ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 14,850 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಿರ್ದೇಶನದಂತೆ ಕೊಡಗು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 18,049ಪ್ರಕರಣಗಳು ವಿಚಾರಣೆಗೆ ಬಾಕಿಯಿತ್ತು. ಅವುಗಳ ಪೈಕಿ 6,361 ಸಿವಿಲ್ ಪ್ರಕರಣಗಳು ಹಾಗೂ 11,688 ಕ್ರಿಮಿನಲ್ ಪ್ರಕರಣಗಳಿದ್ದವು. ಈ ಪ್ರಕರಣಗಳಲ್ಲಿ 5,754 ರಾಜಿಯಾಗಬಹುದಾದ ಪ್ರಕರಣಗಳಾಗಿದ್ದು, ಅವುಗಳ ಪೈಕಿ 3,321 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ರಾಜಿ ಸಂಧಾನಕ್ಕಾಗಿ ತೆಗೆದುಕೊಂಡ ಪ್ರಕರಣಗಳಲ್ಲಿ (ನ್ಯಾಯಾಲಯದಲ್ಲಿ ಬಾಕಿ ಇರುವ) ೨,೫೫೩ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ.
ಇದನ್ನು ಓದಿ: ಜ.5ರಿಂದ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ : ಸಿಎಂ
ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಮತ್ತು ತಾಲ್ಲೂಕು ನ್ಯಾಯಾಲಯಗಳಿಗೆ ಸಂಬಂಽಸಿದಂತೆ ಒಟ್ಟು 06 ದಂಪತಿಗಳು ತಮ್ಮ ವೈವಾಹಿಕ ವಾಜ್ಯಗಳನ್ನು ಬಗೆಹರಿಸಿಕೊಂಡು ಒಂದಾಗಿದ್ದಾರೆ. ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20 ಅವಧಿಯಲ್ಲಿ ದಾಖಲಾಗಿ, ಪಾವತಿಗೆ ಬಾಕಿಯಿರುವ ಪ್ರಕರಣಗಳ ಮೊತ್ತದಲ್ಲಿ ಶೇ.೫೦ರಷ್ಟು ರಿಯಾಯಿತಿಯನ್ನು ನೀಡಿದ್ದು, ಈ ಸಂಬಂಧ ಜಿಲ್ಲೆಯಾದ್ಯಂತ ಒಟ್ಟು ೨೯ ಪ್ರಕರಣಗಳು ಇತ್ಯರ್ಥಗೊಂಡು 4,೦೦,೦೦೦ ರೂ. ಸ್ವೀಕೃತವಾಗಿದೆ.
ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣಗಳು ೨,೫೫೩ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು 12,297 ಸೇರಿದಂತೆ ಒಟ್ಟು 14,850 ಪ್ರಕರಣಗಳು ರಾಜಿ ತೀರ್ಮಾನವಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಸಂಧಾನದ ಒಟ್ಟು ಮೊತ್ತ ರೂ.53,75,54,248 ಗಳಾಗಿವೆ. ಜಿಲ್ಲೆಯಾದ್ಯಂತ ಒಟ್ಟು 14ಪೀಠಗಳು ಕಾರ್ಯನಿರ್ವಹಿಸಿದ್ದವು. ಜಿಲ್ಲೆಯ ಎಲ್ಲಾ ನ್ಯಾಯಾಽಶರುಗಳು, ವಕೀಲರುಗಳು, ಸಿಬ್ಬಂದಿ ವರ್ಗ, ವಿಮಾ ಕಂಪನಿ ಮತ್ತು ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.
ಏನಿದು ಲೋಕ ಅದಾಲತ್?
ಲೋಕ ಅದಾಲತ್ ಎಂದರೆ ಜನತೆಯ ನ್ಯಾಯಾಲಯ. ಹಿಂದೆ ಗ್ರಾಮಗಳಲ್ಲಿ ಹಿರಿಯರು ವ್ಯಾಜ್ಯ ಇತ್ಯರ್ಥಪಡಿಸುತ್ತಿದ್ದ ಮಾದರಿಯ ಪ್ರತಿರೂಪವೇ ಇದು. ಅದಾಲತ್ ಪ್ರಕ್ರಿಯೆ ಅತಿ ಸರಳ. ಇಲ್ಲಿ ವ್ಯಾಜ್ಯ ಏನೇ ಇದ್ದರೂ ರಾಜಿಗೆ ಮೊದಲ ಆದ್ಯತೆ. ನ್ಯಾಯಾಧೀಶರು ಮತ್ತು ನುರಿತ ವಕೀಲರು ಲೋಕ ಅದಾಲತ್ ಪೀಠದಲ್ಲಿ ಕುಳಿತು ವಾದಿ-ಪ್ರತಿವಾದಿಗಳನ್ನು ಕೂರಿಸಿಕೊಂಡು ಅವರ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಬಳಿ ನೇರವಾಗಿ ಬೇಡಿಕೆ ಮುಂದಿಡಬಹುದು. ಇಬ್ಬರ ನಡುವೆ ರಾಜಿ ಏರ್ಪಡಲಿಲ್ಲ ಎಂದರೆ ಪ್ರಕರಣ ಮತ್ತೆ ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳುತ್ತದೆ. ಆದರೆ ರಾಜಿ ಏರ್ಪಟ್ಟರೆ, ಅದಕ್ಕೆ ಇಬ್ಬರೂ ಬದ್ಧವಾಗಿರಲೇಬೇಕು. ಇಬ್ಬರೂ ಒಪ್ಪಿದ ನಂತರ ಕೋರ್ಟ್‌ನ ಮೂಲಕ ಡಿಕ್ರಿ ಜಾರಿಗೊಳಿಸಲಾಗುತ್ತದೆ. ಒಮ್ಮೆ ಡಿಕ್ರಿ ಜಾರಿಗೊಳಿಸಿದರೆ ಅಲ್ಲಿಗೆ ಮುಗಿಯಿತು. ಅದರ ಮೇಲೆ ಮೇಲ್ಮನವಿ ಸಾಧ್ಯವಿಲ್ಲ. ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ದಾವೆ ಹೂಡಿದರೆ ಕೋರ್ಟ್ ಶುಲ್ಕ ನೀಡಬೇಕಾಗುತ್ತದೆ. ಆದರೆ ಲೋಕ ಅದಾಲತ್ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ಶುಲ್ಕ ವಿಧಿಸುವುದಿಲ್ಲ.





