Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮಂಡ್ಯಕ್ಕೆ ನನ್ನ ಕೊಡುಗೆ ಹೇಳುತ್ತೇನೆ, ನಿಮ್ಮ ಕೊಡುಗೆ ಪಟ್ಟಿ ಕೊಡಿ: ಸಿಎಂ ಸಿದ್ದುಗೆ ಎಚ್‌ಡಿಕೆ ಸವಾಲು

ನವದೆಹಲಿ: ಕುಮಾರಸ್ವಾಮಿ ಮಂಡ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ನಾನು ಕೊಟ್ಟಿದ್ದನ್ನು ಪಟ್ಟಿ ಮಾಡಿ ಹೇಳುತ್ತೇನೆ. ಮೊದಲು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ, ಈಗ ಏನೇನು ಕೊಟ್ಟಿದ್ದೀರಿ ಎಂಬುದನ್ನು ಹೇಳಿ ಎಂದು ಸವಾಲು ಹಾಕಿದ್ದಾರೆ.

ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೊಟ್ಟಿದ್ದನ್ನು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ.. ನೀವು ರೈತರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಹೇಳಿ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ಹಿಂದಿನ ಐದು ವರ್ಷ ಆಡಳಿತದಲ್ಲಿ 200ಕ್ಕೂ ಹೆಚ್ಚು ರೈತರು ಮಂಡ್ಯದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಮ್ಮ ಕೊಡುಗೆ. ಅಂಥ ಕಷ್ಟಕಾಲದಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ ಅದೇ ಜಿಲ್ಲೆಯ ರೈತರ 900 ಕೋಟಿ ಸಾಲ ಮನ್ನಾ ಮಾಡಿದೆ. ಇದಕ್ಕಿಂತ ಕೊಡುಗೆ ಬೇಕಾ? ನಿಮ್ಮ ಕಾಲದಲ್ಲಿ ರೈತರ ಜೀವ ಹೋಯಿತು, ನನ್ನ ಕಾಲದಲ್ಲಿ ಜೀವ ಉಳಿಯಿತು. ಇದು ನಿಮಗೆ ಗೊತ್ತಿರಲಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ನೋಡಿ. ಪ್ರವಾಹ, ಮಳೆಯಲ್ಲಿ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ನೀವು ಮೋಜು ಮಸ್ತಿ ಮಾಡುತ್ತಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆಗಾರರ ಪರಿಸ್ಥಿತಿ ಏನಾಗಿದೆ? ತೊಗರಿ ದರ ಕುಸಿದಿದೆ. ಅದಕ್ಕೆ ಏನು ಮಾಡಿದ್ದೀರಿ? ಈವರೆಗೆ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಸರಿಯಾದ ಸಮಯದಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಿ ರೈತರ ನೆರವಿಗೆ ಬರಬೇಕಿತ್ತು, ಬಂದಿಲ್ಲ ಯಾಕೆ? ಕೇಂದ್ರ ಸರಕಾರ ರಾಜ್ಯಕ್ಕೆ ಪರಿಶೀಲನಾ ತಂಡ ಕಳುಹಿಸಿ ಎನ್ನುತ್ತಾರೆ. ನಾಲ್ಕು ತಿಂಗಳ ಬಳಿಕ ಇವರಿಗೆ ಜ್ಞಾನೋದಯ ಆಗಿದೆ. ಈಗ ಕೇಂದ್ರ ತಂಡ ರಾಜ್ಯಕ್ಕೆ ಬಂದರೆ ಏನು ವರದಿ ಕೊಡುತ್ತಾರೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ʼನೀರಿನ ಹೆಜ್ಜೆʼ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಯಾರೋ ಬರೆದಿರುವ ಆ ಪುಸ್ತಕ ಕೇವಲ ಕಟ್ ಅಂಡ್ ಪೇಸ್ಟ್ ಅಷ್ಟೇ. ಬೇರೆ ಯಾವುದೋ ಪುಸ್ತಕದಲ್ಲಿ ಬರೆದಿರುವುದನ್ನೇ ಕತ್ತರಿಸಿ ಈ ಪುಸ್ತಕದಲ್ಲಿ ಅಂಟಿಸಿದ್ದಾರೆ! ನನಗೆ ಈ ಪುಸ್ತಕವನ್ನು ಯಾರೋ ತಂದುಕೊಟ್ಟರು. ಸಾಮಾನ್ಯವಾಗಿ ಯಾವುದೇ ಪುಸ್ತಕವಾದರೂ ಅದನ್ನು ಆಸಕ್ತಿಯಿಂದ ಓದುತ್ತೇನೆ. ಆದರೆ, ಈ ಪುಸ್ತಕ ನೋಡಿದಾಗ ಇಲ್ಲಿರುವುದು ಅವರ ಹೆಜ್ಜೆಗಳಲ್ಲ, ಯಾರದೋ ಹೆಜ್ಜೆಗಳನ್ನು ನನ್ನ ಹೆಜ್ಜೆಗಳು ಎಂದು ತೋರಿಸುವ ಕಸರತ್ತು ಮಾಡಿದ್ದಾರೆ ಎಂದು ಹೇಳಿದರು.

ಮೇಕೆದಾಟು ಯೋಜನೆ ಬಗ್ಗೆ ಜನರನ್ನು ಯಾಮಾರಿಸುವುದಕ್ಕೆ ನಮ್ಮ ನೀರು- ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಆ ಹೆಸರಿನಲ್ಲಿ ಅವರು ಅಧಿಕಾರಕ್ಕೆ ಬಂದರು. ಮೇಕೆದಾಟು ಮಾತ್ರ ಇದ್ದಲ್ಲಿಯೇ ಇದೆ. ಸುಪ್ರೀಂ ಕೋರ್ಟ್ ಕೇಂದ್ರಿಯ ಜಲ ಆಯೋಗದ (CWC) ಹೋಗಿ ವಾದ ಮಂಡಿಸಿ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವವರು ಇವರು ರಾಜಕೀಯ ಪಾರ್ಟನರ್ʼಗಳೇ ಆಗಿದ್ದಾರೆ. ಇವರು ಹೋಗಿ ಕುಳಿತು ಮಾತನಾಡಬೇಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇದನ್ನು ಓದಿ: ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ: ಅಕ್ರಮ ಪತ್ತೆಗೆ ಎಸ್‌ಐಟಿ ರಚಿಸಿ ಎಂದ ಸಿ.ಟಿ.ರವಿ

ಮೇಕೆದಾಟು ಪ್ರದೇಶದಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಅರಣ್ಯ ಮುಳಗಡೆ ಆಗುತ್ತದೆ. ವನ್ಯ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಬರೀ ಕೇಂದ್ರ ಸರಕಾರದ ಅಧಿಕಾರ ಮಾತ್ರವಲ್ಲ, ರಾಜ್ಯ ಸರಕಾರಕ್ಕೂ ಹಕ್ಕು, ಜವಾಬ್ದಾರಿ ಇರುತ್ತದೆ. ಪಲಾಯನ ಮಾಡುವ ಅಗತ್ಯವಿಲ್ಲ, ಇನ್ನೆಷ್ಟು ದಿನ ನುಣುಚಿಕೊಳ್ಳುತ್ತೀರಿ? ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಮೀರಿದೆ. ಅದರಲ್ಲಿ 50 ವರ್ಷಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದೆ. ಆಗ ಮೇಕೆದಾಟು ಬಗ್ಗೆ ಏನು ಮಾಡಿದಿರಿ ಎಂದು ಜನರಿಗೆ ಹೇಳಬೇಕಲ್ಲವೇ? ಎಂದು ರಾಜ್ಯ ಸರಕಾರವನ್ನು ಕೇಂದ್ರ ಸಚಿವರು ಪ್ರಶ್ನಿಸಿದರು.

ಮಾತೆತ್ತಿದರೆ ರಾಜ್ಯಕ್ಕೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯ ಸರಕಾರ ಮಾಡುತ್ತಿರುವುದೇನು? ನಾನು ಕೇಂದ್ರ ಸಚಿವನಾದ ಕೂಡಲೇ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕುದುರೆಮುಖ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ದೇವದಾರಿ ಗಣಿ ಯೋಜನೆಗೆ ಹಣಕಾಸು ಖಾತರಿ ನೀಡುವ ಕಡತಕ್ಕೆ ಸಹಿ ಹಾಕಿದೆ. ಮರು ದಿನದಿಂದಲೇ ಅದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಯಿತು. ಈಗ ಅವರ ಪಕ್ಷದ ಜನಪ್ರತಿನಿಧಿ ಒಬ್ಬರು ಬಳ್ಳಾರಿಯಲ್ಲಿ ದಿನನಿತ್ಯ ಪ್ರತಿಭಟನೆ ಮಾಡಿಸುವ, ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮಗೆ ವೈಯಕ್ತಿಕವಾಗಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್ಎಂಡಿಸಿ)ದಿಂದ ಲಾಭವಾಗುವ ಕೆಲಸ ಆಗಲಿಲ್ಲ ಎಂದು ಯೋಜನೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಸಹಕಾರ ಪಡೆಯುವುದು, ಕೊಡುವುದು ಎಂದರೆ ಹೀಗೇನಾ? ಎಂದು ಸಚಿವ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

Tags:
error: Content is protected !!