ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ ನೇತೃತ್ವದಲ್ಲಿ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ತಂಡವು ಉಪಮುಖ್ಯ ಇಂಜಿಯರಿಂಗ್ ಹಾಗೂ ಸಿಬ್ಬಂದಿಯನ್ನು ಒಳಗೊಂಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕೆಲಸ ನಿರ್ವಹಿಸಲಿದೆ. ರಾಮನಗರದಲ್ಲೇ ಮೇಕೆದಾಟು ಯೋಜನೆ ಕಚೇರಿ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.
ನವೆಂಬರ್.18ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಒಂದು ಮುಖ್ಯ ಇಂಜಿನಿಯರ್ ಕಚೇರಿ ಹಾಗೂ ಒಂದು ಅಧೀಕ್ಷಕ ಇಂಜಿನಿಯರ್ ಕಚೇರಿಯನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಹೊಸದಾಗಿ ಕಚೇರಿ ಸ್ಥಾಪನೆ ಹಾಗೂ ಹುದ್ದೆಗಳ ನೇಮಕಕ್ಕೆ ಆರ್ಥಿಕ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಇದಕ್ಕೆ ಬಹಳಷ್ಟು ಸಮಯಾವಕಾಶ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಯೋಜನೆ ಜಾರಿಯ ಜವಾಬ್ದಾರಿಯನ್ನು ಕೆಇಆರ್‌ಎಸ್ ನಿರ್ದೇಶಕರಿಗೆ ವಹಿಸಿದೆ.





