ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಪುರಾವೆ ಇಲ್ಲದೆ ರಾಜಕೀಯ ಪಕ್ಷ, ಮುಖಂಡರ ಮೇಲೆ ತನಿಖೆ ಮಾಡುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪಬ್ಲಿಕ್ ಟ್ರಸ್ಟ್. ಅದನ್ನು ಪ್ರೈವೆಟ್ ಟ್ರಸ್ಟ್ ಮಾಡಿಕೊಂಡು ಆಸ್ತಿ ಲಪಟಾಯಿಸಿದ್ದಾರೆ. ಆ ವಿಚಾರವಾಗಿ ತನಿಖೆಗೆ ಬರಲು ಹೇಳಿದ್ದಾರೆ. ಡಿಕೆಶಿ ಅವರು ನೊಟೀಸ್ ಕೊಟ್ಟಿರೋದಕ್ಕೆ ಕಿರುಕುಳ ಅಂದಿರುವುದು ಮೂರ್ಖತನದ ಪರಮಾವಧಿ ಎಂದು ಅಪಹಾಸ್ಯ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್, ಪೊಜೆಕ್ಟರ್ ಖರೀದಿ ಅಕ್ರಮ, ಲೋಕಾಯುಕ್ತ ದಾಳಿ ವಿಚಾರಕ್ಕೆ ಉತ್ತರಿಸಿದ ಅವರು, ಇದರ ಬಗ್ಗೆ ನಾವು ಸದನದಲ್ಲಿ ಚರ್ಚೆ ಮಾಡುತ್ತೇವೆ. ಆ ಪುಣ್ಯಾತ್ಮ ಶಿಕ್ಷಣ ಸಚಿವರಿಗೆ ಯಾರು ಮಾಹಿತಿ ನೀಡುತ್ತಿದ್ದಾರೋ ಗೊತ್ತಿಲ್ಲ, ಏನೇನೋ ಮಾತನಾಡುತ್ತಾರೆ ಎಂದು ಗುಡುಗಿದರು.
ಎಚ್‌ಡಿಕೆ ಮನುವಾದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ಬಗ್ಗೆ ಏನು ಹೇಳಿದ್ದಾರೋ ಅದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಡುತ್ತಾರೆ. ಇದು ಜನ ವಿರೋಧಿ ಸರ್ಕಾರ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಇನ್ನು ಬೆಳಗಾವಿಯಲ್ಲಿ ಡಿಸೆಂಬರ್ 9ರಂದು ಸುಮಾರು 15 ರಿಂದ 20 ಸಾವಿರ ರೈತರ ಜೊತೆಗೆ ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.





