ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ. ಆದರೆ ಹಣೆಯಲ್ಲಿ ಬರೆದಿದ್ದರೆ ಸಾಧ್ಯವಾಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಅಣ್ಣನನ್ನು ಮುಖ್ಯಮಂತ್ರಿಯಾಗಿಸಬೇಕೆಂಬ ಆಸೆ ನನಗಿದೆ. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಡಿ.ಕೆ.ಶಿವಕುಮಾರ್ ಅವರು ಪಕ್ಷದ ಶಿಸ್ತಿಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:-ಅಣ್ಣನನ್ನು ಮುಖ್ಯಮಂತ್ರಿಯಾಗಿಸಬೇಕೆಂಬ ಆಸೆ ನನಗಿದೆ: ಮಾಜಿ ಸಂಸದ ಡಿ.ಕೆ.ಸುರೇಶ್
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಥವಾ ಪ್ರಯತ್ನ ಪಡುವ ಅಗತ್ಯವಿಲ್ಲ. ಹಣೆಯಲ್ಲಿ ಬರೆದಿದ್ದರೆ ಅವಕಾಶ ಸಿಗುತ್ತದೆ. ದಲಿತ ಮುಖ್ಯಮಂತ್ರಿಯ ಬಗ್ಗೆ ಬೇಡಿಕೆಗಳು ಕೇಳಿ ಬರುತ್ತಿರುವುದರಲ್ಲಿ ತಪ್ಪಿಲ್ಲ. ದಲಿತರು ಸಮಾವೇಶ ಮಾಡುವುದು ಕೂಡ ತಪ್ಪಲ್ಲ, ಈ ಎಲ್ಲಾ ಬೆಳವಣಿಗೆಗಳು ಪಕ್ಷ ಸಂಘಟನೆಗೆ ಪೂರಕವಾಗಿವೆ.
ಇನ್ನು 95-98 ವಯಸ್ಸು ಆಗಿರುವವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದು ತಪ್ಪಲ್ಲ ಎಂದರು.
ರಾಜ್ಯದಲ್ಲಿ 5 ವರ್ಷ ಸರ್ಕಾರ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಜನರು 135 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಿರುವಾಗ ಎರಡೂವರೆ ವರ್ಷ, ಮೂರು ವರ್ಷ ಎಂಬ ಅಧಿಕಾರ ಹಂಚಿಕೆಯ ಚರ್ಚೆಗಳು ಅಪ್ರಸ್ತುತ ಎಂದರು.





