Mysore
18
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಮಾನವ-ವನ್ಯಜೀವಿ ಸಂಘರ್ಷ; ಇಲಾಖೆ ಕಾರ್ಯವೈಖರಿಗೆ ಬೇಕು ಹೊಸ ಸ್ಪರ್ಶ

ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಎಲ್ಲೆ ಮೀರಿದೆ. ಎಲ್ಲಿ ನೋಡಿದರೂ ಕಾಡುಪ್ರಾಣಿಗಳ ಹಾವಳಿ ಸುದ್ದಿ ಮೇಲಿಂದ ಮೇಲೆ ಕೇಳಿಬರುತ್ತಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಜನವಸತಿ ಪ್ರದೇಶಗಳಲ್ಲಿ ಕಳೆದ ೧೫ ದಿನಗಳಿಂದ ಹುಲಿ, ಚಿರತೆಗಳ ಚಲನವಲನ ಜನರನ್ನು ಇನ್ನಿಲ್ಲದಷ್ಟು ಆತಂಕಕ್ಕೆ ದೂಡಿದೆ. ಇದಕ್ಕೆ ಬಹುಮುಖ್ಯ ಕಾರಣ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮಾನವನ ಪ್ರಾಣ ಹಾನಿಯ ವಿಚಾರ.

ಬಹುತೇಕ ರೈತಾಪಿ ವರ್ಗವೇ ಹೆಚ್ಚಾಗಿರುವ ಮೈಸೂರು ಗ್ರಾಮಾಂತರ ಹಾಗೂ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ವ್ಯಾಪ್ತಿಯಲ್ಲಿ ೧೫ ದಿನಗಳ ಅಂತರದಲ್ಲಿ ಹುಲಿ ದಾಳಿಗೆ ಮೂರು ಅಮೂಲ್ಯ ಮಾನವ ಜೀವಗಳು ಬಲಿಯಾಗಿವೆ. ಹುಲಿ ದಾಳಿಗೆ ಒಳಗಾದ ಒಬ್ಬ ವ್ಯಕ್ತಿ ಮಾರಣಾಂತಿಕವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆ ವ್ಯಕ್ತಿ ಬದುಕುಳಿದರೂ ಜೀವನಪರ್ಯಂತ ಕತ್ತಲೆಯಲ್ಲೇ ಕಳೆಯಬೇಕಿದೆ. ಏಕೆಂದರೆ ಹುಲಿಯು ದಾಳಿಯ ವೇಳೆ ಮುಖಕ್ಕೆ ಪಂಜದಲ್ಲಿ ಬಲವಾಗಿ ಹೊಡೆದಿದ್ದರಿಂದ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದು, ಶಾಶ್ವತ ಕುರುಡು ಆವರಿಸಿದೆ.

ಇವರೊಂದಿಗೆ ಹುಲಿ ದಾಳಿಯಿಂದ ಸಾವಿಗೀಡಾದ ಮೂವರು ರೈತರು ಅವರ ಕುಟುಂಬಗಳಿಗೆ ಆಧಾರವಾಗಿದ್ದವರು. ಮೈಸೂರು ಜಿಲ್ಲೆಯ ಸರಗೂರು, ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿನ ಜನರು ಕಾಡು ಪ್ರಾಣಿಗಳ ದಾಳಿಯಿಂದ ನಲುಗಿ ಹೋಗಿದ್ದಾರೆ. ಕೃಷಿ ಚಟುವಟಿಕೆಗಾಗಿ ಜಮೀನುಗಳಿಗೆ ತೆರಳಲು ಅಂಜುತ್ತಿದ್ದಾರೆ.

ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ವ್ಯಾಪ್ತಿಯಲ್ಲೂ ಹುಲಿಚಲನವಲನದಿಂದ ಜಮೀನು ಕೆಲಸಗಳಿಗೆ ಹೋಗಲಾಗದೆ ಪರಿತಪಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮೈಸೂರಿನ ಇಲವಾಲದ ಆರ್‌ಎಂಪಿ ಆವರಣದಲ್ಲಿ ಹುಲಿ ಚಲನವಲನ ಕಂಡುಬಂದಿದ್ದು, ಮೈಸೂರಿಗರಲ್ಲೂ ಆತಂಕ ಕಾಡುತ್ತಿದೆ. ಕೆಲ ವರ್ಷಗಳ ಹಿಂದೆ ಕಾಡಾನೆಯೊಂದು ನಗರಕ್ಕೆ ನುಗ್ಗಿ ದಾಂದಲೆ ಮಾಡಿದ್ದಲ್ಲದೆ, ವ್ಯಕ್ತಿಯೊಬ್ಬರನ್ನು ತುಳಿದು ಕೊಂದು ಹಾಕಿತ್ತು. ಈಗ ಹುಲಿಯಿಂದ ಇಂತಹ ಘಟನೆ ಮರುಕಳಿಸಿ ಬಿಡಿತ್ತದೋ ಏನೋ ಎಂಬುದು ಮೈಸೂರಿಗರ ಆತಂಕಕ್ಕೆ ಕಾರಣ.

ಇದನ್ನು ಓದಿ: ಸರಗೂರು| ಕಂದಲಿಕೆ ಸಮೀಪದಲ್ಲಿ ಹುಲಿ ಸೆರೆ: ಡಿಎನ್‌ಎ ಟೆಸ್ಟ್‌ಗೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಹುಲಿ ದಾಳಿಯಿಂದ ಒಂದರ ಹಿಂದೆ ಒಂದು ಸಾವು ಸಂಭವಿಸಿದ್ದರಿಂದ ರೊಚ್ಚಿಗೆದ್ದ ಜನ ಮೊನ್ನೆ ಅರಣ್ಯ ಇಲಾಖೆ ಅಽಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದರು. ರೈತಾಪಿ ಜನ ಈ ಹಂತಕ್ಕೆ ತಲುಪ್ಪಿದ್ದಾರೆಂದರೆ ಮೊದಲನೆಯದಾಗಿ ಅವರಲ್ಲಿ ಪ್ರಾಣ ಭಯ ಹೆಚ್ಚಾಗಿದೆ. ಎರಡನೆಯದಾಗಿ ಅರಣ್ಯ ಇಲಾಖೆ ಅವರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುತ್ತಿಲ್ಲ ಎಂದೇ ಅರ್ಥ.

ಕಾಡು ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಒಂದಷ್ಟು ಪರಿಹಾರಗಳನ್ನು ಕೊಟ್ಟು ಕೈತೊಳೆದುಕೊಳ್ಳಬಹುದು. ಆದರೆ, ಆ ಕುಟುಂಬಗಳಿಗೆ ನೈತಿಕ ಶಕ್ತಿ ತಂದುಕೊಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯು ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ, ಕಾಡು ಪ್ರಾಣಿಗಳ ಹಾವಳಿ ತಡೆಗೆ ಬಹು ಆಯಾಮಗಳಲ್ಲಿ ಕ್ರಮ ವಹಿಸಿದರೆ ಇಲಾಖೆಯ ಅಧಿಕಾರಿಗಳ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ.

ಸರಗೂರು ವ್ಯಾಪ್ತಿಯಲ್ಲಿ ನಾಲ್ವರ ಮೇಲೆ ಹುಲಿ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೇಲಧೊಕಾರಿಗಳು ಘಟನೆಯ ಹೊಣೆ ಹೊರಿಸಿ ನುಗು ಅರಣ್ಯ ವಲಯದ ಆರ್‌ಎಫ್ಒ ಅವರನ್ನು ಅಮಾನತ್ತುಗೊಳಿಸಿದ್ದಾರೆ. ಅಷ್ಟಕ್ಕೆ ಇವರ ಜವಾಬ್ದಾರಿ ಮುಗಿದುಹೋಯಿತೆ? ಹಾಗೆಂದು ಕುಳಿತುಕೊಳ್ಳದೆ ವನ್ಯಜೀಗಳ ಹಾವಳಿ ತಡೆಗೆ ವೈಜ್ಞಾನಿಕ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಕಾಡಂಚಿನಲ್ಲಿ ಜನತೆಗೆ ಉಪಟಳ ನೀಡುತ್ತಿರುವ ಆನೆ, ಹುಲಿ, ಚಿರತೆಗಳ ಸೆರೆ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ವನ್ಯಜೀವಿ ಪಶುವೈದ್ಯರಿಲ್ಲ. ಚಿರತೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ೮ರಿಂದ ೧೦ ಮಂದಿ ಪಶುವೈದ್ಯರು ಬೇಕಿದೆ. ಆದರೆ ಈಗಿರುವ ಮಾಹಿತಿಯಂತೆ ಇಬ್ಬರೇ ಇಬ್ಬರು ಪಶು ವೈದ್ಯರಿದ್ದಾರೆ. ಒಂದು ವೇಳೆ ಕೂಂಬಿಂಗ್ ಕಾರ್ಯಾಚರಣೆ ವೇಳೆ ಹುಲಿ, ಚಿರತೆ ಕಾಣಿಸಿಕೊಂಡರೂ ಅವಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲು ಇರುವ ಇಬ್ಬರು ವನ್ಯಜೀವಿ ಪಶುವೈದ್ಯರಿಗಾಗಿ ಕಾಯಬೇಕು. ಒಂದು ವೇಳೆ ಕಾರ್ಯದೊತ್ತಡದಲ್ಲಿ ಆ ವೈದ್ಯರು ಕೂಂಬಿಂಗ್ ಸ್ಥಳಕ್ಕೆ ಆಗಮಿಸುವುದು ಸ್ವಲ್ಪ ತಡವಾದರೂ ಆ ಪ್ರಾಣಿ ಅಲ್ಲಿಂದ ಜಾಗ ಖಾಲಿ ಮಾಡಿರುತ್ತದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ, ಸಣ್ಣಸಣ್ಣ ವಿಚಾರಗಳ ಮೇಲೂ ಇಲಾಖೆ ನಿಗಾವಹಿಸಬೇಕಾಗುತ್ತದೆ.

ಇದನ್ನು ಓದಿ: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಶೀತಲ ಸಮರಕ್ಕೆ ಬ್ರೇಕ್?

ಎಲ್ಲರಿಗೂ ತಿಳಿದಿರುವಂತೆ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಎಷ್ಟಿದೆ? ಕೊರತೆಯಾದರೆ ಅರಣ್ಯ ಪ್ರದೇಶ ವಿಸ್ತಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು? ಎಂಬುದರ ಬಗ್ಗೆ ಯೋಚಿಸಬೇಕಿದೆ. ಹುಲಿಗಳ ಡೇಟಾ ಸಂಗ್ರಹಿಸಿ, ಅವುಗಳ ವಯೋಮಾನ, ವರ್ತನೆ ಮುಂತಾದವುಗಳನ್ನು ಅಧ್ಯಯನ ಮಾಡಬೇಕಿದೆ. ಅದರಲ್ಲಿ ವಯಸ್ಸಾದ ಹುಲಿಗಳು, ಗಾಯಗೊಂಡವುಗಳನ್ನು ಗುರುತಿಸಿ ಅವುಗಳು ಇರುವ ಎಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ. ಅಸಕ್ತ ಹುಲಿಗಳು ಕಾಡಂಚಿನ ಗ್ರಾಮಗಳತ್ತ ನುಗ್ಗದಂತೆ ತಡೆಯಬೇಕಿದೆ. ಅಥವಾ ಸಾಧ್ಯವಾದರೆ ಅಂತಹ ಹುಲಿಗಳನ್ನು ಸೆರೆ ಹಿಡಿದು ಕೂರ್ಗಳ್ಳಿಯಲ್ಲಿರುವ ವನ್ಯಜೀವಿಗಳ ಪುನರ್ವಸತಿ ಕೇಂದ್ರಗಳಿಗೆ ರವಾನಿಸಬೇಕಿದೆ. ಈ ಸಂಬಂಧ ವನ್ಯಜೀವಿ ತಜ್ಞರೊಂದಿಗೆ ಚರ್ಚಿಸಿ ಕ್ರಮಗಳ ಬಗ್ಗೆ ನಿರ್ಧರಿಸಬೇಕಿದೆ. ಜೊತೆಗೆ ಈಗಿರುವ ಅರಣ್ಯ ಪ್ರದೇಶದದಲ್ಲಿ ಲಂಟಾನ ಮುಂತಾದ ಕಳೆಗಿಡಗಳನ್ನು ತೆರವುಗೊಳಿಸಿ ಹುಲ್ಲುಗಾವಲು ಪ್ರದೇಶ ಹೆಚ್ಚಾಗಿಸಿ ವನ್ಯಜೀವಿಗಳಿಗೆ ಪೂರಕ ವಾತಾವರಣ ನಿರ್ಮಿಸಬೇಕು.

” ಅರಣ್ಯ ಪ್ರದೇಶದಲ್ಲಿರುವ ಹುಲಿಗಳ ನಿಖರ ಡೇಟಾ ಸಂಗ್ರಹಿಸಿ, ಅವುಗಳ ವಯೋಮಾನ, ವರ್ತನೆ ಮುಂತಾದವುಗಳನ್ನು ಅಧ್ಯಯನ ಮಾಡಬೇಕಿದೆ. ಅದರಲ್ಲಿ ವಯಸ್ಸಾದ ಹುಲಿಗಳು, ಗಾಯಗೊಂಡವುಗಳನ್ನು ಗುರುತಿಸಿ ಅವುಗಳು ಇರುವ ಎಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಿದೆ. ಅಸಕ್ತ ಹುಲಿಗಳು ಕಾಡಂಚಿನ ಗ್ರಾಮಗಳತ್ತ ನುಗ್ಗದಂತೆ ತಡೆಯಬೇಕಿದೆ”

Tags:
error: Content is protected !!