Mysore
29
scattered clouds

Social Media

ಬುಧವಾರ, 14 ಜನವರಿ 2026
Light
Dark

‘ಕೈಮಗ್ಗ ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ’

ಶ್ರೀನಿವಾಸ್ ಸಜ್ಜನ, ಕೆ.ಆರ್.ಪೇಟೆ

‘ಆಂದೋಲನ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕರ್ನಾಟಕ ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಆಶ್ವಾಸನೆ

ಕೆ.ಆರ್.ಪೇಟೆ: ರಾಜ್ಯದ ನೇಕಾರ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಈ ಮೂಲಕ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ನಿಗಮವನ್ನು ಯಶಸ್ವಿ ಪಥದತ್ತ ಸಾಗುವಂತೆ ಕ್ರಮವಹಿಸಲಾಗುವುದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ತಿಳಿಸಿದರು.

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ ಸುಮಾರು ೩೦ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನೇಕಾರರ ಪ್ರತಿಯೊಂದು ಸಮಸ್ಯೆಗೂ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ಒದಗಿಸುವುದೇ ನನ್ನ ಧ್ಯೇಯವಾಗಿದೆ. ನಿಗಮದ ಅಭಿವೃದ್ಧಿ ಕಾರ್ಯಗಳ ಜೊತೆಯಲ್ಲಿಯೇ ಕೆ.ಆರ್. ಪೇಟೆ ಕ್ಷೇತ್ರದ ಜನರ ಸಮಸ್ಯೆಗಳಿಗೂ ಧ್ವನಿಯಾಗುತ್ತೇನೆ ಎಂದು ನಾಗೇಂದ್ರ ಕುಮಾರ್ ಅವರು ‘ಆಂದೋಲನ’ ನಡೆಸಿದ ಸಂದರ್ಶನದಲ್ಲಿ ತಮ್ಮ ಅಂತರಾಳದ ಮಾತುಗಳನ್ನು ಬಹಿರಂಗಪಡಿಸಿದರು.

ಆಂದೋಲನ: ನಿಮಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತೆ? ಇದನ್ನು ಯಾವ ರೀತಿ ಸ್ವೀಕರಿಸುತ್ತೀರಿ?

ನಾಗೇಂದ್ರಕುಮಾರ್: ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವ ವಿಶ್ವಾಸವಿತ್ತು. ಆದರೆ ಪ್ರತಿಷ್ಠಿತ ನಿಗಮ ಮಂಡಳಿಯಾದ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ಊಹಿಸಿರಲಿಲ್ಲ. ನನಗೆ ಸಿಕ್ಕಿರುವ ಈ ಅವಕಾಶವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪಮುಖ್ಯಮಂತ್ರಿ ಕೆ.ಡಿ.ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಮಾಜಿ ಉಪಸಭಾಪತಿ ಕೆ.ರೆಹಮಾನ್‌ಖಾನ್, ಮಳವಳ್ಳಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಅವರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.

ಆಂದೋಲನ: ರಾಜ್ಯದಲ್ಲಿ ನೇಕಾರರು ಬಹಳ ಸಂಕಷ್ಟ ದಲ್ಲಿದ್ದಾರೆ. ಅವರ ಸಬಲೀಕರಣಕ್ಕೆ ಯಾವ ರೀತಿ ಯೋಜನೆ ಕೈಗೊಳ್ಳುತ್ತೀರಿ?

ಬಿ.ನಾಗೇಂದ್ರಕುಮಾರ್: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಸುಮಾರು ೧೭೫ ರೇಷ್ಮೆ ಮತ್ತು ೩,೨೬೦ ಕಾಟನ್ ಕೈಮಗ್ಗಗಳು ಸೇರಿದಂತೆ ಒಟ್ಟಾರೆಯಾಗಿ ೩,೪೩೫ ಕೈಮಗ್ಗ ನೇಕಾರರಿದ್ದಾರೆ. ಈ ಪೈಕಿ ಶೇ.೫೦ಕ್ಕೂ ಹೆಚ್ಚು ಕೈಮಗ್ಗದ ನೇಕಾರರು ಕಚ್ಚಾ ಸಾಮಗ್ರಿಗಳ ಕೊರತೆಯಿಂದ ವೃತ್ತಿಯಿಂದ ಹಿಂದೆ ಸರಿದು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಮೊದಲು ಕಚ್ಚಾ ಸಾಮಗ್ರಿ ಒದಗಿಸಿಕೊಡುವ ಮೂಲಕ ಕೈಮಗ್ಗಗಳನ್ನು ಪುನಾರಂಭಿಸಲು ಕ್ರಮ ವಹಿಸುತ್ತೇನೆ. ಈಗಾಗಲೇ ೩,೮೬೮ ಆಶ್ರಯ ಮನೆಗಳನ್ನು ನೇಕಾರರಿಗೆ ಒದಗಿಸಲಾಗಿದೆ. ಅಲ್ಲದೇ ಸುಮಾರು ೧೯೬ ಮನೆಗಳಿಗಾಗಿ ನೇಕಾರರಿಂದ ಬೇಡಿಕೆ ಸಲ್ಲಿಕೆಯಾಗಿವೆ. ಮುಂದಿನ ದಿನಗಳಲ್ಲಿ ನೇಕಾರರಿಗೆ ಮನೆಗಳನ್ನು ನೀಡಲು ಕ್ರಮ ವಹಿಸಲಾಗುವುದು.

ಆಂದೋಲನ: ಕೈಮಗ್ಗ ನೇಕಾರರಿಗೆ ಮಹಾನಗರಗಳಲ್ಲಿ ಶಾಶ್ವತ ಮಳಿಗೆ ಸ್ಥಾಪಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲು ಯಾವ ರೀತಿ ಯೋಜನೆ ರೂಪಿಸುತ್ತೀರಿ?

ಬಿ.ನಾಗೇಂದ್ರಕುಮಾರ್: ಕೈಮಗ್ಗದ ರೇಷ್ಮೆ ಸೀರೆ, ಶಾಲು ಸೇರಿದಂತೆ ವಿವಿಧ ಉತ್ಪನ್ನಗಳ ದರದಲ್ಲಿ ಶೇ.೨೦ ರಿಂದ ೩೦ ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೈಮಗ್ಗದ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆರ್ಥಿಕ ಸಂಪನ್ಮೂಲಗಳ ಕೊರತೆಯನ್ನು ಸಹ ಎದುರಿಸುತ್ತಿದ್ದೇವೆ. ಉದ್ಯಮಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು.

ಆಂದೋಲನ: ಆಧುನೀಕರಣದ ಭರಾಟೆಯಲ್ಲಿ ಕೈಮಗ್ಗ ಉತ್ಪನ್ನಗಳಿಗೆ ಸಮರ್ಥ ಮಾರುಕಟ್ಟೆ ಒದಗಿಸಲು ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ?

ಬಿ.ನಾಗೇಂದ್ರಕುಮಾರ್: ಪ್ರಿಯದರ್ಶಿನಿ ಹ್ಯಾಂಡ್ ಲೂಮ್‌ಗಳನ್ನು ಎಲ್ಲಾ ತಾಲ್ಲೂಕು ಮತ್ತು ಪ್ರಮುಖ ಕೇಂದ್ರಗಳಲ್ಲಿ ಸ್ಥಾಪನೆ ಮಾಡಿದರೆ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡಲು ನೌಕರರ ಕೊರತೆ ಇದೆ. ನೌಕರರನ್ನು ನೇಮಕ ಮಾಡಲು ಸರ್ಕಾರವು ಅಗತ್ಯ ಸಹಕಾರ ನೀಡಬೇಕು. ೧೦ ಕೋಟಿ ರೂ. ಬಜೆಟ್ ನಿಗಮಕ್ಕೆ ಬಹಳ ಅಲ್ಪ ಪ್ರಮಾಣವಾಗಿದೆ. ಕೈಮಗ್ಗ ನಿಗಮಕ್ಕೆ ಕನಿಷ್ಠ ೪೦ ಕೋಟಿ ರೂ. ಅನುದಾನ ನೀಡಬೇಕು ಎಂದು ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.

ಆಂದೋಲನ: ಒಟ್ಟಾರೆ ನೇಕಾರರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸುವ ಉದ್ದೇಶ ಇದೆಯೇ?

ಬಿ.ನಾಗೇಂದ್ರಕುಮಾರ್: ಕೈಮಗ್ಗ ನೇಕಾರರಿಗೆ ಕೂಲಿ ಕಡಿಮೆ ಇದೆ. ವೈಜ್ಞಾನಿಕವಾಗಿ ಕೂಲಿ ನೀಡಲು ಕ್ರಮ ವಹಿಸಲಾಗುವುದು. ನೇಕಾರರಿಗೆ ವಸತಿ ಸಮಸ್ಯೆ ಇದೆ ಇದನ್ನು ಪರಿಶೀಲಿಸಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹಿಂದೆ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ರಾಜ್ಯದ ಶಾಲಾ ಮಕ್ಕಳಿಗೆ ಕೈಮಗ್ಗದ ಸಮವಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಶೇ.೫೦ರಷ್ಟು ಮಾತ್ರ ಸಮವಸ್ತ್ರ ಪೂರೈಕೆಯಾಗುತ್ತಿದೆ. ಇದಕ್ಕೆ ಕಚ್ಚಾ ಸಾಮಗ್ರಿಗಳ ಕೊರತೆಯೇ ಕಾರಣ. ಕಚ್ಚಾ ಸಾಮಗ್ರಿಗಳನ್ನು ಪೂರೈಕೆ ಮಾಡುವ ಉತ್ಪಾದನೆ ಹೆಚ್ಚಿಸುವ ಮೂಲಕ ಇಡೀ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಿಗೂ ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಸಮವಸ್ತ್ರಗಳನ್ನು ಸರಬರಾಜು ಮಾಡಲು ಸರ್ಕಾರದಿಂದ ಆರ್ಥಿಕ ನೆರವು ಪಡೆಯಲು ಆಲೋಚಿಸಲಾಗಿದೆ.

ಆಂದೋಲನ: ನೇಕಾರರು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ನಿಮ್ಮ ಸಂಸ್ಥೆ ಯಾವ ರೀತಿ ಸಹಕಾರ ನೀಡುತ್ತದೆ?

ಬಿ.ನಾಗೇಂದ್ರಕುಮಾರ್: ನಿಗಮಕ್ಕೆ ೧೦ ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ವಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಕೈಮಗ್ಗಗಳಿಗೆ ಕಚ್ಚಾ ಸಾಮಗ್ರಿ ಕೊರತೆಯಿಂದ ಬಂದ್ ಮಾಡಲಾಗಿರುವ ಕೈಮಗ್ಗಗಳನ್ನು ಪುನಾರಂಭ ಮಾಡಿದರೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ ; ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ.

Tags:
error: Content is protected !!