Mysore
24
haze

Social Media

ಶನಿವಾರ, 03 ಜನವರಿ 2026
Light
Dark

ರಾಜ್ಯದಲ್ಲಿ ಬೆಳಗಿನ ವೇಳೆ ದಟ್ಟ ಮಂಜು: ಹವಾಮಾನ ತಜ್ಞರು ಹೇಳಿದ್ದಿಷ್ಟು.!

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ ದಟ್ಟವಾದ ಮಂಜು ಕವಿಯುತ್ತಿರುವುದರಿಂದ ವಾಹನ ಸವಾರರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ತಜ್ಞರು ಸಲಹೆ ಮಾಡಿದ್ದಾರೆ.

ಡಿಸೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದ್ದು, ಕನಿಷ್ಠ ತಾಪಮಾನ ಹೆಚ್ಚು ಕಡಿಮೆ ಇದೇ ರೀತಿ ಮುಂದುವರೆಯಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕನಿಷ್ಠ ತಾಪಮಾನ 10 ರಿಂದ 12 ಡಿಗ್ರಿ ಸೆಲ್ಸಿಯಸ್‌, ದಕ್ಷಿಣ ಒಳನಾಡಿನಲ್ಲಿ 12 ರಿಂದ 14 ಡಿ.ಸೆಂ. ಹಾಗೂ ಕರಾವಳಿ ಭಾಗದಲ್ಲಿ 19 ರಿಂದ 20 ಡಿ.ಸೆಂ. ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಇನ್ನೂ ಐದಾರು ದಿನಗಳ ಕಾಲ ಇದೇ ರೀತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14 ರಿಂದ 15 ಡಿ.ಸೆಂ. ನಷ್ಟು ಕಂಡುಬರುತ್ತಿದೆ. ರಾಜ್ಯದ ಕೆಲವೆಡೆ ಬೆಳಗಿನ ವೇಳೆ ದಟ್ಟವಾದ ಮಂಜು ಆವರಿಸುತ್ತಿದೆ. ಡಿಸೆಂಬರ್‌ನಲ್ಲಿ ಬೆಳಗಿನ ವೇಳೆ ಬಹುತೇಕ ಕಡೆಗಳಲ್ಲಿ ಮಂಜು ಕವಿಯುವುದು ಸರ್ವೆ ಸಾಮಾನ್ಯವಾಗಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಶೀತ ಗಾಳಿ ಮತ್ತು ದಟ್ಟವಾದ ಮಂಜು ಚಳಿಗಾಲದಲ್ಲಿ ಕಂಡುಬರುತ್ತಿರುವುದು ಅಚ್ಚರಿ ಎನಿಸಿದರೂ ಇದು ನಿಸರ್ಗದತ್ತ ಸಹಜ ಪ್ರಕ್ರಿಯೆಯಾಗಿದೆ. ಉತ್ತರ ಭಾರತದ ಬಯಲುಸೀಮೆಯಲ್ಲಿ ಸಾಮಾನ್ಯವಾಗಿ ಇಂತಹ ವಾತಾವರಣ ಕಂಡುಬರುವುದು ವಾಡಿಕೆ. ಆದರೆ ಉಷ್ಣವಲಯವಾದ ಬೆಂಗಳೂರಿನಲ್ಲಿ ಶೀತಗಾಳಿ, ದಟ್ಟ ಮಂಜು ಕಂಡುಬರುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇದು ಅಸಹಜ ಪ್ರಕ್ರಿಯೆ ಅಲ್ಲ. ಇದು ವಾತಾವರಣದ ಸಹಜ ಪ್ರಕ್ರಿಯೆಯಾಗಿದೆ. ಪ್ರಕೃತಿಯು ಭೌತಿಕ ತತ್ವಗಳನ್ನು ಚಾಚೂ ತಪ್ಪದೇ ಅನುಸರಿಸುತ್ತಿದೆ. ಹೀಗಾಗಿ ಮೇಲ್ನೋಟಕ್ಕೆ ಅಚ್ಚರಿ ಎನ್ನಿಸುತ್ತಿದೆ. ಹಗಲಿನಲ್ಲಿ ನಿರ್ಮಲವಾದ ಆಕಾಶವಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ರಾತ್ರಿ ವೇಳೆಯಷ್ಟೇ ತೀವ್ರ ತರವಾಗಿ ವಾತಾವರಣ ತಂಪಾಗುತ್ತದೆ. ಇದರಿಂದ ಚಳಿ ಹೆಚ್ಚಿರುವುದಲ್ಲದೆ ಇಬ್ಬನಿಯೂ ಸಾಕಷ್ಟು ಬೀಳುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

Tags:
error: Content is protected !!