ಹಳೇ ಪುರಭವನದ ಜಾಗದಲ್ಲಿಯೇ ನೂತನ ಕಟ್ಟಡ ಬೇಡ; ನಿರುಪಯುಕ್ತ ಕಂದಾಯ ವಸತಿ ಗೃಹಗಳ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಒತ್ತಾಯ
ವಿರಾಜಪೇಟೆ: ಇಲ್ಲಿನ ಪುರಸಭೆಯ ಸುಸಜ್ಜಿತವಾದ ಪುರಾತನ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಕೆಲವರ ಸ್ವಾರ್ಥ ಲಾಲಸೆಗೆ ಕಚೇರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಸ್ಥಳಾವಕಾಶ ಇಲ್ಲದ ಹಳೇ ಪುರಭವನದ ಜಾಗದಲ್ಲಿಯೇ ನೂತನ ಕಟ್ಟಡ ನಿರ್ಮಿಸಲು ಹೊರಟಿರುವುದು ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಅಭಿವೃದ್ಧಿ ದೃಷ್ಟಿಯಿಂದ ಪುರಭವನಕ್ಕೆ ೭.೫೦ ಕೋಟಿ ರೂ. ಅನುದಾನ ತಂದಿರುವುದು ಸಂತಸದ ವಿಚಾರ. ಆದರೆ ಸೂಕ್ತ ಸ್ಥಳಾವಕಾಶ ಇಲ್ಲದ ೧೯೩೨ರ ಬ್ರಿಟಿಷರ ಕಾಲದಲ್ಲಿ ೧೫.೨೫ ಸೆಂಟ್ ಜಾಗದಲ್ಲಿ ನಿರ್ಮಾಣಗೊಂಡಿರುವ ಹಳೇ ಕಚೇರಿಯ ಒತ್ತಿನಲ್ಲಿರುವ ಸುಸಜ್ಜಿತ ಪಾರಂಪರಿಕ ಪುರಭವನ ಕಟ್ಟಡವನ್ನು ಕೆಡವುದರಲ್ಲಿ ಅರ್ಥವಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಇದನ್ನು ಓದಿ: ವಿರಾಜಪೇಟೆ ಸ್ವಚ್ಛತೆ: ಪುರಸಭೆ ಪ್ರಯತ್ನಕ್ಕೆ ಸಿಗದ ಮನ್ನಣೆ
ದಿನದಿಂದ ದಿನಕ್ಕೆ ಪಟ್ಟಣ ಬೆಳವಣಿಗೆ ಹೊಂದುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಂದಾಜು ೨೨ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ೧೮ ವಾರ್ಡ್‌ಗಳಿಂದ ೨೩ ವಾರ್ಡ್‌ಗಳಿಗೆ ಪುರಸಭೆ ವಿಸ್ತರಿಸಲ್ಪಟ್ಟಿದೆ. ಪಟ್ಟಣದ ಸುತ್ತ ಮುತ್ತಲ ಗ್ರಾಮ ಪಂಚಾಯಿತಿಗಳ ಕೆಲವು ಭಾಗಗಳು ಪಟ್ಟಣಕ್ಕೆ ಸೇರ್ಪಡೆಗೊಂಡಿವೆ. ಈಗಿರುವ ಪುರಸಭೆಯಲ್ಲಿ ಕಸ ಸಂಗ್ರಹಿಸುವ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇದೆ. ಕೆಲಸ ಕಾರ್ಯಗಳ ನಿಮಿತ್ತ ಪುರಸಭೆಗೆ ಆಗಮಿಸುವ ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಯ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ.ಮುಂದೆ ೨೩ ಸದಸ್ಯರ ವಾಹನಗಳ ಜೊತೆಗೆ ಮತ್ತಷ್ಟು ವಾಹನಗಳ ನಿಲುಗಡೆಗೆ ಜಾಗ ಎಲ್ಲಿದೆ ಎಂದು ಜನರು ಪ್ರಶ್ನಿಸಿದ್ದಾರೆ.
ಹಾಲಿ ಪುರಸಭೆ ಜಾಗವು ಕೆಂಪು ಮಣ್ಣು ಮಿಶ್ರಿತವಾಗಿರುವ ಕಾರಣ ಭವಿಷ್ಯದ ದೃಷ್ಟಿಯಿಂದ ಬೃಹತ್ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇರುವ ಜಾಗದಲ್ಲಿಯೇ ಪುರಸಭೆಯ ಮುಂಭಾಗ ಮುಖ್ಯ ರಸ್ತೆಗೆ ಜಾಗ ಬಿಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಗೇರುವ ಸಾಧ್ಯತೆಗಳಿವೆ. ಆಗ ಮತ್ತೆ ಸ್ಥಳಾವಕಾಶದ ಕೊರತೆ ಎದುರಾಗುತ್ತದೆ. ಹಾಗಾಗಿ ದೂರದೃಷ್ಟಿ ಇಲ್ಲದೆ, ಭವಿಷ್ಯದ ಚಿಂತನೆ ಇಲ್ಲದ ಯಾರೋ ಕೆಲವು ಸ್ವಾರ್ಥಪರ ಹಿತಾಸಕ್ತಿಗಳಿಗೆ ಮಣೆ ಹಾಕಿ ಸುಸಜ್ಜಿತ ಹಾಗೂ ಪಾರಂಪರಿಕವಾದ ಬ್ರಿಟಿಷರ ಕಾಲದ ಕಟ್ಟಡವನ್ನು ಒಡೆಯುವುದು ಮೂರ್ಖತನದ ನಿರ್ಧಾರವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾಲ್ಲೂಕು ಮೈದಾನದ ಒತ್ತಿನಲ್ಲಿ ಕಂದಾಯ ಇಲಾಖೆಗೆ ಸೇರಿದ ೨ ಎಕರೆ ಜಾಗದಲ್ಲಿ ಕಂದಾಯ ಇಲಾಖೆ ವಸತಿ ಗೃಹಗಳಿವೆ. ಅವು ಶಿಥಿಲಾವಸ್ಥೆ ತಲುಪಿದ್ದು, ಕುಸಿಯುವ ಹಂತದಲ್ಲಿವೆ. ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಅಲ್ಲಿರುವ ಒಂದು ಎಕರೆ ಜಾಗವನ್ನು ಬಳಸಿಕೊಂಡರೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ,ಮೂಲ ಸೌಕರ್ಯ ಗಳೊಂದಿಗೆ ವಿಶಾಲವಾದ ಕಟ್ಟಡ, ಸಭಾಂಗಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಶಾಸಕ ಎ.ಎಸ್.ಪೊನ್ನಣ್ಣ ಅವರು ತಾವು ತಂದಿರುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿ ಕೊಂಡು ೨ ಎಕರೆ ಜಾಗ ನಾಳೆ ಭೂಮಾಫಿಯಾಗಳ ಕೈವಶ ಆಗದಂತೆ ನಿಗಾವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದನ್ನು ಓದಿ:ವಿರಾಜಪೇಟೆ | ಮಳೆಯಿಂದ ಪುರಸಭೆ ಕಚೇರಿ ಮೇಲ್ಚಾವಣಿ ಕುಸಿತ : ತಪ್ಪಿದ ಅನಾಹುತ
” ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಅಡ್ಡಿ ಇಲ್ಲ. ಒಂದುಕಟ್ಟಡ ನಿರ್ಮಾಣಮಾಡುವಾಗ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪುರಸಭೆ ನಗರ ಸಭೆಯಾಗಿ ಮೇಲ್ದರ್ಜೆ ಗೇರಿದರೆ ಕಚೇರಿ, ಪಾರ್ಕಿಂಗ್ ಮತ್ತಿತರ ಸಮಸ್ಯೆಗಳೂ ಉದ್ಬವವಾಗುತ್ತವೆ. ಪುರಸಭೆ ಕಚೇರಿಗೆ ಬೇರೆ ಜಾಗವನ್ನು ಗುರುತಿಸಿ ಪುರಾತನ ಕಟ್ಟಡವನ್ನು ಉಳಿಸಿಕೊಳ್ಳಲು ಶಾಸಕರು ಮುಂದಾಗಬೇಕು.”
-ಪಿ.ಎ. ಮಂಜುನಾಥ್, ಜಾ.ದಳ ಅಧ್ಯಕ್ಷರು, ವಿರಾಜಪೇಟೆ
” ಹಾಲಿ ಇರುವ ಕಟ್ಟಡ ಹಳೆಯದಾಗಿದ್ದು,ನೂತನ ಕಟ್ಟಡ ನಿರ್ಮಾಣ ಮಾಡಲು ಜಾಗದ ಮಣ್ಣು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸರ್ಕಾರಕ್ಕೆ ಯೋಜನಾ ವರದಿ ಕಳುಹಿಸಲಾಗುವುದು. ನೂತನ ಕಟ್ಟಡ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.”
-ನಾಚಪ್ಪ, ಮುಖ್ಯಾಧಿಕಾರಿ, ವಿರಾಜಪೇಟೆ ಪುರಸಭೆ
–ಕಾಂಗೀರ ಬೋಪಣ್ಣ





