ಆಗ ತಾನೇ ತವರು ಮನೆಯಿಂದ, ಪತಿಯ ಊರಿನ ಕಡೆ ಬದುಕು ಹೊರಳಿಕೊಂಡಿತ್ತು. ಪತಿಯಾದರೋ ಊರಿನ ಪ್ರತೀ ಬೀದಿಯ ಸಾಲುಗಳಲ್ಲಿ ಸಸಿ ನೆಡಿಸುವ ಯೋಚನೆಯಲ್ಲಿದ್ದರು. ಆಗಷ್ಟೇ ರಾಜ್ಯಪ್ರಶಸ್ತಿ ಪುರಸ್ಕೃತರಾಗಿದ್ದ ಸಾಲುಮರದ ತಿಮ್ಮಕ್ಕನನ್ನು, ಕಾರ್ಯಕ್ರಮಕ್ಕೆ ಆಹ್ವಾನಿಸಲು ನಾನು ನನ್ನ ಹತ್ತು ತಿಂಗಳ ಕೂಸಿನೊಡನೆ ಹೋಗಲು ಉತ್ಸುಕಳಾದೆ.
ಸುಮಾರು ನಾಲ್ಕು ಗಂಟೆಗಳ ಪ್ರಯಾಣ ಮುಗಿಯುತ್ತಿದ್ದಂತೆ ಅಜ್ಜಿಯ ಊರು ತಲುಪಿದ ಕಾರು, ಊರೊಳಗೆಲ್ಲ ಸುತ್ತಿ ಕೊನೆಗೆ ಊರ ತುದಿಯ ಅಜ್ಜಿಯ ಗುಡಿಸಲಿನ ಮುಂದೆ ನಿಂತುಕೊಂಡಿತು. ಯಾವುದೇ ಹಮ್ಮುಬಿಮ್ಮುಗಳಿಲ್ಲದ, ಹಸನ್ಮುಖಿ ಮಂದಸ್ಮಿತೆಯಂತೆ ಕಂಡ, ಹಳೆಯ ಮಾಸಿದ ಸೀರೆ ಬಿಳಿ ರವಿಕೆ ತೊಟ್ಟಿದ್ದ ಅಜ್ಜಿ ನಮ್ಮನ್ನು ಬರಮಾಡಿಕೊಂಡು, ಗುಡಿಸಲಿನೊಳಗೆ ಕರೆದುಕೊಂಡು ಹೋಗ್ತಾ, ‘ಬಾಕ್ಲು ಬಡೀತದೆ, ವಸಿ ಒಕ್ಕೊಂಡು ಬರ್ರಪ್ಪಾ’ ಎಂದಾಗ ‘ಬಿಡಜ್ಜಿ, ನಂಗೂ ನಿಂಗೂ ಏನೂ ತಡೆಯಿಲ್ಲ’ ಎಂದೆ. ‘ಅಯ್ಯೋ, ಗಂಡುಹೈಕ್ಳಿಗೆ ತಡೀತದೆ ಕಣಮ್ಮ’ ಅಂತ ಹೇಳ್ತಾ ನೆಲಕ್ಕೆ ಈಚಲು ಚಾಪೆ ಹರಡಿ ‘ನಮ್ದು ಬಗ್ಡು ನೆಲ ಕಣಪ್ಪಾ, ನಿಮ್ಮಂತ ದೊಡ್ಡೋರಿಗೆ ಕೂರ್ಸಕ್ಕೆ ಅಂತ ಕುರ್ಚಿಗಿರ್ಚಿ ಇಲ್ಲ ಕಣಪ್ಪ’ ಅಂತ ಹೇಳಿದ ಅಜ್ಜಿಯ ಧ್ವನಿಯಲ್ಲಿ ಅಸಹಾಯಕತೆಗಿಂತ ಬದುಕನ್ನು ಬಂದಂತೆ ಸ್ವೀಕರಿಸುವ, ಒಪ್ಪಿ ನಡೆಯುವ ಸಹಜತೆ ಇತ್ತು.
ಇದನ್ನು ಓದಿ: ನಾವೆಲ್ಲರೂ ಹೊರಗಿನಿಂದ ಬಂದ ಬಾಂಧವರೇ ಆಗಿದ್ದೇವೆ…..
‘ಬಾರಜ್ಜಿ, ನೀವು ಬೆಳೆಸಿರೋ ಮರಗಳನ್ನು ತೋರಿಸು ಬಾ’ ಅಂದೆ. ‘ಅಮ್ಮ….ತಾಯಿ ಈ ಕೂಸು ಎತ್ಕೊಂಡು ನೀನು ನಡೀತೀಯ ಅಲ್ಲಿಗಂಟ, ಕೂಸನ್ನ ಗಂಡನ ಕೈಗೆ ಕೊಡು, ನಡೀ ಈಗ ಓಗನ’ ಅಂತ ಪಟಪಟನೆ ಹೆಜ್ಜೆ ಹಾಕ್ತು. ಅಜ್ಜಿಯ ಬಿರುಸು ನಡೆಗೆ ನಾಚಿಕೊಳ್ಳುತ್ತಲೇ ನನ್ನ ನಡಿಗೆಯು ವೇಗವನ್ನು ತುಸು ಹೆಚ್ಚಿಸಿಕೊಂಡೆ. ಕಣ್ಣು ಹಾಯಿಸುವಷ್ಟೂ ದೂರಕ್ಕೆ ರಸ್ತೆಯ ಎರಡೂ ಬದಿಯ ಸಾಲು ಸಾಲು ಮರಗಳನ್ನು ತೋರಿಸಿ ‘ನೋಡವ್ವಾ ನಿನ್ನ ಕಣ್ಣಿಗೆ ಕಾಣ್ತಾ ಅದಾ? ಅಲ್ಲಿಂದ ಮುಂದಕ್ಕೂ ಇದಾವೆ ಕಣವ್ವಾ. ನಮ್ಮ ಗೌಡ್ರು, ನಾನು ಸೇರ್ಕೊಂಡು ನೀರು ಹಾಕ್ತಿದ್ವಿ. ಇವನ್ನೆಲ್ಲ ಅವರೇ ನೆಟ್ಟಿದ್ದು ಕಣವ್ವ. ಈಗ ಅವರಿಲ್ಲ, ತೀರ್ಕೊಬುಟ್ಟವ್ರೇ, ನಾನೇ ಹಾಕ್ತೀನಿ ಕಣವ್ವ’ ಎಂದಾಗ ನಾನು ‘ಅಲ್ಲ ಕಣಜ್ಜಿ ಅಷ್ಟು ದೂರದ ತನಕ ಹೆಂಗೆ ನೀರು ಹಾಕ್ತೀರಿ?’ ಅಂದೆ. ಅದಕ್ಕೆ ಅಜ್ಜಿ ಹೇಳಿದ್ದು, ‘ಅಯ್ಯೋ ಅದೇ ಕಣವ್ವಾ ಆ…..ಕಣ್ಣಿಲ್ಲದ ತಂದೆ ತಾಯಿಯನ್ನು ಹೊತ್ಕೊಂಡು ತಿರುಗೋನಲ್ಲ ಅದೇ ಅವನು’, ‘ಓ….ಶ್ರವಣಕುಮಾರನ ಅಜ್ಜಿ!’ ಅಂದೆ. ‘ಆ…ಅದೇ ಅವ್ನೆ ಕನವ್ವ ಶ್ರವಣಕುಮಾರ….ಆ ತಟ್ಟಿಗೆನಲ್ಲಿ ಅಪ್ಪ ಅವ್ವನ್ನ ಹೊತ್ಕೊಂಡು ತಿರುಗೋನಲ್ಲ ಅಂತದೇ ಒಂದು ತಟ್ಟಿಗೆಯಲ್ಲಿ ಮೂರು ನಾಲ್ಕು ಕೊಡಪಾನ ನೀರು, ನಾನೇ ಸೇದಿಕೊಡೀವೆ, ಇಲ್ಲಿ ಜಗ್‌ಲಿ ಹಿಡಿದು ಕೊಡೀವೆ ಹೊತ್ತೊಂಡ್ಗೋಗಿ ಎಲ್ಲವ್ಕೂ ಹಾಕೋರು. ನಾನು ವಸಿ ದೂರ, ಅವ್ರು ವಸಿ ದೂರ. ನಮ್ಗೇನು ಮಕ್ಕಳಾ ಮರೀನಾ? ನಾವು ಇಬ್ರಾಳೇ ಇಲ್ಟು ಬೇಯಿಸಿಕೊಂಡು ತಿಂದು, ಯಾವ ಕೆಲಸ ಬೊಗಸೆ ಇಲ್ಲ ಕಣವ್ವಾ ಇದ್ನೇ ಮಾಡ್ಕಂಡಿದ್ವೀ ಕಣವ್ವಾ!! ನಮ್ಮ ಗೌಡ್ರು ಏಳೋರು ಕಣವ್ವಾ ಮಕ್ಕಳಿದ್ದಿದ್ರೆ ನೋಡ್ಕತ್ತಿರ್ನಿಲ್ವಾ, ಬಾರಮ್ಮಿ, ಇವನ್ನೂ ದೇವರು ಕೊಟ್ಟ ಮಕ್ಕಳು ಅಂದಕಳ್ಳನಾ, ಏನಾದದು ಅಂತ. ಅವರು ತೀರ್ಕೊಬುಟ್ಟ ಮೇಲೆ ಈಗ ನಾನೊಬ್ಳೇ ನೋಡ್ಕೋತೀನಿ’ ಅಂದಿದ್ದಳು ಅಜ್ಜಿ.
ಈಗ ಹೀಗೆ ಮಾಸಿದ ನೆನಪುಗಳು ಗರಿಗೆದರಲು ಅಜ್ಜಿಯ ಸಾವಿನ ನಂತರವೇ ಸಾಧ್ಯವಾಯಿತಲ್ಲ? ಇವನ್ನೆಲ್ಲಾ ಮುಂಚೆಯೇ ಬರೆದಿದ್ದರೆ ಬಲ್ಲವರು ಅಜ್ಜಿಗೆ ಓದಿಹೇಳುತ್ತಿದ್ದರೇನೋ, ಅಜ್ಜಿಗೂ ಒಂದಿಷ್ಟು ಸಂತೋಷ ಆಗ್ತಿತ್ತೇನೋ ಅನ್ನಿಸಿ ಮನಸ್ಸು ತುಸು ಭಾರವಾಗಿದೆ.
” ಇವನ್ನೆಲ್ಲಾ ಮುಂಚೆಯೇ ಬರೆದಿದ್ದರೆ ಬಲ್ಲವರು ಅಜ್ಜಿಗೆ ಓದಿ ಹೇಳುತ್ತಿದ್ದ ರೇನೋ, ಅಜ್ಜಿಗೂ ಒಂದಿಷ್ಟು ಸಂತೋಷ ಆಗ್ತಿತ್ತೇನೋ ಅನ್ನಿಸಿ ಮನಸ್ಸು ತುಸು ಭಾರವಾಗಿದೆ.”
–ಕೆ. ನೇತ್ರ





