ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರವು ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ ಎಂದು ಸುದೀಪ್, ಚಿತ್ರದ ಪ್ರಾರಂಭಕ್ಕೂ ಮೊದಲೇ ಹೇಳಿಕೊಂಡಿದ್ದರು. ಇದೀಗ ಚಿತ್ರದ ಬಿಡುಗಡೆಗೆ ಕೇವಲ ಒಂದೂವರೆ ತಿಂಗಳುಗಳು ಮಾತ್ರ ಇವೆ. ಇನ್ನೂ ಚಿತ್ರದ ಚಿತ್ರೀಕರಣ ಮುಗಿದ ಸುದ್ದಿ ಬಂದಿಲ್ಲವಲ್ಲ ಎಂದು ಸುದೀಪ್ ಅಭಿಮಾನಿಗಳು ಕೊರಗುತ್ತಿದ್ದರು.
ಅದಕ್ಕೆ ಸರಿಯಾಗಿ, ಇದೀಗ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ಮೋಡಿ ಮಾಡಿತ್ತು.
ಇದನ್ನು ಓದಿ: ಸೈಕ್ ಸೈತಾನ್’ ಆದ ಸುದೀಪ್; ‘ಮಾರ್ಕ್’ ಚಿತ್ರದ ಮೊದಲ ಹಾಡು ಬಿಡುಗಡೆ ಸುದೀಪ್
ಈಗ ಮತ್ತೆ ಅವರಿಬ್ಬರು ‘ಮಾರ್ಕ್’ ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ‘ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್ ಮಾರ್ಕಂಡೇಯ ಎಂಬ ಪಾತ್ರವನ್ನು ಸುದೀಪ್ ಮಾಡಿದ್ದಾರೆ. ‘ಮಾರ್ಕ್’ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಮತ್ತು ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಗಳು ಜೊತೆಯಾಗಿ ನಿರ್ಮಿಸಿದ್ದು, ಚಿತ್ರದಲ್ಲಿ ಸುದೀಪ್, ಡ್ರ್ಯಾಗನ್ ಮಂಜು, ಗೋಪಾಲಕೃಷ್ಣ ದೇಶಪಾಂಡೆ, ನಿಶ್ವಿಕಾ ನಾಯ್ಡು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ‘ಮಾರ್ಕ್’ ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಟ್ರೇಲರ್ ಬಿಡುಗಡೆಯಾಗಲಿದೆ.





