ಮೈಸೂರು : ಯಾವ ಕೃಷಿ ರೈತನಿಗೆ ಹೆಚ್ಚಿನ ಲಾಭ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೋ ಅದಕ್ಕೆ ರೈತ ಮಾರು ಹೋಗುತ್ತಾರೆ. ಅಂತಹ ಕೃಷಿಯಲ್ಲಿ ರೇಷ್ಮೆ ಕೃಷಿಯೂ ಒಂದಾಗಿದೆ ಎಂದು ರಾಜ್ಯ ರೇಷ್ಮೆ ನಿರ್ದೇಶನಾಲಯದ ಅಪರ ನಿರ್ದೇಶಕ ವೈ.ಟಿ.ತಿಮ್ಮಯ್ಯ ತಿಳಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಮೈಸೂರು ವಿವಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ್ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದ್ವಿತಳಿ ರೇಷ್ಮೆಗೂಡು ಬೆಳೆದರೆ ವಿದೇಶಿ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಗಳ ಹಾವಳಿ ಇಲ್ಲ. ರೈತರು ವೈಜ್ಞಾನಿಕ ಪದ್ಧತಿಗಳಿಂದ ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಗಳಿಸಬಹುದಾಗಿದೆ. ರೈತರು ಕೃಷಿಗೆ ಪೂರಕವಾದ ರೇಷ್ಮೆ ಕೃಷಿಗೆ ಸುಧಾರಿತ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ:-ಬೆಂಗಳೂರು | ಹಾಡಹಗಲೇ 7.11 ಕೋಟಿ ರೂ. ದರೋಡೆ
ಮೈಸೂರು ವಿ.ವಿ ಕುಲಸಚಿವರಾದ ಎಂ.ಕೆ.ಸವಿತಾ ಮಾತನಾಡಿ, ಯಾವುದೇ ಒಂದು ಕಾರ್ಯಾಗಾರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ವೃದ್ಧಿಯಾಗಲಿದೆ. ಎರಡು ದಿನಗಳ ಈ ವಿಚಾರ ಸಂಕಿರಣ ಆಯೋಜನೆ ಶ್ಲಾಘನೀಯವಾಗಿದ್ದು, ಉತ್ಸಾಹದಿಂದ ಭಾಗವಹಿಸಿ ಎಂದು ಸಲಹೆ ನೀಡಿದರು.
ರೇಷ್ಮೆ ಕೃಷಿ ಮಾಡಿಕೊಂಡು ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ರೇಷ್ಮೆ ಕೃಷಿಯನ್ನು ಸಂಪೂರ್ಣವಾಗಿ ಮರೆತು ನಗರದತ್ತ ಮುಖ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ರೇಷ್ಮೆ ಕೃಷಿ ಎಂದರೆ ಚಿನ್ನದ ಬೆಳೆ ಬೆಳೆದಂತೆ. ಸರತಿ ಸಾಲಿನಲ್ಲಿ ನಿಂತು ಮೈಸೂರು ಸಿಲ್ಕ್ ಸೀರೆಗಳನ್ನು ತೆಗೆದುಕೊಳ್ಳು ತ್ತಾರೆ. ಒಮ್ಮೆ ತೆಗೆದುಕೊಂಡರೆ ಪೀಳಿಗೆಗಳಿಗೂ ವರ್ಗಾವಣೆ ಆಗುತ್ತಾ ಇರುತ್ತದೆ. ಹಾಗೆಯೇ ಗುಡಿ ಕೈಗಾರಿಕೆಗಳಲ್ಲಿ ರೇಷ್ಮೆಗೂಡುಗಳನ್ನು ಬಳಸಿ ಜೀವನ ಕಂಡುಕೊಳ್ಳಬಹುದಾಗಿದೆ ಎಂದರು.
ಮೈಸೂರು ವಿ.ವಿ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸಣ್ಣಪ್ಪ, ಪ್ರೊ.ಆರ್.ಎಸ್.ಉಮಾಕಾಂತ್, ಪ್ರೊ.ಎಂ.ಎನ್.ಅನಿಲ್‌ಕುಮಾರ್, ಪ್ರೊ.ಟಿ.ಎಸ್.ಜಗದೀಶ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.





