Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಹುಲಿ ದಾಳಿಗೆ ರೈತ ಬಲಿ ಪ್ರಕರಣ: ಸಚಿವ ಈಶ್ವರ್‌ ಖಂಡ್ರೆಗೆ ರೈತರ ಘೇರಾವ್‌

ಮೈಸೂರು: ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿಗೆ ರೈತ ರಾಜಶೇಖರ್‌ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಮುಂದೆ ರೈತರು ಸಚಿವ ಈಶ್ವರ್‌ ಖಂಡ್ರೆ ಘೇರಾವ್‌ ಹಾಕಿದ ಘಟನೆ ಜರುಗಿತು.

ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಹಸುಗಳನ್ನು ಮೇಯಿಸುವ ವೇಳೆ ಹುಲಿ ದಾಳಿಗೆ ಸಿಲುಕಿ ರೈತ ರಾಜಶೇಖರ್‌ ಸಾವನ್ನಪ್ಪಿದ್ದರು. ವಿಷಯ ಗೊತ್ತಿದ್ದರೂ ತಾಲ್ಲೂಕಿನಲ್ಲೇ ಇದ್ದ ಸಚಿವ ಈಶ್ವರ್‌ ಖಂಡ್ರೆ ಅವರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿರಲಿಲ್ಲ. ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಈಶ್ವರ್‌ ಖಂಡ್ರೆ ಸ್ಥಳಕ್ಕೆ ಬರುವಂತೆ ಪ್ರತಿಭಟನೆ ನಡೆಸಿದ್ದರು.

ಇಂದು ಮೈಸೂರಿನ ಕೆ.ಆರ್.‌ಆಸ್ಪತ್ರೆ ಶವಾಗಾರದಲ್ಲಿ ಮೃತ ರೈತನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಶವಾಗಾರದ ಬಳಿ ಆಗಮಿಸಿದ ಸಚಿವ ಈಶ್ವರ್‌ ಖಂಡ್ರೆಗೆ ರೈತರು ಘೇರಾವ್‌ ಹಾಕಿ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡುವಂತೆ ಒತ್ತಾಯಿಸಿದರು.

ಇದನ್ನು ಓದಿ: ಹುಲಿ ದಾಳಿ | ಮಹದೇವಗೌಡ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ : ಸಿ.ಎಂ

ರೈತನ ಸಾವಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಆ ಭಾಗದಲ್ಲಿ ಪ್ರಾಣಿ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಮಾಡಬೇಕು. ಘಟನೆಗೆ ಕಾರಣೀಕರ್ತರಾದವರನ್ನು ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ರೈತನ ಮೃತದೇಹವನ್ನು ಮೈಸೂರಿಗೆ ತಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ನಿನ್ನೆ ಸರಗೂರಿನಲ್ಲಿ ಇದ್ದರೂ ಸಚಿವರು ಘಟನಾ ಸ್ಥಳಕ್ಕೆ ಬರಲಿಲ್ಲ. ಇವತ್ತು ಘಟನಾ ಸ್ಥಳದಲ್ಲಿ ಗಲಾಟೆ ಆಗುತ್ತೆ ಎಂದು ಎಲ್ಲರಿಗೂ ಗೊತ್ತಿತ್ತು. ಅದಕ್ಕೆ ಮೈಸೂರಿಗೆ ಮೃತದೇಹವನ್ನು ತಂದಿದ್ದೀರಿ ಎಂದು ಸಚಿವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಗಲಾಟೆ‌ ಹೆಚ್ಚಾಗುತ್ತಿದ್ದಂತೆ ಯಾವುದೇ ಸ್ಪಷ್ಟ ನಿಲುವು ತಾಳದ ಸಚಿವ ಈಶ್ವರ್‌ ಖಂಡ್ರೆ ಅವರು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡುತ್ತೇವೆ. ಹೆಚ್ಚಿನ ಪರಿಹಾರಕ್ಕೂ ಪ್ರಯತ್ನಿಸುತ್ತೇವೆ. ಯಾರೇ ಅಕ್ರಮ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಸ್ಥಳದಿಂದ ತೆರಳಿದರು.

ಈ ವೇಳೆ ನಮ್ಮ ಪ್ರಶ್ನೆಗಳಿಗೆ ಸಚಿವ ಈಶ್ವರ್‌ ಖಂಡ್ರೆ ಸರಿಯಾದ ಉತ್ತರ ನೀಡಲಿಲ್ಲ ಎಂದು ಆರೋಪಿಸಿದ ರೈತರು, ಶವಾಗಾರದ ಮುಂದೆ ಧರಣಿ ನಡೆಸಿದರು.

Tags:
error: Content is protected !!