Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

SCSP/TSP ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ : ಸಂಪುಟ ಸಭೆಯಲ್ಲಿ ಎಚ್‌ಸಿಎಂ ಗರಂ

ಬೆಂಗಳೂರು : ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ನೀಡದ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ರೋಷಾವೇಶ ಪ್ರದರ್ಶಿಸಿದ್ದಾರೆ. ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ಅನುದಾನ ಹಂಚಿಕೆ ಮಾಡದಿರುವುದು ಯಾಕೆ? ಏನು ಅಂದುಕೊಂಡಿದ್ದೀರಿ? ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರುಧ್ವನಿಯಲ್ಲಿಯೇ ಸಚಿವರು ಪ್ರಶ್ನಿಸಿದ್ದು, ಮಹದೇವಪ್ಪ ಅವರ ಆಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿ ಆದ ಪ್ರಸಂಗ ನಡೆದಿದೆ.

ಸಚಿವ ಸಂಪುಟ ಸಭೆ ವೇಳೆ ನೇರವಾಗಿ ಸಿಎಂಗೆ ಹೇಳದೆ ಸಂಪುಟ ಸಹೋದ್ಯೋಗಿಗಳ ಮೇಲೆ ಮಹದೇವಪ್ಪ ಅಸಮಾಧಾನ ಹೊರಹಾಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ಬಗ್ಗೆ ಚರ್ಚೆ ವೇಳೆ ಗಂಗಾಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿಷಯದಲ್ಲಿ ಸಚಿವ ಕೆ.ಜೆ.ಜಾರ್ಜ್ ಮತ್ತು ಎಚ್.ಸಿ.ಮಹದೇವಪ್ಪ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಈ ವೇಳೆ ನಾನು ಎದ್ದು ಹೊರಟೇ ಬಿಡುತ್ತೇನೆಂದು ಸಚಿವ ಮಹದೇವಪ್ಪ ಕೂಗಾಡಿದ್ದಾರೆ.

ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಈ ಹಿಂದಿನಿಂದಲೂ ವಿಪಕ್ಷಗಳು ಮಾಡುತ್ತಲೇ ಬಂದಿದ್ದವು. ಈ ವಿಚಾರ ವಿಧಾನ ಪರಿಷತ್‌ನಲ್ಲೂ ಭಾರಿ ಚರ್ಚೆಗೆ ಕಾರಣವಾಗಿತ್ತು. ಹಣವನ್ನು ಬೆರೆ ಯೋಜನೆಗಳಿಗೆ ಬಳಸಿದ ಪರಿಣಾಮ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಆಡ್ಡಿಯಾಗಿದೆ ಎಂದು ಸದಸ್ಯರಾದ ಹೇಮಲತಾ ನಾಯಕ್ ಹಾಗೂ ಶರವಣ ಆರೋಪಿಸಿದ್ದರು.

ಇದನ್ನೂ ಓದಿ:-ಕರ್ನೂಲ್‌ ಪ್ರಕರಣ ಬಳಿಕ ಎಚ್ಚೆತ್ತಾ ಸಾರಿಗೆ ಇಲಾಖೆ : ನಿಯಮ ಬಾಹಿರವಾಗಿ ಜನರನ್ನು ಸಾಗಿಸುತ್ತಿದ್ದ 6 ಬಸ್‌ ಜಪ್ತಿ

ಆದರೆ, ಆರೋಪ ನಿರಾಕರಿಸಿದ್ದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಗ್ಯಾರಂಟಿ ಯೋಜನೆಗಳಿಗೆ ಈ ಹಣವನ್ನು ಬಳಸಿಲ್ಲ. ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲು ಆಗುವುದಿಲ್ಲ. ಮೀಸಲಿಟ್ಟ ಹಣವನ್ನು ಆ ಸಮುದಾಯದ ಜನರಿಗೆ ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಅಂದು ಬೇರೆ ಯೋಜನೆಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಬಳಕೆಯಾಗಿಲ್ಲ ಎಂದು ಸದನದಲ್ಲಿ ಉತ್ತರಿಸಿದ್ದ ಸಚಿವರೇ ಇಂದು ಆ ಹಣದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗರಂ ಆಗಿದ್ದಾರೆ. ಏನು ಅಂದುಕೊಂಡಿದ್ದೀರಿ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿರೋದು ಭಾರೀ ಕುತೂಹಲ ಮೂಡಿಸಿದೆ. ಜೊತೆಗೆ ವಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಇಂಬು ನೀಡಿದೆ.

Tags:
error: Content is protected !!