Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕುಂಭನಾದ ಪೃಥ್ವಿರಾಜ್‍: ಮಹೇಶ್‍ ಬಾಬುಗೆ ವಿಲನ್‍

ಎಸ್‍.ಎಸ್‍.ರಾಜಮೌಳಿ ನಿರ್ದೇಶನದ ಹೊಸ ಚಿತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ರಾಮೋಜಿ ರಾವ್‍ ಫಿಲಂ ಸಿಟಿಯಲ್ಲಿ ಬೃಹತ್‍ ಸೆಟ್‍ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಮಹೇಶ್‍ ಬಾಬುಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿರುವ ಸುದ್ದಿ ಗೊತ್ತೇ ಇದೆ. ಈ ಚಿತ್ರದಲ್ಲಿ ವಿಲನ್‍ ಯಾರಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಹೇಶ್‍ ಬಾಬು ಎದುರು ವಿಲನ್‍ ಆಗಿ ಮಲಯಾಳಂನ ಜನಪ್ರಿಯ ನಟ ಪೃಥ್ವಿರಾಜ್‍ ಸುಕುಮಾರನ್‍ ನಟಿಸುತ್ತಿದ್ದಾರೆ. ಪೃಥ್ವಿರಾಜ್‍ಗೆ ವಿಲನ್‍ ಪಾತ್ರಗಳು ಹೊಸದೇನಲ್ಲ. ಈಗಾಗಲೇ ಹಿಂದಿಯ ‘ಬಡೇ ಮಿಯಾ ಚೋಟೇ ಮಿಯಾ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ರಾಜಮೌಳಿ ಚಿತ್ರದಲ್ಲೂ ಅವರು ಕುಂಭ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ:ಸತ್ಯಪ್ರಕಾಶ್ ‍ನಿರ್ದೇಶನದಲ್ಲಿ ಧೀರೇನ್‍ ಹೊಸ ಸಿನಿಮಾ

ಇತ್ತೀಚೆಗೆ, ಕುಂಭ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್‍ ಅಂಕವಿಕಲ ವಿಜ್ಞಾನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ. ಪೃಥ್ವಿರಾಜ್‍ ವ್ಹೀಲ್‍ ಚೇರ್ ಒಂದರಲ್ಲಿ ಕುಳಿತಿದ್ದು, ಅದಕ್ಕೆ ನಾಲ್ಕು ಕೈಗಳಿವೆ. ಈ ತರಹದ ಪಾತ್ರಗಳು ಇದಕ್ಕೂ ಮೊದಲು ಸೂರ್ಯ ಅಭಿನಯದ ‘24’, ‘ಕ್ರಿಶ್‍ 3’ ಮತ್ತು ಹಾಲಿವುಡ್‍ನ ‘ಸ್ಪೈಡರ್ ಮ್ಯಾನ್‍ 2’ ಚಿತ್ರಗಳಲ್ಲೂ ಬಂದಿತ್ತು. ‘24’ ಚಿತ್ರದಲ್ಲಿ ಸೂರ್ಯ ಈ ತರಹದ ಪಾತ್ರ ಮಾಡಿದರೆ, ‘ಕ್ರಿಶ್‍ 3’ ಚಿತ್ರದಲ್ಲಿ ವಿವೇಕ್‍ ಒಬೆರಾಯ್‍ ಮಾಡಿದ್ದರು. ನೆಟ್ಟಿಗರು ಪೃಥ್ವಿರಾಜ್‍ ಅವರ ಕುಂಭ ಪಾತ್ರವನ್ನು ಆ ಪಾತ್ರಗಳಿಗೆ ಹೋಲಿಕೆ ಮಾಡುತ್ತಿದ್ದಾರೆ.

ಅಂದಹಾಗೆ, ಈ ಚಿತ್ರಕ್ಕೆ ‘ಗ್ಲೋಬ್‍ ಟ್ರೋಟರ್’ ಎಂಬ ಹೆಸರಿಡಲಾಗಿದೆ ಎಂದ ಹೇಳಲಾಗುತ್ತಿದೆ. ಇದಕ್ಕೂ ಮೊದಲು ಈ ಚಿತ್ರವನ್ನು SSMB 28 ಎಂಬ ಹೆಸರಿನಲ್ಲಿ ತಾತ್ಕಾಲಿಕವಾಗಿ ಕರೆಯಲಾಗುತ್ತಿತ್ತು. ಈ ಚಿತ್ರದ ನಿಜವಾದ ಹೆಸರೇನು ಎಂಬ ವಿಷಯ ನವೆಂಬರ್.15ರಂದು ಗೊತ್ತಾಗಲಿದೆ. ಅಂದು ರಾಮೋಜಿ ಫಿಲಂ ಸಿಟಿಯಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಸದ್ಯ ಅದೇ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಮಹೇಶ್‍ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್‍ ಮುಂತಾದವರು ಭಾಗವಹಿಸಿದ್ದಾರಂತೆ.

Tags:
error: Content is protected !!