ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ ತಿಳಿದ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ಬಡ ಕುಟುಂಬದ ಬದುಕಿಗೆ ಆಸರೆಯಾಗಿದ್ದ ಲಕ್ಷ್ಮಿ, ಸೀರೆ ಕುಚ್ ಹಾಕಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದಳು. ತಮ್ಮ ದುಡಿಮೆಯಿಂದ ಕುಟುಂಬಕ್ಕೆ ನೆರವಾಗುತ್ತಾ, ಏಕೈಕ ಪುತ್ರಿ ಡಿಂಪಲ್‌ಳ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದರು. ಮಗಳಿಗೆ ಎರಡು ದಿನ ರಜೆ ಇರುವ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇನ್ನೂ ತಾಯಿಯ ಸಾವಿನ ವಿಷಯ ಡಿಂಪಲ್‌ಗೆ ತಿಳಿದಿಲ್ಲ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಡಿಂಪಲ್ ಓದಿನಲ್ಲಿ ರ್ಯಾಂಕ್ ಸ್ಟೂಡೆಂಟ್ ಆಗಿದ್ದು, ಆಕೆಯ ಶಿಕ್ಷಣ ಹಾಗೂ ಭವಿಷ್ಯವೇ ಇದೀಗ ಕುಟುಂಬದ ದೊಡ್ಡ ಚಿಂತೆಯಾಗಿದೆ.
ಘಟನೆಯ ವೇಳೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆಯೇ ಸ್ಫೋಟ ಸಂಭವಿಸಿದ್ದು, ನಿರಪರಾಧಿಗಳು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಮುಂದೆ ಬಂದು ಮೃತ ಲಕ್ಷ್ಮಿಯ ಏಕೈಕ ಪುತ್ರಿ ಡಿಂಪಲ್‌ನ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಮಗಳ ಶಿಕ್ಷಣ ಹಾಗೂ ಭವಿಷ್ಯವನ್ನು ಸರ್ಕಾರವೇ ಹೊಣೆವಹಿಸಿ ನೆರವು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ದುರ್ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜೊತೆಗೆ, ಬಾಧಿತ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.





