Mysore
21
clear sky

Social Media

ಬುಧವಾರ, 21 ಜನವರಿ 2026
Light
Dark

ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ

ಮೈಸೂರು : ನಂಜನಗೂಡು ತಾಲೂಕಿನ ಮುಳ್ಳೂರು ಸಮೀಪದ ಬೆಣ್ಣೆಗೆರೆಯ ರಾಜಶೇಖರ್ ಎಂಬವರನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆಯೇ ಮುಳ್ಳೂರಿನಿಂದ ಸುಮಾರು 10 ಕಿ.ಮೀ. ದೂರದ ಹೀರೇಗೌಡನಹುಂಡಿ ಸಮೀಪ ಜಮೀನಿನಲ್ಲಿ ಹುಲಿಯೊಂದು ಪತ್ತೆಯಾಗಿದ್ದು, ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ರಾಜಶೇಖರ್ ಅವರನ್ನು ಬಲಿ ಪಡೆದಿದ್ದ ಹುಲಿಯ ಸೆರೆಗೆ ಮಂಗಳವಾರವೂ ರೋಹಿತಾ, ಭೀಮಾ, ಮಹೇಂದ್ರ ಸಾಕಾನೆಗಳ ಮೂಲಕ ಬಂಡೀಪುರ ಅರಣ್ಯ ವ್ಯಾಪ್ತಿಯ ನುಗು, ಕಲ್ಕರೆ, ಯಡಿಯಾಲ ಉಪ ವಿಭಾಗದ ಸುಮಾರು 130ಕ್ಕೂ ಅಧಿಕ ಸಿಬ್ಬಂದಿ ಕೂಂಬಿಂಗ್ ಆರಂಭಿಸಿ ಹಂತಕ ಹುಲಿಗಾಗಿ ತೀವ್ರಶೋಧ ನಡೆಸುತ್ತಿರುವಾಗಲೇ, ಬೆಳಗ್ಗೆ ಸುಮಾರು 11 ಗಂಟೆಗೆ ವೇಳೆಗೆ ಸಮೀಪದ ಹೀರೇಗೌಡನ ಹುಂಡಿ ಬಳಿ ಸತೀಶ್ ಎಂಬವರ ಜಮೀನಿನಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ರೈತರು ನೀಡಿದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆತಂದ ಅರಣ್ಯ ಇಲಾಖೆ ಹುಲಿಗಾಗಿ ಶೋಧ ಆರಂಭಿಸಿದೆ. ಬಳಿಕ ಹುಲಿ ಚಲನವಲನಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿಯು ಸಂಜೆ ಸುಮಾರು 6 ಗಂಟೆ ವೇಳೆ ಹುಲಿಯು ಸಮೀಪದ ಹನುಮಂತನಗರ ಎಂಬಲ್ಲಿ ಪತ್ತೆಯಾಗಿರುವ ಖಚಿತ ಮಾಹಿತಿ ಮಾಹಿತಿ ಮೇರೆಗೆ ಸಾಕಾನೆ ಮೂಲಕ ತೆರಳಿದ ಡಾ.ರಮೇಶ್ ಹಾಗೂ ಡಾ.ವಸೀಂ ಮಿರ್ಜಾ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಸದ್ಯ ಸೆರೆಯಾಗಿರುವ ಹುಲಿ ಸುಮಾರು 6 ವರ್ಷದ ಹೆಣ್ಣು ಹುಲಿಯಾಗಿದ್ದು, ಹುಲಿಯು ಯಾವುದೇ ಗಾಯವಿಲ್ಲದೆ ಆರೋಗ್ಯಕರವಾಗಿದೆ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ.

ಸ್ಥಳಕ್ಕೆ ಶಾಸಕ  ದರ್ಶನ್ ಧ್ರುವನಾರಾಯಣ ಭೇಟಿ:

ಇದೇ ವೇಳೆ ಮಂಗಳವಾರ ಬೆಳಗ್ಗೆ ಮುಳ್ಳೂರಿಗೆ ಭೇಟಿ ನೀಡಿದ ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತನ ಮೇಲೆ ಹುಲಿ ದಾಳಿಯಾಗಿರುವ ದುಃಖಕರ ವಿಚಾರ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು, ಸ್ಥಳೀಯರು ಅದಕ್ಕೆ ಸಹಕಾರ ನೀಡಬೇಕು. ಯಾರೂ ಆತಂಕಕ್ಕೊಳಗಾಗುವುದು ಬೇಡ. ಮಾನವ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು. ದಾಳಿಗೊಳಗಾದ ರೈತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಪ್ರಸ್ತುತ ಸೆರೆಯಾದ ಹುಲಿ ಭಾನುವಾರ ರೈತನ ಮೇಲೆ ದಾಳಿ ಮಾಡಿ ಬಲಿ ಪಡೆದ ಹುಲಿಯೋ ಅಥವಾ ಇದು ಬೇರೆ ಹುಲಿಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಆಂದೋಲನ ಪತ್ರಿಕೆಗೆ ಮಾಹಿತಿ ನೀಡಿದರು

Tags:
error: Content is protected !!