Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಹೆಡತಲೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ : ಬೆಚ್ಚಿ ಬಿದ್ದ ಶಿಕ್ಷಕಿ

ಹೆಡತಲೆ : ಬೈಕಿನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿಕ್ಷಕಿ ಬೆಚ್ಚಿಬಿದ್ದು, ಗ್ರಾಮಸ್ಥರು ಆತಂಕಗೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಸರ್ಕಾರಿ ಶಾಲೆ ಶಿಕ್ಷಕಿ ದೇವಿಕ ಎಂಬವರು ಬೆಳಗಿನ ತರಗತಿ ನಿಮಿತ್ತ ಬದನವಾಳು, ಬಸವಟ್ಟಿಗೆ ಗ್ರಾಮದ ಮೂಲಕ ಹೆಡತಲೆ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗ್ರಾಮದ ತುಸು ದೂರದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಹುಲಿ ಅಡ್ಡಲಾಗಿ ಬಂದ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ.

ತಕ್ಷಣವೇ ರೈತ ಸಂಘದವರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ, ಪಿಡಿಒ ರಾಜಶೇಖರ್ ಬೇವಿನಹಳ್ಳಿ ಗ್ರಾಮದಲ್ಲಿ ಟಾಮ್‌ಟಾಮ್ ಹಾಕಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ನಂಜನಗೂಡಿನ ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಸತೀಶ್ ಮತ್ತು ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಚರಣೆ ನಡೆಸಿದ್ದಾರೆ. ಹುಲಿ ಕಾಣಿಸಿಕೊಂಡಿರುವ ಸ್ಥಳದಲ್ಲಿ ಏಳು ಕ್ಯಾಮೆರಾಗಳನ್ನು ಅಳವಡಿಸಿ ಹುಲಿ ಚಲನವಲನದ ಬಗ್ಗೆ ನಿಗಾ ವಹಿಸಿದ್ದಾರೆ.

Tags:
error: Content is protected !!