Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಸಮಸ್ಯೆಗೆ ಶೀಘ್ರ ತೆರೆ : ಇಂಧನ ಸಚಿವ ಜಾರ್ಜ್‌

ಹಾಸನ : ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಸತತ 7 ಗಂಟೆ ವಿದ್ಯುತ್ ಪೂರೈಸುವ ಉದ್ದೇಶದಿಂದ ಕುಸುಮ್- ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣ ಮಾಡಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಖಾಸಗಿಯವರು 10 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಸಿಟಿಸಿಎಲ್‌) ವತಿಯಿಂದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ, ಸೂಳೆಕೆರೆ(ಆಗ್ಗುಂದ) ಗ್ರಾಮದಲ್ಲಿ ನಿರ್ಮಿಸಿರುವ 110/11ಕೆವಿ ವಿದ್ಯುತ್‌ ವಿತರಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮರ್ಪಕ ವಿದ್ಯುತ್ ಪೂರೈಕೆಗೆ ಈಗಾಗಲೇ 100 ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸೂಕ್ತ ಜಾಗ ನೀಡಿದರೆ ಇನ್ನಷ್ಟು ಸಬ್‌ಸ್ಟೇಷನ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. “ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದೆ. ಅದನ್ನು ಸಮರ್ಪಕವಾಗಿ ಪೂರೈಸಲು ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರ ಈಗಾಗಲೇ 100 ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ಕ್ರಮ ವಹಿಸಿದೆ. ಇನ್ನಷ್ಟು ಸಬ್‌ಸ್ಟೇಷನ್‌ಗಳು ಬೇಕು ಎಂಬ ಬೇಡಿಕೆ ಇದ್ದು, ಜಾಗದ ಕೊರತೆ ಇದೆ. ಸೂಕ್ತ ಜಾಗ ನೀಡಿದರೆ ಬೇಡಿಕೆಗೆ ತಕ್ಕಂತೆ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು,” ಎಂದು ತಿಳಿಸಿದರು.

ಇದನ್ನೂ ಓದಿ:-ಹುಲಿ ಓಡಾಡುವ ನಕಲಿ(AI) ವಿಡಿಯೋ : ಹರಿಬಿಟ್ಟವರ ಕ್ರಮಕ್ಕೆ ಶಾಸಕ ದರ್ಶನ್‌ ಸೂಚನೆ

“ನಿರಂತರ ಜ್ಯೋತಿ ಯೋಜನೆಯಡಿ ಗೃಹ ಬಳಕೆಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿ ಅದನ್ನು ತ್ವರಿತವಾಗಿ ಬಗೆಹರಿಸಲಾಗುವುದು. ವಿದ್ಯುತ್ ಪೂರೈಕೆ ವಿಚಾರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಮೂಲ ಸೌಕರ್ಯ ಹೆಚ್ಚಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದೆ,” ಎಂದರು. “ಈಗಾಗಲೇ ಅಕ್ರಮ-ಸಕ್ರಮ ಯೋಜನೆ ಮೂಲಕ ರೈತರ ಪಂಪ್ ಸೆಟ್‌ಗಳಿಗೆ ಪಡೆದಿದ್ದ ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅಕ್ರಮ-ಸಕ್ರಮ ಯೋಜನೆಯಲ್ಲಿ 4.5 ಲಕ್ಷ‌ ಅರ್ಜಿಗಳು ಬಾಕಿ ಉಳಿದಿತ್ತು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸಚಿವ ಸಂಪುಟದಲ್ಲಿ ಚರ್ಚಿಸಿ ಸಕ್ರಮಗೊಳಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ,” ಎಂದು ತಿಳಿಸಿದರು.

ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, “ಅರಸೀಕರೆ ಬರಡು ಭೂಮಿ ಎಂದು ಹೇಳಲಾಗುತ್ತಿತ್ತು. ಆದರೆ, ಹಲವು ಯೋಜನೆಗಳ ಮೂಲಕ ತಾಲೂಕಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದೀಗ ರೈತರಿಗೆ ಉತ್ತಮ ವಿದ್ಯುತ್‌ ಸೌಲಭ್ಯ ನೀಡಬೇಕಿದ್ದು, ಅರಸೀಕೆರೆಗೆ 100 ಮೆಗಾವ್ಯಾಟ್ ವಿದ್ಯುತ್‌ ಬೇಕಾಗಿದೆ. ಸದ್ಯ ನಮಗೆ ಅರ್ಧದಷ್ಟು ಮಾತ್ರ ಸಿಗುತ್ತಿದೆ. ರೈತರ ಈ ಬವಣೆಯನ್ನು ಹೋಗಲಾಡಿಸಲು ಕುಸುಮ್-ಸಿ ಯೋಜನೆ ಉಪಯುಕ್ತವಾಗಿದೆ. ಇದರ ಜತೆಗೆ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಕಾರಣ ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಇದೆ. ಈ ಕಾರಣದಿಂದಾಗಿ ನಿರಂತರ ಜ್ಯೋತಿ ಮೂಲಕ ಈ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕಿದೆ‌. ಅಲ್ಲದೇ ತಾಲೂಕು ವ್ಯಾಪ್ತಿಯಲ್ಲಿ ಇನ್ನಷ್ಟು ಸಬ್‌ ಸ್ಟೇಷನ್‌ಗಳನ್ನು ಆರಂಭಿಸಿ ರೈತರ ವಿದ್ಯುತ್‌ ಸಮಸ್ಯೆಯನ್ನು ಹೋಗಲಾಡಿಸಬೇಕು” ಎಂದು ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.

ಸಮಾರಂಭದಲ್ಲಿ ಸಂಸದ ಶ್ರೇಯಸ್‌ ಪಟೇಲ್‌, ಜಿಲ್ಲಾಧಿಕಾರಿ ಲತಾ ಕುಮಾರಿ, ದುಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಎ.ಎಂ. ಅಜ್ಜಯ್ಯ, ಆಗ್ಗುಂದ ಗ್ರಾಪಂ ಅಧ್ಯಕ್ಷೆ ಕವಿತಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಶೇಖರ್‌, ಕೆಪಿಟಿಸಿಎಲ್‌ ಮುಖ್ಯ ಅಧೀಕ್ಷಕ ಇಂಜಿನಿಯರ್‌ ಸತೀಶ್‌ ಚಂದ್ರ, ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್ ಇತರರಿದ್ದರು. ಸೋಲಾರ್ ಪಾರ್ಕ್ ಪರಿಶೀಲನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸಂಕೋಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು, ಕುಸುಮ್- ಸಿ ಯೋಜನೆಯಡಿ ಗ್ರಾಮದ 25 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ “ಸೋಲಾರ್ ಪಾರ್ಕ್” ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್‌ ನೀಡಬೇಕೆಂಬ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕುಸುಮ್‌-ಸಿ ಯೋಜನೆ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಎಂದರು. ಅಲ್ಲದೇ, ಗುತ್ತಿಗೆದಾರರು ಸರಿಯಾದ ಸಮಯದಲ್ಲಿ ಕೆಲಸ ಆರಂಭಿಸದಿದ್ದರೆ ಅವರಿಗೆ ನೋಟಿಸ್ ನೀಡಿ, ಟೆಂಡರ್‌ ರದ್ದುಪಡಿಸಿ, ಹೊಸ ಟೆಂಡರ್ ಕರೆದು ಬೇರೆಯವರಿಗೆ ನೀಡುವಂತೆ ಸೆಸ್ಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Tags:
error: Content is protected !!