ಮೈಸೂರು: ಇನ್ನೂ ಎರಡೂವರೆ ವರ್ಷ ಸಿಎಂ ಆಗಿ ನಾನೇ ಮಂದುವರಿಯುತ್ತೇನೆ. ಬಜೆಟ್ ಕೂಡ ಮಂಡನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ತೀವ್ರ ಚರ್ಚೆಯಲ್ಲಿದ್ದು, ಸಚಿವ ಚಲುವರಾಯಸ್ವಾಮಿ ಅವರು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರೀ ಚರ್ಚೆಯಲ್ಲಿರುವಾಗಲೇ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ಬಜೆಟ್ ಅನ್ನೂ ಕೂಡ ನಾನೇ ಮಂಡಿಸುತ್ತೇನೆ. ನಾಯಕತ್ವ ಬದಲಾವಣೆ ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ನಿರ್ಧಾರವನ್ನು ನಾನು ಪಾಲಿಸಬೇಕು, ಡಿಕೆಶಿನೂ ಪಾಲಿಸಬೇಕು ಎಂದು ಹೇಳಿದರು.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬರಲಿದ್ದಾರೆ. ಆಗ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಸಚಿವರು ಹಾಗೂ ಶಾಸಕರಿಗೆ ಹೈಕಮಾಂಡ್ ಸೂಚನೆ ನೀಡಲಿದೆ. ಒಟ್ಟಾರೆಯಾಗಿ ನಾವೆಲ್ಲಾ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.





