ಕೇಂದ್ರ ಸರ್ಕಾರದ ಅಂಕಿ ಸಂಖ್ಯಾ ಮತ್ತು ಕಾರ್ಯ ಕ್ರಮ ಅನುಷ್ಠಾನ ಇಲಾಖೆ (Department of Statistics and Programme Implementation ಯ ಅರ್ಧ ವಾರ್ಷಿಕ ಪತ್ರಿಕೆ ‘ಸರ್ವೇಕ್ಷಣ’ದಲ್ಲಿ ಕೌಟುಂಬಿಕ ಹಣಕಾಸು ಬಗ್ಗೆ ಬಹು ಮಾನದಂಡ (Multi Indicaters) ಸಮೀಕ್ಷೆಯವರದಿ ಪ್ರಕಟವಾಗಿದೆ. ೨೦೨೦-೨೧ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ೨೦೨೨ರಲ್ಲಿ ಕೇಂದ್ರೀಯ ಅಂಕಿ ಸಂಖ್ಯಾ ಕಚೇರಿಯ ೭೮ನೇ ಸಮೀಕ್ಷೆಯ ವರದಿ ಇದಾಗಿದೆ. ಅದರಲ್ಲಿಯ ಕೌಟುಂಬಿಕ ಸಾಲಗಳಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗಿದೆ.
ಸಮೀಕ್ಷೆಯಲ್ಲಿ ಹಿರಿಯ ನಾಗರಿಕರೂ ಸೇರಿ ೧೫ ವರ್ಷ ವಯಸ್ಸು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಕೌಟುಂಬಿಕ ಸಾಲಗಳನ್ನು ಪರಿಗಣಿಸಲಾಗಿದೆ. ಸಾಲದ ಮೊತ್ತ ಪ್ರತಿ ವ್ಯಕ್ತಿಯ ಸರಾಸರಿ ೫೦೦ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿಗೆ ಇರುತ್ತದೆ. ಕುಟುಂಬದ ಗಾತ್ರ ಚಿಕ್ಕದಿದ್ದಷ್ಟೂ ಸಾಲದ ಮೊತ್ತ ಹೆಚ್ಚಾಗಿರುತ್ತದೆ. ಅಂದರೆ ಸಾಮಾನ್ಯವಾಗಿ ಚಿಕ್ಕ ಕುಟುಂಬದ ನಿತ್ಯದ ವೆಚ್ಚಗಳು ಕಡಿಮೆ ಇದ್ದು ಸಾಲ ತೀರಿಸುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದು ಅರ್ಥೈಸಬಹುದು. ಸಾಲ ಕೊಡುವವರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದಂತೆ ಮತ್ತು ಹಣಕಾಸು ಒಳಗೊಳ್ಳುವಿಕೆ (Financial Inclusion) ಹೆಚ್ಚಾದಂತೆ ಸಾಲದ ಮೊತ್ತಗಳೂ ಹೆಚ್ಚುತ್ತವೆ ಎಂಬುದು ಸಮೀಕ್ಷೆಯಿಂದ ತಿಳಿಯುತ್ತದೆ.
ಅಖಿಲ ಭಾರತ ಮಟ್ಟದಲ್ಲಿ ೨೦೨೧ರಲ್ಲಿ ಇದ್ದಂತೆ ಸರಾಸರಿ ಶೇ.೧೫ರಷ್ಟು ಜನರು ಕೌಟುಂಬಿಕ ಸಾಲದ ಭಾರ ಹೊಂದಿದವರು ಇದ್ದರೆಂದು ಕಂಡುಬರುತ್ತದೆ. ಈ ಪ್ರಮಾಣ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ಇರುತ್ತದೆ. ಅತಿ ಹೆಚ್ಚು ಶೇ.೪೩.೭ ಆಂಧ್ರ ಪ್ರದೇಶದಲ್ಲಿದ್ದರೆ ಅತಿ ಕಡಿಮೆ ಶೇ.೩.೪ ದೆಹಲಿಯಲ್ಲಿದ್ದಾರೆ. ಇದರ ಅರ್ಥ ಪ್ರತಿ ೧೦೦೦ ಜನರಲ್ಲಿ ಆಂಧ್ರ ಪ್ರದೇಶದಲ್ಲಿ ೪೮೭ ಜನರು ಮತ್ತು ಕೇವಲ ೩೪ ಜನರು ದೆಹಲಿಯಲ್ಲಿ ಕೌಟುಂಬಿಕ ಸಾಲ ಹೊಂದಿದವರು ಇದ್ದಾರೆ. ಇವೆರಡರ ನಡುವೆ ಬೇರೆ ಬೇರೆ ಪ್ರಮಾಣದಲ್ಲಿ ಇತರೆಡೆಗಳಲ್ಲಿ ಇದ್ದಾರೆ.
ಇದನ್ನು ಓದಿ: ಸ್ತ್ರೀಶಕ್ತಿ ಉತ್ಪನ್ನಗಳಿಗೆ ಆನ್‌ಲೈನ್ ಮಾರಾಟ ವ್ಯವಸ್ಥೆ
ವಿಶೇಷವೆಂದರೆ ದಕ್ಷಿಣದ ಐದು ರಾಜ್ಯಗಳಲ್ಲಿಯೇ ಅತಿ ಹೆಚ್ಚುಜನ ಕೌಟುಂಬಿಕ ಸಾಲಗಾರರಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಸಾಲದ ಕಂತು ಮತ್ತು ಬಡ್ಡಿಗಳನ್ನು ಪಾವತಿ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.ಕಾಕತಾಳೀಯವೆಂಬಂತೆ ಈ ರಾಜ್ಯಗಳ ರಾಜ್ಯ ಒಟ್ಟಾದಾಯ (State Gross Domestic Produc) ಮತ್ತು ಜನರ ಸರಾಸರಿ ತಲಾ ಆದಾಯಗಳು ಇತರ ರಾಜ್ಯಗಳಿಗಿಂತ ಹೆಚ್ಚಾಗಿಯೇ ಇರುತ್ತವೆ ಎಂಬುದು ಇಲ್ಲಿ ಗಮನಾರ್ಹ.
ಕೌಟುಂಬಿಕ ಸಾಲಗಳ ಅವಶ್ಯಕತೆ: ಪ್ರತಿಯೊಂದು ಕುಟುಂಬವು ಒಂದಿಲ್ಲೊಂದು ಕಾರಣಕ್ಕಾಗಿ ಒಂದಿಲ್ಲೊಂದು ಸಮಯದಲ್ಲಿ ಸಾಲ ಪಡೆಯುವುದು ಅನಿವಾರ್ಯ. ಕೌಟುಂಬಿಕ ಆದಾಯಗಳಲ್ಲಿ ಏರುಪೇರುಗಳಾದಾಗ ಮತ್ತು ವೆಚ್ಚಗಳಲ್ಲಿ ಹೆಚ್ಚು ಕಡಿಮೆ ಯಾದಾಗ ಪರಿಸ್ಥಿತಿಯನ್ನು ನಿಭಾಯಿಸಲು ಸಾಲ ಬೇಕಾಗುತ್ತದೆ. ಅದು ಕೈಸಾಲ ಇರಬಹುದು, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಇರಬಹುದು. ಸಾಂಸ್ಥಿಕ ಅಥವಾ ಖಾಸಗಿ ಸಾಲ ಇರಬಹುದು. ಕೈ ಸಾಲಗಳನ್ನು ಸ್ನೇಹಿತರು ಮತ್ತು ಹಿತೈಷಿಗಳಿಂದ ಪಡೆಯಬಹುದು. ಸಾಮಾನ್ಯವಾಗಿ ಇದಕ್ಕೆ ಬಡ್ಡಿ ಇರುವುದಿಲ್ಲ.
ಅವಶ್ಯಕತೆ ಮುಗಿದ ಮೇಲೆ ಅಲ್ಪಾವಧಿಯಲ್ಲಿ ಇದನ್ನು ತೀರಿಸುವುದು ಸ್ವಾಭಾವಿಕ ಪ್ರಕ್ರಿಯೆ. ಈ ಅವಧಿಯಲ್ಲಿ ಸಾಲ ಇರುತ್ತದೆ, ಆದರೆ ದಾಖಲೆಗಳಿರುವುದು ಅಪರೂಪ. ಮೊದಮೊದಲು ಕೌಟುಂಬಿಕ ಸಾಲಗಳು ಅನುತ್ಪಾದಕ ಎಂದು ಬ್ಯಾಂಕುಗಳೂ ಸೇರಿ ಸಾಂಸ್ಥಿಕ ಸಾಲಗಳು ಲಭ್ಯವಾಗುತ್ತಿರಲಿಲ್ಲ. ಬ್ಯಾಂಕ್ ರಾಷ್ಟ್ರೀಕರಣವಾದ ನಂತರ ಕೌಟುಂಬಿಕ ವೆಚ್ಚಗಳಿಗೂ ಸಾಂಸ್ಥಿಕ ಸಾಲಗಳು ದೊರೆಯಲಾರಂಭಿಸಿದವು. ಆಸ್ತಿ ಖರೀದಿಯಲ್ಲಿ ಸಂಪನ್ಮೂಲಗಳ ಕೊರತೆ ಇದ್ದಾಗ ಮಕ್ಕಳ / ಪೋಷಿತರ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ವೆಚ್ಚದ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು, ಮದುವೆ ಮುಂತಾದ ಸಮಾರಂಭಗಳನ್ನು ನಿರ್ವಹಿಸಲು ಮತ್ತು ಅನಿರೀಕ್ಷಿತ ದೊಡ್ಡ ವೆಚ್ಚಗಳು ಎದುರಾದಾಗ ಕುಟುಂಬಗಳು ಸಾಲಕ್ಕೆ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ.
ಹಲವು ಉದ್ದೇಶಗಳಿಗೆ ಸಾಂಸ್ಥಿಕ ಸಾಲ ದೊರೆಯುತ್ತದೆ. ಅದು ದೊರೆಯದಿದ್ದಾಗ ಅನಿವಾರ್ಯವಾಗಿ ಹೆಚ್ಚು ಬಡ್ಡಿ ದರದ ಖಾಸಗಿ ಸಾಲಗಳಿಗೆ ಮೊರೆ ಹೋಗಬೇಕಾಗುತ್ತದೆ. ಅದು ಕುಟುಂಬದ ಹಣಕಾಸು ಸ್ಥಿತಿಗೆ ಧಕ್ಕೆ ತರುವ ಭಯವಿರುತ್ತದೆ. ಅನವಶ್ಯಕ ವೆಚ್ಚಗಳ ಮೇಲೆ ಕಡಿವಾಣ ಹಾಕಿ ಇಂಥ ಹೆಚ್ಚು ಬಡ್ಡಿ ದರದ ಸಾಲಗಳನ್ನು ತೆಗೆದುಕೊಳ್ಳದೇ ಇರುವುದು ಒಳ್ಳೆಯದು. ಸಾಲ ಮಾಡುವಾಗ ಅದರ ಅವಶ್ಯಕತೆ ಮತ್ತು ಅನಿವಾರ್ಯತೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ಸಾಲ ತೀರಿಸುವ ಸಾಮರ್ಥ್ಯ ಮತ್ತು ಸಂಪ ನ್ಮೂಲಗಳನ್ನು ಪರಿಶೀಲಿಸಿ ಅವಶ್ಯವಿರುವಷ್ಟು ಸಾಲ ಪಡೆಯಬೇಕು. ಸಮಯಕ್ಕೆ ಸರಿಯಾಗಿ ಸಾಲಗಳನ್ನು ತೀರಿಸುವುದು ಕೌಟುಂಬಿಕ ಆರ್ಥಿಕ ಭವಿಷ್ಯ ಮತ್ತು ಭವಿಷ್ಯತ್ತಿನಲ್ಲಿ ಸಾಲ ಪಡೆಯುವ ಸಾಮರ್ಥ್ಯ( creditworthiness) ಕ್ಕೆ ಧಕ್ಕೆಯಾಗಬಾರದು.
” ವಿಶೇಷವೆಂದರೆ ದಕ್ಷಿಣದ ಐದು ರಾಜ್ಯಗಳಲ್ಲಿಯೇ ಅತಿ ಹೆಚ್ಚು ಜನ ಕೌಟುಂಬಿಕ ಸಾಲಗಾರರಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಸಾಲದ ಕಂತು ಮತ್ತು ಬಡ್ಡಿಗಳನ್ನು ಪಾವತಿ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.”
–ಪ್ರೊ.ಆರ್.ಎಂ.ಚಿಂತಾಮಣಿ





