Mysore
27
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಕೆ.ಎಸ್.ಡಿ.ಎಲ್ : ಸರ್ಕಾರಕ್ಕೆ ರೂ.135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

KSDL: Dividend cheque of Rs. 135 crore handed over to the government

ಬೆಂಗಳೂರು : ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳ ಚೆಕ್ ಅನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ಮೂಲಕ ಡೆವಿಡೆಂಟ್ ಅನ್ನು ಸರಕಾರಕ್ಕೆ ಹಸ್ತಾಂತರಿಸಿತು.

ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.

ಇದನ್ನು ಓದಿ: ಚಾ.ನಗರ | ಬುದ್ದನ ವಿಗ್ರಹ ಒಡೆದು,ಅಂಬೇಡ್ಕರ್‌ ನಾಮಫಲಕ ಕಿತ್ತು ವಿರೂಪ

ಈ ಕಾರ್ಯಕ್ರಮವು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಸಚಿವ ಎಂ.ಬಿ.ಪಾಟೀಲ್ ಅವರು ಮಾತನಾಡಿ, ಕೆಎಸ್ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭವನ್ನು ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ ಎಂದಿದ್ದಾರೆ.

2022-23ರಲ್ಲಿ ಬಿಜೆಪಿ ಸರಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂ. ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಅವರು ನುಡಿದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ.ಸುಧಾಕರ, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!