ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರು ಕಳೆದ ಕೆಲವು ದಿನಗಳಿಂದ ಕ್ರೀಡಾ ರಾಜಧಾನಿಯಾಗಿದೆ. ನಮ್ಮ ಪ್ರಧಾನಮಂತ್ರಿಗಳ ಆಶಯದಂತೆ ನಿರಂತರವಾಗಿ ಕ್ರೀಡಾ ಸ್ಪರ್ಧೆ ಆಯೋಜಿಸುತ್ತಿದ್ದು, ಇಂದು ನಡೆದ ಹಗ್ಗ-ಜಗ್ಗಾಟ ಯಶಸ್ಸಿನ ಜತೆಗೆ ಆಕರ್ಷಣೆ ಪಡೆದಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಓವಲ್ ಗೌಂಡ್‌ನಲ್ಲಿ ಸಂಸದರ ಕ್ರೀಡಾ ಮಹೋತ್ಸವದ ‘ಫಿಟ್ ಯುವ ಫಾರ್ ವಿಕಸಿತ ಭಾರತ’ದ ಯೋಜನೆಯಡಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟ ಕ್ರೀಡೆ ಉದ್ಘಾಟಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಹಳ್ಳಿ ಸೊಗಡಿನ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಇಷ್ಟೊಂದು ಜನರು ಭಾಗವಹಿಸಿರುವುದು ಖುಷಿ ತಂದಿದ್ದು, ಇದೊಂದು ಕ್ರೀಡಾಸಂಗಮ ಎಂದು ಯದುವೀರ್ ತಿಳಿಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಚಂದ್ರಕಲಾ ಮಾತನಾಡಿ, ಈ ರೀತಿಯ ಪಂದ್ಯಗಳು ಆಯೋಜನೆಗೊಂಡಿದ್ದು ಸಂತಸ ತಂದಿದೆ ಎಂದು ಸಂತಸ ಹಂಚಿಕೊಂಡರು.
ಮೈಸೂರು 263 ಪೊಲೀಸ್ ತಂಡದ ಶಿವಕುಮಾರ್, ಇಂಥ ಕ್ರೀಡಾಕೂಟಗಳು ನಿರಂತರವಾಗಿ ನಡೆದರೆ ಸ್ಥಳೀಯ ಪ್ರತಿಭೆಗಳಿಗೆ” ಅವಕಾಶ ದೊರಕುತ್ತದೆ ಎಂದು ತಿಳಿಸಿದರು.
ಇದನ್ನು ಓದಿ : 2030ರೊಳಗೆ ಎಚ್‌ಐವಿ ನಿರ್ಮೂಲನೆಗೆ ಗುರಿ : ಸಚಿವ ದಿನೇಶ್ ಗುಂಡೂರಾವ್
ಸಂಸದ ಯದುವೀರ್ ಒಡೆಯರ್ ಅವರ ನೇತೃತ್ವದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರಿಯಲಿ ಎಂದು ಮೈಸೂರು ಪ್ಯಾಂಥರ್ಸ್‌ನ ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಂದ್ಯಾವಳಿಯಲ್ಲಿ 35ಕ್ಕೂ ಹೆಚ್ಚು ತಂಡಗಳು ಹಾಗೂ 300ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ, ಹಾಗೂ ನಿಖಿಲೇಶ್, ಕೇಬಲ್ ಮಹೇಶ್, ದಿನೇಶ್ ಗೌಡ, ರಾಕೇಶ್ ಭಟ್, ಪೈಲ್ವಾನ್ ರವಿ, ಗೋಪಾಲ್ ಅರಸು ಉಪಸ್ಥಿತರಿದ್ದರು.
ಬಹುಮಾನ ವಿಜೇತರು :
ಪುರುಷರ ವಿಭಾಗ
560 ಕೆಜಿಗಿಂತ ಕಡಿಮೆ ವಿಭಾಗದಲ್ಲಿ ಮೈಸೂರು ಪ್ಯಾಂಥರ್ಸ್ ಪ್ರಥಮ, ಯದುವೀರ್ ಬ್ರಿಗೇಡ್ ದ್ವಿತೀಯ ಸ್ಥಾನ ಪಡೆಯಿತು. 640 ಕೆಜಿಗಿಂತ ಕಡಿಮೆ ವಿಭಾಗದಲ್ಲಿ ಫೈರ್ ಫೈಟರ್ಸ್ ಪ್ರಥಮ, ಮೈಸೂರು ಸಿಟಿ ಪೊಲೀಸ್ ತಂಡ ಎರಡನೇ ಸ್ಥಾನ ಗಳಿಸಿದೆ. 720 ಕೆಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಮೈಸೂರು ಟೈಗರ್ ಪ್ರಥಮ, ಸಿಎಫ್‌ಒ ಝನ್ ಮೈಸೂರು ಫೈರ್ ಎರಡನೇ
ಸ್ಥಾನ ಗಿಟ್ಟಿಸಿಕೊಂಡಿದೆ.
ಮಹಿಳೆಯರ ವಿಭಾಗ
500 ಕೆಜಿ ಗಿಂತ ಕಡಿಮೆ ವಿಭಾಗದಲ್ಲಿ ಮಾರಮ್ಮಕೊಡಗು ತಂಡ, ಮೈಸೂರು ಬಿಜೆಪಿ ಮಹಿಳಾ ಮೋರ್ಚಾ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದವು. 540 ಕೆಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಕೂರ್ಗ್ ವಿಂಗ್ಸ್ ಪ್ರಥಮ ಹಾಗೂ ರೈನ್ ಬೋ ವಾರಿಯರ್ಸ್ ತಂಡ ಎರಡನೇ ಸ್ಥಾನ ಪಡೆಯಿತು. ಪ್ರತಿ ವಿಭಾಗದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ, ಪದಕ, ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.





