ಸರಗೂರು : ಹುಲಿ ದಾಳಿಯಿಂದ ಮೃತಪಟ್ಟ ನಮ್ಮ ತಂದೆಯ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಮೃತಪಟ್ಟ ರೈತ ರಾಜಶೇಖರ್ ಅವರ ಮಗ ಶಿವಾನಂದ, ತಪ್ಪಿತಸ್ಥ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸರಗೂರು ತಾಲೂಕಿನ ಬೆಣ್ಣೆಗೆರಿ ಗ್ರಾಮದವಾರದ ನಮ್ಮ ತಂದೆ ರಾಜಶೇಖರ್ (58) ಭಾನುವಾರ ನಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದರು. ಈ ವೇಳೆ ಹುಲಿ ದಾಳಿ ಮಾಡಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಬೆಳಿಗ್ಗೆ 11 ಗಂಟೆಗೆ ಘಟನೆ ನಡೆದಿದೆ. ತಕ್ಷಣ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಬರುವಷ್ಟರಲ್ಲಿ ಸಂಜೆ 4 ಗಂಟೆ ಆಗಿತ್ತು. ಅಲ್ಲದೇ ನಮ್ಮ ಜಮೀನಿನ ಸುತ್ತಮುತ್ತ ಹುಲಿ ಓಡಾಟದ ಗುರುತು ಇತ್ತು. ಹಾಗಾಗಿ ಬೋನಿಡುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿತ್ತು. ಅವರ ಈ ನಿರ್ಲಕ್ಷ್ಯದಿಂದಲೇ ನಮ್ಮ ತಂದೆಯ ಸಾವಾಗಿದೆ. ಕೂಡಲೇ ಇಬ್ಬರು ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:-ಮತ ಚೋರಿ ತಡೆಗೆ ʻಕೈʼ ಕಾರ್ಯಪಡೆ : ರಾಜ್ಯದಲ್ಲಿ ಮೊದಲ ಬಾರಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಪಡೆ ಸಜ್ಜು
ತಂದೆಯ ಶವವನ್ನು ರಾತ್ರೋರಾತ್ರಿ ನಮ್ಮ ಅನುಮತಿ ಪಡೆಯದೇ ಮೈಸೂರಿಗೆ ರವಾನಿಸಿದ್ದೇಕೆ ಎಂಬುದೂ ಗೊತ್ತಿಲ್ಲ. ಇಲ್ಲಿಗೆ ಅರಣ್ಯ ಸಚಿವರು ಶವ ನೋಡಲು ಬಂದಿದ್ದು ನಮಗೆ ಬೇಸರ ತರಿಸುತ್ತದೆ. ಕೂಡಲೇ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಅಮಾನತು ಮಾಡಬೇಕು. ನನಗೆ ಯಾವುದೇ ಪರಿಹಾರ ಬೇಕಿಲ್ಲ. ಮುಂದೆ ಈ ರೀತಿ ಘಟನೆ ಆಗದಂತೆ ಕ್ರಮವಹಿಸಿದರೆ ಸಾಕು ಎಂದರು.
ಸಚಿವ ಖಂಡ್ರೆ ಪ್ರತಿಕ್ರಿಯೆ
ಸರಗೂರು ಬಳಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಅವರ ಮೃತದೇಹವನ್ನು ಮೈಸೂರಿಗೆ ತಂದಿರುವ ವಿಚಾರ ನನಗೆ ಮೈಸೂರಿಗೆ ಬರುವ ಮಾರ್ಗದಲ್ಲಿ ತಿಳಿಯಿತು. ಹಾಗಾಗಿ ಅಂತಿಮ ನಮನ ಸಲ್ಲಿಸಲು ಬಂದಿದ್ದೇನೆ. ಮೈಸೂರಿಗೆ ಏಕೆ ಪಾರ್ಥವ ಶರೀರ ತಂದಿದ್ದಾರೆ ಎಂಬುದು ತಮಗೆ ತಿಳಿದಿಲ್ಲ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.





