Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಿಎಂ ಪುತ್ರನದ್ದು ʻಚೈಲ್ಡಿಶ್ʼ ಹೇಳಿಕೆ : ಕಾಂಗ್ರೆಸ್‌ ಶಾಸಕ

ಬೆಂಗಳೂರು : ವಿಧಾನ ಪರಿಷತ್ ಸದಸ್ಯರೂ ಆಗಿರುವ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯನವರದ್ದು ಚೈಲ್ಡಿಶ್ ಹೇಳಿಕೆ ಎಂದು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಚನ್ನಗಿರಿಯ ಶಾಸಕರಾಗಿರುವ ಬಸವರಾಜು ವಿ.ಶಿವಗಂಗಾ, ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹಲವು ಬಾರಿ, ನಾಯಕತ್ವ ಬದಲಾವಣೆ ಮತ್ತು ಡಿಕೆಶಿ ಮುಂದಿನ ಸಿಎಂ ಎನ್ನುವ ಹೇಳಿಕೆಯನ್ನು ನೀಡಿದ್ದವರು. ಇದಕ್ಕಾಗಿ, ಅವರಿಗೆ ಕೆಪಿಸಿಸಿಯ ಶಿಸ್ತು ಸಮಿತಿ ನೋಟಿಸ್ ಕೂಡಾ ಜಾರಿ ಮಾಡಿತ್ತು. ಈಗ, ಮತ್ತೊಮ್ಮೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ಅಪಸ್ವರ ಇರುವುದನ್ನು ಒಪ್ಪಿಕೊಂಡಿದ್ದಾರೆ.

ಇದನ್ನು ಓದಿ: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಸಿಎಂ ತವರಿನಲ್ಲೇ ಶುರುವಾಯ್ತು ವಿರೋಧ

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಯತೀಂದ್ರ, ನಮ್ಮ ಅಪ್ಪಾಜಿಯವರು ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಇಂತಹ ಸಮಯದಲ್ಲಿ, ವೈಚಾರಿಕವಾಗಿ ಮತ್ತು ಜನಪರ ಸಿದ್ದಾಂತವನ್ನು ಇಟ್ಟುಕೊಂಡವರು ಬೇಕು. ಅದರ ಮುಂದಾಳತ್ವವನ್ನು ವಹಿಸಿಕೊಳ್ಳುವವರು ಅಂದರೆ ಸತೀಶ್ ಜಾರಕಿಹೊಳಿ. ಅವರ ಮಾರ್ಗದರ್ಶನ ಎಲ್ಲರಿಗೂ ಇರಬೇಕು ಎಂದು ಡಾ.ಯತೀಂದ್ರ ಹೇಳಿದ್ದರು. ಆ ಮೂಲಕ, ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎನ್ನುವ ರೀತಿಯಲ್ಲಿ ಬಿಂಬಿಸಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಸವರಾಜು ಶಿವಗಂಗಾ, ಇದೊಂದು ತೀರಾ ಬಾಲಿಶತನದ ಹೇಳಿಕೆ, ಯತೀಂದ್ರ ಅವರು ಹಾಲೀ ವಿಧಾನ ಪರಿಷತ್ ಸದಸ್ಯರು. ಹಿಂದೆ, ಶಾಸಕರೂ ಆಗಿದ್ದವರು. ಹಿರಿಯರಾದವರು ಹೇಳಿಕೆ ನೀಡುವಾಗ, ತೂಕಬದ್ದವಾಗಿ ಮಾತನಾಡಬೇಕು, ಇಲ್ಲದಿದ್ದರೆ ಅದು ಬೇರೆ ಅರ್ಥವನ್ನು ಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ರಾಜಮನೆತನದಲ್ಲಾದರೆ ಉತ್ತರಾಧಿಕಾರಿ ಯಾರು ಎನ್ನುವುದು ಮುಂಚೆಯೇ ನಿರ್ಧಾರವಾಗಿರುತ್ತದೆ. ನಮ್ಮದು ಹೈಕಮಾಂಡ್ ಸಂಸ್ಕೃತಿಯ ಪಕ್ಷ. ನಮ್ಮ ವರಿಷ್ಠರು ಇಂತಹ ಹೇಳಿಕೆಯನ್ನು ಗಮನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ.

ನಾನು ಈ ಹಿಂದೆ ಮಾತನಾಡಿದ್ದಕ್ಕೆ ನನಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಬಸವರಾಜು ಹೇಳಿದ್ದಾರೆ. ಯಾವುದೇ ಒಂದು ಕುಟುಂಬದವರು ಯಾರು ಮುಂದಿನ ಮುಖ್ಯಮಂತ್ರಿ ಎಂದು ನಿರ್ಧರಿಸುವುದಲ್ಲ. ಯತೀಂದ್ರ ಅವರು ಇಂತಹ ಹೇಳಿಕೆಯನ್ನು ಕೊಡುವುದನ್ನು ನಿಲ್ಲಿಸಬೇಕು. ನಾವೇ, ವಿರೋಧ ಪಕ್ಷಗಳಿಗೆ ಆಹಾರ ನೀಡಿದಂತಾಗುವುದಿಲ್ಲವೇ ಎಂದು ಬಸವರಾಜು ಶಿವಗಂಗಾ ಪ್ರಶ್ನಿಸಿದ್ದಾರೆ. ಹೈಕಮಾಂಡ್ ಈ ಸಂಬಂಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಯತೀಂದ್ರ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಹೈಕಮಾಂಡ್ ಎಚ್ಚರಿಕೆಯ ನಂತರವೂ, ಅವರಿಂದ ಇಂತಹ ಹೇಳಿಕೆ ಬರುತ್ತಿದೆ. ಹಿಂದೆ ಕೂಡಾ, ಹಲವು ಬಾರಿ ಪೂರ್ಣಾವಧಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಹೇಳಿದ್ದರು. ಆದರೆ, ಇದುವರೆಗೆ ಒಮ್ಮೆಯೂ ಹೈಕಮಾಂಡ್ ನೋಟಿಸ್ ನೀಡಿಲ್ಲ ಎಂದು ಬಸವರಾಜು ಶಿವಗಂಗಾ ಕಿಡಿಕಾರಿದ್ದಾರೆ.

Tags:
error: Content is protected !!