ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಯಲಹಂಕ ಕೋಗಿಲು ಲೇಔಟ್ ಬಳಿ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನೆಲಸಮ ಮಾಡಿದ್ದರು.
ಇದನ್ನು ಓದಿ: ಮೈಸೂರು | ಹೀಲಿಯಂ ಸ್ಫೋಟ ಪ್ರಕರಣ: ಶವಗಾರದಲ್ಲಿ ಮೃತ ಲಕ್ಷ್ಮಿಯ ಕುಟುಂಬಸ್ಥರ ಆಕ್ರಂದನ
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಬೆಂಗಳೂರಿನ ಫಕೀರ್ ಕಾಲೋನಿ ಹಾಗೂ ನಸೀಮ್ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸ ಮಾಡಿದ್ದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿ. ಉತ್ತರ ಭಾರತದಲ್ಲಿ ಸಂಘ ಪರಿವಾರ ಅನುಸರಿಸುತ್ತಿರುವ ಅಲ್ಪಸಂಖ್ಯಾತ ವಿರೋಧಿ ಆಕ್ರಮಣಕಾರಿ ರಾಜಕೀಯದ ಮತ್ತೊಂದು ಆವೃತ್ತಿಯನ್ನು ಕರ್ನಾಟಕದಲ್ಲಿಯೂ ಕಾಣಬಹುದು ಎಂದು ಸಿಟ್ಟು ಹೊರಹಾಕಿದ್ದಾರೆ.
ಕೊರೆಯುವ ಚಳಿ ಇರುವಾಗಲೇ ಇವರನ್ನು ಹೊರದಬ್ಬಲಾಗಿದೆ. ಉತ್ತರ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ಈಗ ದಕ್ಷಿಣಕ್ಕೂ ಬಂದಿದೆ. ಈ ಕ್ರಮವನ್ನು ಕಾಂಗ್ರೆಸ್ ಸರ್ಕಾರ ಯಾವ ರೀತಿ ಸಮರ್ಥಿಸಿಕೊಳ್ಳುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.





