Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಅತೀ ಕೆಲಸದ ಅಪಾಯ ಬಿಂಬಿಸುವ ಡೆತ್‌ನೋಟ್‌ 

ಜಾಗತೀಕರಣದ ಬಲೆಗೆ ಸಿಕ್ಕ ನಮ್ಮ ಕತೆಯೂ ಹೌದು!  ಅವನ ಹೆಸರು ಶಿನಿಗಾಮಿ. ಜಪಾನಿ ಭಾಷೆಯಲ್ಲಿ ಶಿ ಎಂದರೆ ಸಾವು,ಗಾಮಿ ಎಂದರೆ ದೇವರು.ಅರ್ಥಾತ್, ಶಿನಿಗಾಮಿ ಎಂದರೆ ಸಾವಿನ ದೇವರು.

ಈತ ನಮ್ಮ ಪುರಾಣದ ಯಮಧರ್ಮ ಮತ್ತು ಚಿತ್ರಗುಪ್ತನನ್ನು ಕಸಿ ಮಾಡಿ ರೂಪಿಸಿದ ಪಾತ್ರದಂತೆ. ಅಂದರೆ, ಈ ಸಾವಿನ ದೇವರು ತಾನೇ ಸ್ವಯಂ ಆಗಿ ಲೆಕ್ಕಾಚಾರ ಮಾಡುತ್ತಾನೆ. ಸಾಯಬೇಕಾದವರು ಯಾರು? ಯಾವ ನೆಪದಲ್ಲಿ ಅವರು ಸಾಯಬೇಕು? ಅವರ ಪಾಪ, ಪುಣ್ಯಗಳ ವಿವರಗಳೇನು? ಎಂಬುದನ್ನೂ ನಿರ್ಧರಿಸುತ್ತಾನೆ. ಶಿನಿಗಾಮಿಗೆ ಒಂದು ದಿನ ಬೇಸರ ಬಂದು ಬಿಡುತ್ತದೆ. ಯಾವಾಗ ನೋಡಿದರೂ ಸಾವಿನ ಲೆಕ್ಕಾಚಾರವೇ. ಯಾರು ಸಾಯಬೇಕು? ಹೇಗೆ ಸಾಯಬೇಕು? ಯಾಕೆ ಸಾಯಬೇಕು? ಎಂಬುದನ್ನೇ ತನ್ನ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾ ಮತ್ತು ಅದೇ ಕೆಲಸವನ್ನು ಮಾಡುತ್ತಾ ಶಿನಿಗಾಮಿಗೆ ಬೇಸರ ಬಂದು ಬಿಡುತ್ತದೆ.

ಹೀಗಾಗಿಯೇ,‘ಥೂ ಇದ್ದಷ್ಟು ದಿನ ಮಾಡಿದ್ದೇ ಮಾಡುವುದು? ಇರುವುದಕ್ಕೆ ಒಂದು ನೆಮ್ಮದಿಯಾದರೂ ಬೇಡವೇ?’ ಅಂದುಕೊಳ್ಳುವ ಶಿನಿಗಾಮಿ, ಈ ಕೆಲಸದಿಂದ ಮುಕ್ತಿ ಪಡೆಯಲು ಬಯಸುತ್ತಾನೆ. ಆದರೆ ಸಾವಿನ ವ್ಯವಹಾರದ ಬಗ್ಗೆ ನಿಖರತೆ ಇಲ್ಲದೇ ಇದ್ದರೆ ಜಗತ್ತು ನಡೆಯುವುದು ಹೇಗೆ? ಎಂಬ ಯೋಚನೆ ಶುರುವಾಗುತ್ತದೆ. ಹೀಗಾಗಿ ಆತ ತನ್ನ ಬಳಿ ಇರುವ ಸಾವಿನ ವ್ಯವಹಾರದ ಕುರಿತ ಪುಸ್ತಕವನ್ನು ಮನುಷ್ಯನ ಕೈಗೆ ದಾಟಿಸಲು ಯೋಚಿಸುತ್ತಾನೆ. ಅಷ್ಟೇ ಅಲ್ಲ, ಒಂದು ದಿನ ಸಾವಿನ ವ್ಯವಹಾರವನ್ನು ಆಮೂಲಾಗ್ರವಾಗಿ ಒಳಗೊಂಡ ಆ ಪುಸ್ತಕ ಯುವಕನೊಬ್ಬನಿಗೆ ಸಿಗುವಂತೆ ಮಾಡುತ್ತಾರೆ.

ಹೀಗೆ ಶಿನಿಗಾಮಿ ಪುಸ್ತಕ ಕೊಡಲು ಆಯ್ಕೆ ಮಾಡಿದ ಯುವಕನ ಹೆಸರು ಲೈಟ್ ಎಗಾಮಿ. ಆತ ಪ್ರಚಂಡ ಬುದ್ಧಿವಂತ. ಆದರೆ ಸುತ್ತಲ ಬದುಕಿನಲ್ಲಿ ನಡೆಯುವ ಅನ್ಯಾಯವನ್ನು ಕಂಡು ರೋಸಿ ಹೋದವ. ಒಂದು ಆಕಸ್ಮಿಕ ಸಂದರ್ಭದಲ್ಲಿ ತನ್ನ ಕೈಗೆ ಸಿಕ್ಕ ಆ ವಿಚಿತ್ರ ಪುಸ್ತಕವನ್ನು ಲೈಟ್ ಎಗಾಮಿ ಕುತೂಹಲದಿಂದ ನೋಡುತ್ತಾನೆ. ಪುಸ್ತಕವನ್ನು ತೆರೆಯುತ್ತಾ, ತೆರೆಯುತ್ತಾ ಹೋದಂತೆ ಅವನಿಗೆ ಅದೆಂತಹ ಅದ್ಭುತ ಪುಸ್ತಕ ಎಂಬುದು ಅರಿವಾಗುತ್ತದೆ. ಜಗತ್ತಿನ ಯಾವ ವ್ಯಕ್ತಿಯ ಕೈಗೂ ಸಿಗಲು ಸಾಧ್ಯವಿಲ್ಲದ ಪುಸ್ತಕ. ಬಯಸಿದವರಿಗೆ ಸಾವಿನ ದಂಡನೆಯನ್ನು ಕೊಡಬಲ್ಲಂತಹ ಪುಸ್ತಕ. ಅಂತಹ ಪುಸ್ತಕವನ್ನು ತೆರೆಯುತ್ತಾ ಹೋದಂತೆ ಲೈಟ್ ಎಗಾಮಿಯ ಮೈ ಜುಂ ಎನ್ನುತ್ತದೆ. ಅದನ್ನು ಪಡೆದ ತನ್ನ ಬಗ್ಗೆ ಹೆಮ್ಮೆ ಮೂಡುತ್ತದೆ. ಹೀಗಾಗಿಯೇ ಆ ಪುಸ್ತಕ ಸಿಕ್ಕ ನಂತರ, ಅದರ ತಾಕತ್ತು ಅರ್ಥವಾದ ಬಳಿಕ ಆತ ಯೋಚಿಸುತ್ತಾನೆ.

ಇದನ್ನು ಓದಿ: ಕೊಡಗಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣ 

ತನ್ನ ಸುತ್ತಲ ಜಗತ್ತು ಕ್ರಿಮಿನಲ್‌ಗಳಿಂದ ತುಂಬಿದೆ. ಮಾಫಿಯಾದ ಹೊಡೆತದಿಂದ ತತ್ತರಿಸುತ್ತಿದೆ. ಎಲ್ಲಿ ನೋಡಿದರೂ ಕ್ರಿಮಿನಲ್‌ಗಳದ್ದೇ ಅಟ್ಟಹಾಸ. ಪರಿಣಾಮವಾಗಿ ಮನುಷ್ಯ ನೆಮ್ಮದಿಯಾಗಿ ಬದುಕುವುದು ಕಷ್ಟ ಎಂಬ ಪರಿಸ್ಥಿತಿ. ಆದರೆ ತನ್ನ ಕೈಗೆ ಸಿಕ್ಕ ಪುಸ್ತಕದಿಂದ ಆ ಪರಿಸ್ಥಿತಿಯನ್ನು ಬದಲಿಸಬಹುದು. ವ್ಯವಸ್ಥೆಯನ್ನು ಕಾಡುತ್ತಿರುವ ಕ್ರಿಮಿನಲ್‌ಗಳ ಕೈಯಿಂದ ಜನರನ್ನು ಬಚಾವು ಮಾಡಬಹುದು. ಹಾಗಂತ ಯೋಚಿಸಿದ ಲೈಟ್ ಎಗಾಮಿ ಅವತ್ತಿನಿಂದಲೇ ಕಾರ್ಯೋನ್ಮುಖನಾಗುತ್ತಾನೆ. ಪುಸ್ತಕದಲ್ಲಿ ಇರುವ ಸೂಚನೆಯ ಪ್ರಕಾರ, ಲೈಟ್ ಎಗಾಮಿ ತಾನು ಗುರುತಿಸಿದ ಹೆಸರುಗಳನ್ನು ಬರೆಯಬೇಕು ಮತ್ತು ಅವರಿಗೆ ಯಾವ ಕಾರಣದಿಂದ ಸಾವು ಸಂಭವಿಸುತ್ತದೆ ಎಂದು ಬರೆಯಬೇಕು. ಒಂದು ವೇಳೆ ಆತ ಹೆಸರನ್ನಷ್ಟೇ ಬರೆದು, ಸಾವು ಹೇಗೆ ಬರುತ್ತದೆ ಎಂಬುದನ್ನು ನಮೂದಿಸದಿದ್ದರೆ, ದಾಖಲಿಸಿದ ವ್ಯಕ್ತಿ ಹೃದಯಾಘಾತದಿಂದ ಸಾಯುತ್ತಾನೆ.

ಶುರುವಿನಲ್ಲಿ ಲೈಟ್ ಎಗಾಮಿ ಕ್ರಿಮಿನಲ್‌ಗಳ ಹೆಸರುಗಳನ್ನು ದಾಖಲಿಸುತ್ತಾನಾದರೂ, ಅವರ ಸಾವಿನ ಸ್ವರೂಪವನ್ನು ದಾಖಲಿಸುವುದಿಲ್ಲ. ಹೀಗಾಗಿ ಆತ ಯಾರ ಹೆಸರನ್ನು ಆ ಪುಸ್ತಕದಲ್ಲಿ ದಾಖಲಿಸುತ್ತಾನೋ ಅವರೆಲ್ಲ ಹೃದಯಾಘಾತದಿಂದ ಸಾಯತೊಡಗುತ್ತಾರೆ. ಒಬ್ಬಿಬ್ಬರಾದರೆ ಬೇರೆ ಮಾತು, ಆದರೆ ವಾರವೊಪ್ಪತ್ತಿನಲ್ಲಿ ನೂರಾರು ಮಂದಿ ಹೃದಯಾಘಾತದಿಂದ ಸಾಯತೊಡಗಿದಾಗ ವ್ಯವಸ್ಥೆಯಲ್ಲಿ ಹಾಹಾಕಾರ ಶುರುವಾಗುತ್ತದೆ. ಇದ್ಹೇಗೆ ಒಂದೇ ರೀತಿಯಲ್ಲಿ ಸಾವುಗಳು ಸಂಭವಿಸುತ್ತಿವೆ. ಅದೂ ಅಪಾರ ಪ್ರಮಾಣದಲ್ಲಿ? ಹಾಗಂತ ಆಡಳಿತ ನಡೆಸುವವರು ಕಂಗಾಲಾದರೆ, ಜನ ಸಾಮಾನ್ಯರಲ್ಲಿ ಸಂಭ್ರಮವೋ ಸಂಭ್ರಮ. ವ್ಯವಸ್ಥೆಯಲ್ಲಿ ನೆಲೆಸಿರುವ ಕೊಳೆಯನ್ನು ತೊಳೆಯಲು, ಕೆಟ್ಟವರನ್ನು ಸಾಯಿಸಲು ಭಗವಂತನೇ ಕೀರಾ ಆಗಿ ಬಂದಿದ್ದಾನೆ ಎಂದು ನಂಬತೊಡಗುತ್ತಾರೆ. ಜಪಾನಿ ಭಾಷೆಯಲ್ಲಿ ಕೀರಾ ಎಂದರೆ ಕಿಲ್ಲರ್, ಹೀಗೆ ಭಗವಂತ ಕಿಲ್ಲರ್ ಆದರೆ ಕ್ರಿಮಿನಲ್‌ಗಳು ಉಳಿಯುವುದು ಹೇಗೆ? ಎಷ್ಟೇ ಆದರೂ ಭಗವಂತ ದೊಡ್ಡವನು. ಸರಿಯಾದ ಕಾಲಕ್ಕೆ ಅವನು ಅವತಾರವೆತ್ತಿದ್ದಾನೆ ಎಂದುಕೊಳ್ಳುತ್ತಾರೆ.

ಆದರೆ ಆಡಳಿತಗಾರರ ಆತಂಕ ಬೇರೆ. ಹೀಗೆ ದಿಢೀರ್ ಸಾವಿನ ಪ್ರಮಾಣ ಏರುತ್ತಿದ್ದರೆ ಜಗತ್ತಿನ ಗತಿ ಏನು? ಅವರ ಈ ಆತಂಕದ ನಡುವೆಯೇ ಇಂತಹ ದಿಢೀರ್ ಸಾವುಗಳ ಬಗ್ಗೆ ಪೊಲೀಸ್ ತನಿಖೆ ಶುರುವಾಗುತ್ತದೆ. ಹೀಗೆ ತನಿಖೆ ನಡೆಸುವ ಪೊಲೀಸರು ತನ್ನವರೆಗೆ ಬರಬಾರದಲ್ಲ. ಹೀಗಾಗಿ ಲೈಟ್ ಎಗಾಮಿ, ತನಿಖೆಗೆ ಮುಂದಾದ ಪೊಲೀಸರ ಹೆಸರುಗಳನ್ನೂ ಪುಸ್ತಕದಲ್ಲಿ ಬರೆಯತೊಡಗುತ್ತಾನೆ. ಇದರ ಪರಿಣಾಮವಾಗಿ ತನಿಖೆ ನಡೆಸುತ್ತಿರುವ ಪೊಲೀಸರೂ ಒಬ್ಬರ ಹಿಂದೊಬ್ಬರಂತೆ ಸಾಯತೊಡಗುತ್ತಾರೆ. ಇದು ಆಡಳಿತಗಾರರನ್ನು ಮತ್ತಷ್ಟು ಕಂಗಾಲುಗೊಳಿಸಿದರೆ, ಭಗವಂತನ ಅವತಾರವಾಗಿದೆ ಎಂದು ನಂಬಿದ ಜನ ಇನ್ನಷ್ಟು ಸಂಭ್ರಮ ಪಡತೊಡಗುತ್ತಾರೆ.

ಆದರೆ ಪೊಲೀಸರೂ ಹೀಗೆ ಸಾವಿನ ಮನೆ ಸೇರುತ್ತಿದ್ದರೆ ಸುಮ್ಮನಿರಲು ಸಾಧ್ಯವಿಲ್ಲವಲ್ಲ. ಹೀಗಾಗಿ ಈ ನಿಗೂಢ ಸಾವುಗಳ ತನಿಖೆಗಾಗಿ ‘ಎಲ್’ ಎಂಬ ಖಾಸಗಿ ಪತ್ತೇದಾರ ರಂಗಕ್ಕಿಳಿಯುತ್ತಾನೆ.ಹೀಗೆ ರಂಗಕ್ಕಿಳಿದ ‘ಎಲ್’ಗೆ ಈ ಸರಣಿ ಸಾವುಗಳ ಹಿಂದಿನ ನಿಗೂಢ ಕಾರಣ ತಿಳಿಯತೊಡಗುತ್ತದೆ. ಹೀಗಾಗಿ ಆತ ಲೈಟ್ ಎಗಾಮಿಯ ಬೆನ್ನು ಹತ್ತುತ್ತಾನೆ. ಇದು ಲೈಟ್ ಎಗಾಮಿಗೆ ಎಷ್ಟು ತಡವಾಗಿ ತಿಳಿಯುತ್ತದೆ ಎಂದರೆ ಅಷ್ಟರಲ್ಲಾಗಲೇ ‘ಎಲ್’ ಇವನನ್ನು ಹಿಡಿಯುವ ಹಂತಕ್ಕೆ ಬಂದಿರುತ್ತಾನೆ. ಆದರೆ ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದೆ ಎಂದು ತಿಳಿಯುತ್ತಲೇ ಲೈಟ್ ಎಗಾಮಿ ತನ್ನ ಬಳಿ ಇರುವ ಪುಸ್ತಕದಲ್ಲಿ ‘ಎಲ್’ ಹೆಸರನ್ನೂ ಬರೆಯುತ್ತಾನೆ. ಅಲ್ಲಿಗೆ ‘ಎಲ್’ ಕತೆ ಫಿನಿಷ್.

ಅಷ್ಟೊತ್ತಿಗಾಗಲೇ ಲೈಟ್ ಎಗಾಮಿಗೂ ಗಾಡ್ ಕಾಂಪ್ಲೆಕ್ಸ್ ಶುರುವಾಗಿರುತ್ತದೆ. ತಾನು ಬಯಸಿದವರಿಗೆ ಸಾವನ್ನು ದಯಪಾಲಿಸುತ್ತಿದ್ದೇನೆ ಎಂದರೆ ನಾನು ದೇವರೇ ತಾನೇ?ಎಂಬ ಮನಃ ಸ್ಥಿತಿಗೆ ತಲುಪಿರುತ್ತಾನೆ. ಎಷ್ಟೇ ಆದರೂ ಸಾವಿನ ಸರಪಳಿಯನ್ನು ಕಂಡು ಜನರು ಖುಷಿಯಾಗಿದ್ದಾರೆ. ವ್ಯವಸ್ಥೆಯ ಕೊಳೆಯನ್ನು ತೊಳೆಯಲು ಭಗವಂತ ಅವತರಿಸಿದ್ದಾನೆ ಎಂಬ ಸಂಭ್ರಮದಲ್ಲಿದ್ದಾರೆ. ಅವರ ಸಂಭ್ರಮಕ್ಕೆ ಕಾರಣನಾದ ನಾನು ದೇವರೇ ತಾನೇ?ಎಂಬುದು ಲೈಟ್ ಎಗಾಮಿಯ ಮನಃಸ್ಥಿತಿ.

ಇದನ್ನು ಓದಿ: ಚಾಮುಂಡಿಬೆಟ್ಟ ಪಾದದ ರಸ್ತೆಯಲ್ಲಿ ಕಸದ ರಾಶಿ

ಆದರೆ ಇಷ್ಟಕ್ಕೆ ಆಟ ಮುಗಿಯುವುದಿಲ್ಲ. ಯಾಕೆಂದರೆ ನಿಗೂಢ ಸಾವುಗಳನ್ನು ಪತ್ತೆ ಮಾಡಲು ಇಳಿದ ‘ಎಲ್’ ಸಾವಿಗೀಡಾದರೂ ಇಂತಹದ್ದನ್ನು ಊಹಿಸಿಯೇ ‘ಎಲ್’ ಜತೆಗೆ ‘ಎಂ’ ಮತ್ತು ‘ಎನ್’ ಎಂಬ ಖಾಸಗಿ ಪತ್ತೇದಾರರನ್ನು ಹಿಂದೆಯೇ ನೇಮಕ ಮಾಡಲಾಗಿರುತ್ತದೆ. ಹೀಗಾಗಿ ‘ಎಲ್’ ಶುರು ಮಾಡಿದ ಕಾರ್ಯವನ್ನು ‘ಎಂ’ ಮತ್ತು ‘ಎನ್’ ಮುಂದುವರಿಸುತ್ತಾರೆ. ಈ ಪೈಕಿ ‘ಎಂ’ ಇರುವಿಕೆ ಕೂಡ ಲೈಟ್ ಎಗಾಮಿಗೆ ಗೊತ್ತಾಗಿ, ಆತನಿಗೂ ಸಾವನ್ನು ದಯಪಾಲಿಸುತ್ತಾನೆ. ಆದರೆ ಈ ಪತ್ತೆ ಕಾರ್ಯದಲ್ಲಿ ‘ಎನ್’ ಕಡೆಗೂ ಸಫಲನಾಗುತ್ತಾನೆ. ವ್ಯವಸ್ಥೆಯಲ್ಲಿ ಅಸಂಖ್ಯಾತ ಜನರ ಸಾವಿಗೆ ಕಾರಣನಾದ ಲೈಟ್ ಎಗಾಮಿಯನ್ನು ಬಂಽಸಿ ಜೈಲಿಗಟ್ಟುವಲ್ಲಿ ಸಫಲನಾಗುತ್ತಾನೆ. ಯಾವಾಗ ತಾನು ಜೈಲು ಪಾಲಾಗುತ್ತಾನೋ ಆಗ ಲೈಟ್ ಎಗಾಮಿಗೆ ಭ್ರಮ ನಿರಸನವಾಗುತ್ತದೆ. ಆತ ತಾನಿರುವ ಜೈಲಿನ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಂತಹ ಮಾರ್ಮಿಕ ಕಥಾ ಹಂದರವನ್ನು ಹೊಂದಿರುವ ಜಪಾನ್ ಭಾಷೆಯ ‘ಡೆತ್ ನೋಟ್’ ಕಾದಂಬರಿಯ ಸಂಕ್ಷಿಪ್ತ ನೋಟ ಇದು. ಇದರ ಲೇಖಕ ಸುಗುಮಿ ಓಬಾ.

ನಮಗೆಲ್ಲ ಗೊತ್ತಿರುವಂತೆ ಜಪಾನಿಯರು ತುಂಬ ಶಿಸ್ತಿನ ಜನ. ಜಗತ್ತಿನ ಯಾವುದೇ ದೇಶದ ಜನರಲ್ಲಿ ಕಾಣದಷ್ಟು ಶಿಸ್ತು ಅವರದು. ಆದರೆ ಅವರ ಈ ಶಿಸ್ತು ಕೂಡ ಜಪಾನ್ ದೇಶದ ಅಂತಃಸ್ವತ್ವ ಕುಗ್ಗುವಂತೆ ಮಾಡಿದೆ. ಮಿತಿಮೀರಿದ ಕೆಲಸದಿಂದ ಬದುಕಿನ ಸ್ವಾದವೇಕಳೆದುಕೊಂಡಿರುವ ಯುವ ಸಮುದಾಯ ‘ಹಿಕಿಕೋ ಮೋರಿ’ ಎಂಬ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ. ಈ ಹಿಕಿಕೋ ಮೋರಿಗಳು ಜನರ ಸಂಪರ್ಕವನ್ನೇ ಬಯಸುವುದಿಲ್ಲ. ಬದಲಿಗೆ ಮನೆಯ ಒಳಗೇ ಉಳಿಯಲು ಬಯಸುತ್ತಿದ್ದಾರೆ. ಇವತ್ತು ಜಪಾನಿನಲ್ಲಿ ಇಂತಹವರದ್ದೇ ದೊಡ್ಡ ಸಮೂಹವಿದೆ.

ಇದು ಸಾಲದು ಎಂಬಂತೆ ಜಪಾನಿನಲ್ಲಿ ಜಾತಿಯ ಶ್ರೇಣೀಕರಣಕ್ಕಿಂತಹ ಅಂತಸ್ತಿನ ಶ್ರೇಣೀಕರಣ ದಟ್ಟವಾಗಿದೆ. ಈ ತರತಮವೇ ದೊಡ್ಡ ಸಮುದಾಯವನ್ನು ಕೆರಳಿಸಿದೆ. ಹೀಗೆ ವಿವಿಧ ಕಾರಣಗಳಿಂದ ರೋಸಿಹೋಗಿರುವ ಜಪಾನಿನಲ್ಲಿ ಮಿತಿಮೀರಿದ ಕೆಲಸದ ಪ್ರಜ್ಞೆ ಬೇರೆ. ಆದರೆ ದಿನದ ಬಹುಕಾಲ ದುಡಿಯುವ ಅನಿವಾರ್ಯತೆಗೆ ಪಕ್ಕಾದವ, ಸುತ್ತಲ ಬದುಕಿನಲ್ಲಿ ತಲೆ ಎತ್ತಿರುವ ಹಲವು ಮಾಫಿಯಾಗಳ ಮಧ್ಯೆ ಆತ ಹತಾಶನಾಗುವ ಸಾಧ್ಯತೆಯೇ ಜಾಸ್ತಿ. ಅಂದ ಹಾಗೆ ಇದು ಜಪಾನಿನಲ್ಲಿ ಮಾತ್ರವಲ್ಲ. ಜಾಗತೀಕರಣದ ಬಲೆಗೆ ಸಿಕ್ಕ ನಮ್ಮ ಕತೆಯೂ ಹೌದು. ಹೀಗಾಗಿ ಲೈಟ್ ಎಗಾಮಿಯಂತಹ ಮನಸ್ಸುಗಳು ಎಲ್ಲ ಕಡೆ ಎದ್ದು ಕುಳಿತಿವೆ. ಶಿನಿಗಾಮಿ ಆತನಿಗೆ ಕೊಟ್ಟಂತಹ ಪುಸ್ತಕ ಸಿಕ್ಕರೆ ವ್ಯವಸ್ಥೆಯನ್ನು ತೊಳೆಯಲು ಇವರೂ ಸಿದ್ಧರಿದ್ದಾರೆ. ಇವತ್ತಿನ ನಮ್ಮ ರಾಜಕಾರಣ ಸಾಮಾಜಿಕ ನ್ಯಾಯದ ಕಲ್ಪನೆಯಿಂದ ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ, ಇಂತಹ ವಿಷಯಗಳ ಬಗ್ಗೆ ಚಿಂತನೆ ನಡೆಯುವ ಕೆಲಸ ನಮ್ಮ ನೈತಿಕ ಕೇಂದ್ರಗಳಿಂದ ಆಗಬೇಕು.

-ಬೆಂಗಳೂರು ಡೈರಿ 
ಆರ್.ಟಿ.ವಿಠ್ಠಲಮೂರ್ತಿ 

Tags:
error: Content is protected !!