Mysore
29
few clouds

Social Media

ಶನಿವಾರ, 03 ಜನವರಿ 2026
Light
Dark

ಹೆಸರುಘಟ್ಟ ನೈಸರ್ಗಿಕ ಹುಲ್ಲುಗಾವಲು ಸಂರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು ಪ್ರದೇಶಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವರ್ಷದಲ್ಲಿ 10 ಲಕ್ಷ ಜನರಿಗೆ ನೀರು ಪೂರೈಸುವ ಸಾಮರ್ಥ್ಯವಿರುವ ಹೆಸರುಘಟ್ಟ ಕೆರೆಗೆ ಗೃಹ ತ್ಯಾಜ್ಯವಾಗಲೀ, ಕೈಗಾರಿಕಾ ತ್ಯಾಜ್ಯವಾಗಲೀ ಸೇರದಂತೆ ಎಚ್ಚರಿಕೆ ವಹಿಸಬೇಕು, ಅರ್ಕಾವತಿ ನದಿ ಮಲಿನವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ನೈಸರ್ಗಿಕವಾಗಿ ಬೆಳೆದಿರುವ ಹುಲ್ಲುಗಾವಲಿನ ಸಂರಕ್ಷಣೆಯ ಜೊತೆಗೆ ಸಂವರ್ಧನೆಯನ್ನೂ ಮಾಡಬೇಕು, ಸುತ್ತಮುತ್ತಲ ಗ್ರಾಮಗಳ ಜನರ ದನಕರು, ಮೇಕೆ ಮೇಯಲು ಮುಕ್ತ ಅವಕಾಶ ಇರಬೇಕು, ಸ್ಥಳೀಯ ಗ್ರಾಮ ಪಂಚಾಯ್ತಿಗಳ ಮತ್ತು ಸಾರ್ವಜನಿಕರ ಸಹಕಾರ ಪಡೆದು ಈ ಪ್ರದೇಶ ಸಂರಕ್ಷಣೆ ಮಾಡುವಂತೆ ತಿಳಿಸಿದರು.

ಇದನ್ನು ಓದಿ: ಕಾಸರಗೋಡು| ಹಳಿ ದಾಟುವಾಗ ರೈಲು ರಿಕ್ಕಿ: ಕೊಡಗು ಮೂಲದ ಯುವಕ ಸಾವು

ಹುಲ್ಲುಗಾವಲು ಪಕ್ಷಿಗಳ ಸಂತಾನೋತ್ಪತ್ತಿಗೆ ಮಹತ್ವದ ತಾಣಗಳಾಗಿದ್ದು, ಇಲ್ಲಿ ಜಲ ಮೂಲಗಳೂ ಇರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಗೂಡು ಕಟ್ಟಲು ಹೊಳೆ ಮತ್ತಿ ಹಾಗೂ ಆಹಾರಕ್ಕಾಗಿ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಸ್ಥಳೀಯ ಪ್ರಭೇದದ ಮರಗಿಡಗಳನ್ನು ಸುತ್ತಲೂ ಬೆಳೆಸುವಂತೆ ನಿರ್ದೇಶನ ನೀಡಿದರು.

ಸಣ್ಣ ನೀರಾವರಿ ಇಲಾಖೆ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಹೆಸರುಘಟ್ಟ ಪ್ರದೇಶದ ಸಮಗ್ರ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಕೆ ಮಾಡಿಕೊಳ್ಳಲು ಮತ್ತು ಅರಣ್ಯ ಇಲಾಖೆಯಿಂದ ಇದಕ್ಕಾಗಿ ಹಣ ಮೀಸಲಿಡಲು ಕಾರ್ಯಯೋಜನೆ ರೂಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಎಪಿಸಿಸಿಎಫ್ ಕುಮಾರ್ ಪುಷ್ಕರ್, ಬೆಂಗಳೂರು ಡಿಸಿಎಫ್ ರವೀಂದ್ರ ಕುಮಾರ್ ಎನ್.ಮತ್ತಿತರರು ಹಾಜರಿದ್ದರು.

Tags:
error: Content is protected !!