ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿ ದಸರಾ ಸಂದರ್ಭ ತೆಗೆಯಲಾಗಿದ್ದ ಶೌಚ ಗುಂಡಿಗೆ ಗೂಳಿಯೊಂದು ಬಿದ್ದು ಮೇಲೆ ಬರಲಾಗದೆ ಪರದಾಡಿದ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗೂಳಿಯನ್ನು ರಕ್ಷಿಸಿದ್ದಾರೆ.
ನಗರದ ಖಾಸಗಿ ಶಾಲೆಯ ಮುಂಭಾಗದ ಗಾಂಧಿ ಮೈದಾನದಲ್ಲಿ ದಸರಾ ವೇಳೆಯಲ್ಲಿ ಶೌಚಗುಂಡಿಯನ್ನು ತೆರೆದು ಹಾಗೆಯೆ ಬಿಡಲಾಗಿತ್ತು. ಜಾನುವಾರುಗಳು ಮೈದಾನಕ್ಕೆ ಬಂದ ಸಂದರ್ಭ ಗೂಳಿಯೊಂದು ಗುಂಡಿಯೊಳಕ್ಕೆ ಬಿದ್ದಿದೆ. ಬೃಹತ್ ಹೊಂಡವಾಗಿರುವುದರಿಂದ ಗೂಳಿಯು ಮೇಲೆ ಬರಲು ಸಾಧ್ಯವಾಗದೆ ಪರದಾಡಿದೆ. ಕೊಡಗು ಅಭಿವೃದ್ಧಿ ಸಮಿತಿ ಸದಸ್ಯ ಪ್ರಮೋದ್ ಎಂಬುವವರು ಇದನ್ನು ಗಮನಿಸಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಗೂಳಿಯನ್ನು ರಕ್ಷಿಸಿದ್ದಾರೆ. ಇದೇ ಮೈದಾನದಲ್ಲಿ ಶಾಲಾ ಮಕ್ಕಳು ಆಟವಾಡುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಗುಂಡಿಯನ್ನು ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.





