ಬೆಂಗಳೂರು: ಹಿಂದೂ ಧರ್ಮವನ್ನು ಈಗಲೂ ನೋಂದಣಿ ಮಾಡಿಲ್ಲ. ಅದೇ ರೀತಿ ನಾವು ಕೂಡ ಸಂಘದ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಆರ್‍ಎಸ್‍ಎಸ್ ಸರಸಂಚಾಲಕ ಮೋಹನ್ ಭಾಗವತ್ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಮೋಹನ್ ಭಾಗವತ್ ಅವರು, ಆರ್‍ಎಸ್‍ಎಸ್ ಸ್ಥಾಪನೆಯಾಗಿದ್ದು, 1925ರಲ್ಲಿ. ಆಗ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ಅವರ ಬಳಿ ನಾವು ಆರ್‍ಎಸ್‍ಎಸ್‍ನ್ನು ನೋಂದಣಿ ಮಾಡಿಸಿಕೊಳ್ಳಬೇಕಿತ್ತೇ? ನೀವು ಅದನ್ನು ನಿರೀಕ್ಷೆ ಮಾಡುತ್ತೀರಾ? ನಾವು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದೆವು. ಸ್ವಾತಂತ್ರ್ಯ ಬಂದ ನಂತರವು ಸಂಘಗಳನ್ನು ನೋಂದಣಿ ಮಾಡಬೇಕೆಂಬ ಕಡ್ಡಾಯವಿಲ್ಲ ಎಂದು ಪ್ರತಿಪಾದಿಸಿದರು.
ಸ್ವತಂತ್ರ ಬಂದ ನಂತರವೂ ನಾವು ನೋಂದಣಿ ಕಡ್ಡಾಯ ಮಾಡಿಲ್ಲ. ಯಾರು ಏನೇ ಹೇಳಲಿ ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕವಾಗಿ ಸಂಸ್ಥೆಯಾಗಿ ದೇಶದ ಸಂವಿಧಾನದಡಿಯೇ ಕೆಲಸ ಮಾಡುತ್ತದೆ. ಹೀಗಾಗಿ ನೋಂದಣಿ ಮಾಡಿಸಿಲ್ಲ. ಅಷ್ಟೇ ಏಕೆ ಹಿಂದೂ ಧರ್ಮ ಈಗಲೂ ಎಲ್ಲಾದರೂ ನೋಂದಣಿಯಾಗಿದೆಯೇ ಎಂದು ಮರು ಪ್ರಶ್ನೆ ಮಾಡಿದರು.
ದೇಶದಲ್ಲಿ ಮೂರು ಬಾರಿ ಆರ್‍ಎಸ್‍ಎಸ್ ನಿಷೇಧಕ್ಕೆ ಒಳಪಟ್ಟಿತ್ತು. ಮಹಾತ್ಮ ಗಾಂಧಿ ಹತ್ಯೆ ಪ್ರಕರಣ, ತುರ್ತು ಪರಿಸ್ಥಿತಿ ಮತ್ತು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ ನಿಷೇಧ ಹೇರಲಾಗಿತ್ತು. ಆದರೆ ಈ ಮೂರು ಪ್ರಕರಣಗಳಲ್ಲಿ ಆರ್‍ಎಸ್‍ಎಸ್ ಕೈವಾಡ ಇಲ್ಲದಿರುವುದು ಸಾಬೀತಾಗಿದ್ದರಿಂದ ನ್ಯಾಯಾಲಯ ಕೂಡ ಮಧ್ಯಪ್ರವೇಶ ಮಾಡಲಿಲ್ಲ ಎಂದು ಹೇಳಿದರು.
ನಮ್ಮದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಾವು ಕಾಲ ಕಾಲಕ್ಕೆ ತೆರಿಗೆ ಕಟ್ಟುತ್ತೇವೆ. ಗುರುದಕ್ಷಿಣೆ ಹೊರತಾಗಿ ಆದಾಯ ತೆರಿಗೆ ಇಲಾಖೆ ತೆರಿಗೆ ಕಟ್ಟಲು ಸೂಚಿಸಿದೆ. ಎಲ್ಲವೂ ದಾಖಲೆಯಲ್ಲಿ ಇವೆ ಎಂದು ತಿಳಿಸಿದರು.
ಆರ್‍ಎಸ್‍ಎಸ್‍ಗೆ ಒಂದು ಶಾಶ್ವತವಾದ ಸಂಕೇತ ಬೇಕಾಗಿತ್ತು. ಹೀಗಾಗಿ ನಾವು ಭಾಗವಧ್ವಜವನ್ನು ನಂಬಿದ್ದೇವೆ. ಹಾಗಂತ ದೇಶದ ತ್ರಿವರ್ಣ ಧ್ವಜವನ್ನು ನಾವು ಎಂದಿಗೂ ವಿರೋಧಿಸಿಲ್ಲ. ನಮ್ಮ ರಾಷ್ಟ್ರದ ಹೆಮ್ಮೆಯ ಸಂಕೇತವಾಗಿರುವ ಯಾವಾಗಲೂ ನಾವು ಅತ್ಯುನ್ನತ ಗೌರವ ಕೊಡುತ್ತೇವೆ ಎಂದರು.





