ್ತಿಯಾಗಿರುವುದರಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಸಿದ್ದಾಪುರ ಠಾಣಾ ಸರಹದ್ದು ತುಂಬಾ ಹಳೆಯ ಕಾಲದ್ದಾಗಿದ್ದು, ಕನಿಷ್ಠ ಮೂರರಿಂದ ನಾಲ್ಕು ಗ್ರಾಮ ಪಂಚಾಯಿತಿಗೆ ಒಂದು ಪೊಲೀಸ್ ಠಾಣೆ ತೆರೆದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಸರ್ಕಾರ ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಸಿಬ್ಬಂದಿಯನ್ನೂ ಹೆಚ್ಚಿಸಬೇಕು.”

-ವಿ.ಕೆ. ಲೋಕೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ತಪಾಸಣಾ ಕೇಂದ್ರಕ್ಕಿಲ್ಲ ಸಿಬ್ಬಂದಿ..!:  ಸಿದ್ದಾಪುರ ಪೊಲೀಸ್ ಠಾಣೆಯು ಅಂತರ್ ಜಿಲ್ಲಾ ಗಡಿಯನ್ನು ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾಲ್ದಾರೆಯಲ್ಲಿ ಪೊಲೀಸ್ ತಪಾಸಣೆ ಕೇಂದ್ರ ತೆರೆಯಲಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಸಿಬ್ಬಂದಿಯನ್ನು ನಿಯೋಜಿಸದೆ ಪಾಳು ಬಿಟ್ಟಿರುವುದು ಕಳ್ಳರಿಗೆ ವರದಾನವಾಗಿದೆ.

Tags:
error: Content is protected !!