Mysore
21
broken clouds

Social Media

ಸೋಮವಾರ, 26 ಜನವರಿ 2026
Light
Dark

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ದಾಖಲೆ ಮಟ್ಟದ ಹುಂಡಿ ಸಂಗ್ರಹ

ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಕೈಗೊಂಡ ಹುಂಡಿ ಎಣಿಕೆ ಕಾರ್ಯದಲ್ಲಿ ಈ ಬಾರಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹಣೆ ನಡೆದಿದೆ. 40 ದಿನಗಳ ಅವಧಿಗೆ ತೆರೆಯಲಾದ ಹುಂಡಿಗಳಲ್ಲಿ ಒಟ್ಟು 3,02,63,795 ಮೊತ್ತ ಸಂಗ್ರಹವಾಗಿದ್ದು, ಇದು ಹಿಂದಿನ ಅವಧಿಗಳಿಗಿಂತ ಹೆಚ್ಚಿನ ವೃದ್ಧಿಯನ್ನು ದಾಖಲಿಸಿದೆ.

ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು, ವಿಶೇಷ ಪೂಜೆಗಳ ಸಡಗರ ಮತ್ತು ಹಬ್ಬದ ದಿನಗಳಲ್ಲಿ ಭಕ್ತರ ದಟ್ಟಣೆ ಗಣನೀಯವಾಗಿ ಏರಿರುವುದು ಈ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಈ ಬಾರಿ ಕಂಡುಬಂದ ಮತ್ತೊಂದು ವಿಶೇಷ ಅಂಶವೆಂದರೆ ದೇವಾಲಯಕ್ಕೆ ದೇಶ-ವಿದೇಶಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿರುವುದು. ಹುಂಡಿ ಎಣಿಕೆ ವೇಳೆ ಇಂಗ್ಲೆಂಡ್, ಸ್ವೀಡನ್, ಸಿಂಗಪುರ, ಕುವೈತ್, ನೇಪಾಳಿ, ಮಲೇಶಿಯಾ, ಅಮೇರಿಕಾ, ಭೂತಾನ್, ತೈವಾನ್ ದೇಶಗಳ ವಿವಿಧ ಮೌಲ್ಯದ ಕರೆನ್ಸಿಗಳು ಪತ್ತೆಯಾಗಿದ್ದು, ದೇವಾಲಯದ ಅಂತರರಾಷ್ಟ್ರೀಯ ಖ್ಯಾತಿಯು ದಿನೇ ದಿನೇ ವಿಸ್ತರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ದೇವಾಲಯದ ಆರ್ಥಿಕ ಚಟುವಟಿಕೆಗೆ ಹೊಸ ಒತ್ತು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ತಿರುಪತಿಯಲ್ಲಿ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ 129.45 ಕೋಟಿ ಹಣ ಸಂಗ್ರಹ

ಕಾಣಿಕೆಯ ರೂಪದಲ್ಲಿ ಬಂದಿರುವ ಆಭರಣಗಳು ಸಹ ಗಮನ ಸೆಳೆದಿವೆ. ಈ ಅವಧಿಯಲ್ಲಿ 82 ಗ್ರಾಂ ಚಿನ್ನ ಹಾಗೂ 2 ಕೆಜಿ 680 ಗ್ರಾಂ ಬೆಳ್ಳಿ ಕಾಣಿಕೆಯಾಗಿದ್ದು, ದೇವಾಲಯದ ಭಂಡಾರಕ್ಕೆ ಇದು ಮಹತ್ವದ ಸೇರ್ಪಡೆ ಆಗಲಿದೆ. ದೇವಾಲಯದಲ್ಲಿ ಒಟ್ಟು 20 ಕ್ಕೂ ಹೆಚ್ಚು ಹುಂಡಿಗಳನ್ನು ತೆರೆಯುವ ಮೂಲಕ ವಿಶಿಷ್ಟ ಭದ್ರತಾ ವ್ಯವಸ್ಥೆಯೊಳಗೆ ಎಣಿಕೆ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ದೇವಾಲಯದ ಸಿಬ್ಬಂದಿ, ಸ್ಥಳೀಯ ಸ್ವಯಂಸೇವಕರು ಮತ್ತು ಬ್ಯಾಂಕ್ ಪ್ರತಿನಿಧಿಗಳ ಸಮ್ಮುಖದಲ್ಲಿ ಕ್ರಮಬದ್ಧವಾಗಿ ಈ ಕಾರ್ಯ ನಡೆದಿದೆ.

ದೇವಾಲಯದ ಸಂಗ್ರಹಣೆಯ ಈ ಹೆಚ್ಚಳವು ಭಕ್ತರ ನಂಬಿಕೆ, ವಿಶ್ವಾಸ ಮತ್ತು ಭಕ್ತಿಭಾವದ ಪ್ರತೀಕವಾಗಿದ್ದು, ಸಂಗ್ರಹವಾಗಿದ ಮೊತ್ತವನ್ನು ದೇವಾಲಯದ ಅಭಿವೃದ್ಧಿ ಕಾಮಗಾರಿಗಳು, ಯಾತ್ರಿಕರ ಸೌಲಭ್ಯ ವಿಸ್ತರಣೆ, ಧಾರ್ಮಿಕ ಕಾರ್ಯಕ್ರಮಗಳ ಸುಧಾರಣೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಾರಿ ಸಂಗ್ರಹವಾದ ದಾಖಲೆ ಮಟ್ಟದ ಕಾಣಿಕೆ ದೇವಾಲಯದ ಆದಾಯಕ್ಕೆ ದೊಡ್ಡ ಬಲವಾಗಿ ಪರಿಣಮಿಸಿದೆ.

Tags:
error: Content is protected !!