Mysore
21
few clouds

Social Media

ಶನಿವಾರ, 24 ಜನವರಿ 2026
Light
Dark

ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಕಸರತ್ತು 

ಕೋಟೆ: ಸರ್ಕಾರಿ ಪ್ರೌಢಶಾಲೆಗಳಲ್ಲಿ ಬಿಇಒ, ಮುಖ್ಯಶಿಕ್ಷಕರ ರಾತ್ರಿ ವಾಸ್ತವ್ಯ; ಮನೆಗಳಿಗೆ ತೆರಳಿ ಪೋಷಕರಿಗೂ ಅರಿವು

ಎಚ್.ಡಿ.ಕೋಟೆ: ಜಿಲ್ಲೆಯಲ್ಲಿ ಕೊನೆಯ ಸ್ಥಾನ ಪಡೆದಿರುವ ಎಸ್‌ಎಸ್ ಎಲ್‌ಸಿ ಫಲಿತಾಂಶವನ್ನು ತಾಲ್ಲೂಕಿನಲ್ಲಿ ಉತ್ತಮ ಪಡಿಸಲು ಸರ್ಕಾರಿ ಪ್ರೌಢಶಾಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಮುಖ್ಯಶಿಕ್ಷಕರು ವಾಸ್ತವ್ಯ ಹೂಡಿ, ವಿದ್ಯಾರ್ಥಿಗಳ ಮನೆಗೆ ತೆರಳಿ ಅವರ ವಿದ್ಯಾಭ್ಯಾಸದ ಬಗ್ಗೆ ಪರಿಶೀಲನೆ ನಡೆಸಿ, ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಪ್ರಾರಂಭಗೊಂಡಿದೆ.

ತಾಲ್ಲೂಕಿನ ಗಡಿಭಾಗದ ಡಿ.ಬಿ.ಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜುರವರು ಶಾಲೆಯ ಮುಖ್ಯ ಶಿಕ್ಷಕರೊಡನೆ ರಾತ್ರಿ ವಾಸ್ತವ್ಯ ಮಾಡಿ, ರಾತ್ರಿ ೧೦ರವರೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಮತ್ತು ಪರೀಕ್ಷೆಯ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೆ ಬೆಳಗಿನ ಜಾವ ೫ ಗಂಟೆಗೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಓದಿಸುವ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅಲ್ಲದೆ, ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಗೃಹ ಉಪಯೋಗಿ ಕೆಲಸಗಳನ್ನು ನೀಡದಂತೆ ಪೋಷಕರಿಗೆ ತಿಳಿಹೇಳುತ್ತಿದ್ದಾರೆ.

ಕೋಟೆ ತಾಲ್ಲೂಕಿನಲ್ಲಿ ೨ ವರ್ಷಗಳಿಂದಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಾರಿ ಕುಸಿತಗೊಂಡಿದ್ದು, ಜಿಲ್ಲೆಯಲ್ಲಿ ಕಡೆಯ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ಉತ್ತಮಪಡಿಸುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರು ತಾಲ್ಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಈ ಸಾಲಿನಲ್ಲಿ ೩,೬೪೩ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕಲಿಕಾ ಖಾತ್ರಿ ಪರೀಕ್ಷೆ, ಬೆಳಿಗ್ಗೆ ೯ರಿಂದ ಅನುತ್ತೀರ್ಣಗೊಳ್ಳುವ ಸಂಭವವಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಬೆಳಿಗ್ಗೆ ಮತ್ತು ಸಂಜೆ ನಡೆಸಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಕ್ರಿಯಾ ಯೋಜನೆಯನ್ನು ವಿಷಯವಾರು ಶಿಕ್ಷಕರಿಂದ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಮನೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ‘ನಾನು ಓದುತ್ತಿದ್ದೇನೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, ಪ್ರತಿದಿನ ಮನೆಯಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದರ ಬಗ್ಗೆ ತರಗತಿ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಮೇಲ್ವಿಚಾರಣೆ ಮಾಡಲಿದ್ದಾರೆ. ಪ್ರತಿ ವಿದ್ಯಾರ್ಥಿಗೂ ನಾನು ಓದುತ್ತಿದ್ದೇನೆ ಕಾರ್ಡ್‌ಗಳನ್ನು ನೀಡಲಾಗಿದೆ.

ಪ್ರತಿ ವಿದ್ಯಾರ್ಥಿಗೂ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಓದುವ ವೇಳಾಪಟ್ಟಿಯನ್ನು ನೀಡಲಾಗಿದೆ. ಪ್ರೌಢ ಶಾಲೆಗಳಲ್ಲಿ (ಗಂಡು ಮಕ್ಕಳಿಗೆ ಮಾತ್ರ) ರಾತ್ರಿ ತರಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಇನ್ನು ೪ ತಿಂಗಳುಗಳ ಕಾಲ ವಿಭಿನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದರೆ ಫಲಿತಾಂಶ ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ.

” ಈ ಬಾರಿ ಎಸ್‌ಎಸ್ಎಲ್‌ಸಿ ಫಲಿತಾಂಶ ಉತ್ತಮಪಡಿಸಲುಮತ್ತು ಶೈಕ್ಷಣಿಕ ಪ್ರಗತಿ ಸಾಧಿಸಲು ನಾನು ಶ್ರಮವಹಿಸಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಈತಾಲ್ಲೂಕಿನಲ್ಲಿ ಹೊಸ ಯೋಜನೆಮತ್ತು ಕಾರ್ಯ ಕ್ರಮಗಳನ್ನು ನಡೆಸುತ್ತಿದ್ದೇನೆ. ಇದಕ್ಕೆ ಶಾಸಕ ಅನಿಲ್ ಚಿಕ್ಕಮಾದು, ಡಿಡಿಪಿಐ ಜವರೇಗೌಡ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿ ಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ.”

-ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ

ಮಂಜು ಕೋಟೆ

Tags:
error: Content is protected !!