Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಅನಾಥರು, ಬಡವರಿಗೆ ಶಿಕ್ಷಕನ ಅನನ್ಯ ಸೇವೆ

ವಿಶೇಷಚೇತನರ ಸೇವೆಯಲ್ಲಿ ನಿರತರಾದ ಕಾಯಕಯೋಗಿ ಸುಂದರಪ್ಪಗೆ ಸಾರ್ವಜನಿಕರಿಂದ ಮೆಚ್ಚುಗೆ

ಹಲಗೂರು: ಬಡವರ ಬಂಧು, ವಿಶೇಷಚೇತನರ ಮಿತ್ರನಾಗಿ, ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಶಿಕ್ಷಣದ ಬೆಳಕು ಹಂಚುತ್ತಿರುವ ಸಹೃದಯಿ ಶಿಕ್ಷಕ ಲಿಂಗಾಪಟ್ಟಣದ ಸುಂದರಪ್ಪ ಅವರ ಸೇವಾಭಾವನೆ ಎಲ್ಲರಿಗೂ ಆದರ್ಶವಾಗಿದೆ. ಹಲಗೂರು ಸಮೀಪದ ಕೆಂಪಯ್ಯನದೊಡ್ಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುಂದರಪ್ಪ.

ತಾಲ್ಲೂಕಿನಾದ್ಯಂತ ಬಡ ಹಾಗೂ ವಿಶೇಷ ಚೇತನ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ, ಅವರ ಶಿಕ್ಷಣಕ್ಕಾಗಿ ಪ್ರೇರಣೆಯಾಗಿದ್ದಾರೆ. ತಮ್ಮ ಶಾಲಾ ಕರ್ತವ್ಯದ ಜೊತೆಗೆ ತಮ್ಮ ಅಮೂಲ್ಯ ಸಮಯವನ್ನು ಸಾಮಾಜಿಕ ಸೇವೆಗೂ ಮೀಸಲಿಟ್ಟಿದ್ದಾರೆ.

ಮನೆ ಮನೆಗೆ ತೆರಳಿ ವಿಶೇಷ ಮಕ್ಕಳನ್ನು ಭೇಟಿಯಾಗಿ, ಅವರಿಗೆ ಶೈಕ್ಷಣಿಕ ತರಬೇತಿ, ವ್ಯಾಯಾಮ ಮುಂತಾದ ಪ್ರೋತ್ಸಾಹ ನೀಡುವ ಮೂಲಕ ಕಲಿಕೆಯ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.

ಇದನ್ನು ಓದಿ: ಶಾಲಾ ಆವರಣದಲ್ಲಿನ ಒಣಮರಗಳನ್ನು ತೆರವುಗೊಳಿಸಿ’

ಇಂದಿನ ಸಮಾಜದಲ್ಲಿ ಹಲವಾರು ಪೋಷಕರು ವಿಶೇಷಚೇತನ ಮಕ್ಕಳ ಪಾಲನೆಗೆ ಆಸಕ್ತಿ ತೋರದ ಸಂದರ್ಭದಲ್ಲಿ ಸುಂದರಪ್ಪ ಅವರು ಅಂತಹ ಮನೆಗಳಿಗೆ ತೆರಳಿ, ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಸಹಾಯ ಒದಗಿಸುತ್ತಿದ್ದಾರೆ. ದಾನಿಗಳ ಸಹಯೋಗದಿಂದ ನೋಟ್ ಬುಕ್‌ಗಳು, ಬ್ಯಾಗ್‌ಗಳು, ಸಮವಸ, ಶೂಗಳು, ಶಾಲಾ ಶುಲ್ಕ ಹಾಗೂ ಔಷಧೋಪಚಾರದ ನೆರವು ನೀಡುವ ಮೂಲಕ ಅವರು ‘ಸೇವೆಯಲ್ಲೇ ದೇವರಿದ್ದಾರೆ’ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಆಹಾರ ಕಿಟ್‌ಗಳು, ಬಟ್ಟೆಗಳು ಹಾಗೂ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಪಠ್ಯ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸುವುದರ ಜೊತೆಗೆ, ಹಲವಾರು ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ಸ್ವತಃ ಭರಿಸುತ್ತಿದ್ದಾರೆ. ಈ ನೆರವಿನಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

ಇಷ್ಟೇ ಅಲ್ಲದೇ, ತಾಲ್ಲೂಕಿನ ನಿರ್ಗತಿಕರು, ಮಾನಸಿಕ ಅಸ್ವಸ್ಥರು ಮತ್ತು ಭಿಕ್ಷುಕರಿಗೂ ಪ್ರತಿ ತಿಂಗಳು ಕೂದಲು-ಗಡ್ಡ ತೆಗಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ನೀಡಿ ಸಹಾಯ ಮಾಡುವ ಮೂಲಕ ಸುಂದರಪ್ಪ ಮಾನವೀಯತೆಯ ನಿಜವಾದ ಅರ್ಥವನ್ನು ಸಾಬೀತುಪಡಿಸಿದ್ದಾರೆ. ಅವರ ಈ ತ್ಯಾಗಮಯಿ ಸೇವೆ ಸ್ಥಳೀಯರ ಮನ ಗೆದ್ದಿದ್ದು, ಸಮಾಜಕ್ಕೆ ಇವರ ನಿಸ್ವಾರ್ಥ ಸೇವೆಯು ಸ್ಛೂರ್ತಿದಾಯಕ ಮಾದರಿಯಾಗಿದೆ.

ಬಡ ಮಕ್ಕಳ, ವಿಶೇಷಚೇತನರ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕಾಯಕ ಯೋಗಿ ಶಿಕ್ಷಕ ಸುಂದರಪ್ಪ ನಿವೃತ್ತಿಯ ಅಂಚಿನಲ್ಲಿದ್ದು, ಅವರ ನಿವೃತ್ತಿಯ ನಂತರ ಜೀವನ ಸುಂದರವಾಗಿರಲೆಂಬುದು ಸಹೃದಯರ ಹಾರೈಕೆಯಾಗಿದೆ.

” ವೃತ್ತಿಯಲ್ಲಿ ಶಿಕ್ಷಕರಾಗಿರುವ ಸುಂದರಪ್ಪ ಅವರು ನಿರ್ಗತಿಕ ಮಕ್ಕಳ ಶೈಕ್ಷಣಾಭಿವೃದ್ಧಿಗೆ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ತಮ್ಮ ಸಂಬಳದ ಒಂದುಭಾಗವನ್ನು ಇಂತಹ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟು, ದಾನಿಗಳ ಸಹಕಾರವನ್ನು ಕೂಡ ಸೇರಿಸಿ ಅನೇಕ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರಣರಾಗಿದ್ದಾರೆ.”

ಇದನ್ನು ಓದಿ: ಮತ್ಸ್ಯಕ್ರಾಂತಿ: ಮೈಸೂರು ಜಿಲ್ಲೆಗೆ 11ನೇ ಸ್ಥಾನ

 -ಎನ್.ಕೆ.ಕುಮಾರ್, ತಾಲ್ಲೂಕು ಅಧ್ಯಕ್ಷರು, ನವ ಕರ್ನಾಟಕ ಯುವ ಶಕ್ತಿ ಸಂಘಟನೆ

” ಸುಂದರಪ್ಪ ಅವರು ಸೇವೆಗೆ ಸೇರಿದ ದಿನದಿಂದಲೇ ಶಾಲೆಯಲ್ಲಿ ಕಂಡುಬಂದ ಪರಿವರ್ತನೆ ಗಣನೀಯ. ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚುತ್ತಿದ್ದ ಸಂದರ್ಭದಲ್ಲೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದಾರೆ. ಒಬ್ಬ ಸರ್ಕಾರಿ ಶಿಕ್ಷಕರ ಪರಿಶ್ರಮದ ಫಲವಾಗಿ ಶಿಕ್ಷಣ ಸಚಿವರು ಮಳವಳ್ಳಿ ತಾಲ್ಲೂಕಿನ ಕುಗ್ರಾಮವಾದ ಕೆಂಪಯ್ಯನ ದೊಡ್ಡಿಗೆ ಭೇಟಿ ನೀಡಿ ಅವರ ಸೇವೆಯನ್ನು ಪ್ರಶಂಸಿದ ಘಟನೆ ಶ್ಲಾಘನೀಯ.”

 -ಮೋಹನ್ ಕುಮಾರ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ

” ೨೫ ವರ್ಷಗಳಿಂದ ನಿರಂತರವಾಗಿ ಈ ರೀತಿಯ ಸಮಾಜ ಸೇವೆ ಮಾಡುತ್ತಾ ಬಂದಿರುವುದು ನನ್ನ ಆತ್ಮತೃಪ್ತಿಗಾಗಿ. ಯಾವುದೇ ಧರ್ಮ, ಜಾತಿ, ಭೇದ ಭಾವವಿಲ್ಲದೆ ಭಿಕ್ಷುಕರು, ಮಾನಸಿಕ ಅಸ್ವಸ್ಥರು, ಅನಾಥರು, ವಿಶೇಷ ಚೇತನರು ಮಾತ್ರವಲ್ಲ, ಓದಲು ಆರ್ಥಿಕ ಬಲವಿಲ್ಲದ ಕುಟುಂಬದವರಿಗೆ ನನ್ನ ಶಕ್ತಿ ಮೀರಿ ನೆರವು ನೀಡುತ್ತಾ ಬಂದಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳೇ ಇದಕ್ಕೆ ಪ್ರೇರಣೆ”

– ಸುಂದ್ರಪ್ಪ, ಮುಖ್ಯ ಶಿಕ್ಷಕರು, ಕೆಂಪಯ್ಯನಹುಂಡಿ, ಹಿ.ಪ್ರಾ.ಶಾ

ಉಮೇಶ್ ಹಲಗೂರು

Tags:
error: Content is protected !!