Mysore
20
overcast clouds

Social Media

ಭಾನುವಾರ, 25 ಜನವರಿ 2026
Light
Dark

ಹೆಬ್ಬಾಳದಲ್ಲೂ ನಡೆದಿತ್ತು ಮತ ಕಳವು : ಕ್ಷೇತ್ರದ ಶಾಸಕ, ಸಚಿವರಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು : 2023 ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ ಹೆಬ್ಬಾಳ ಕ್ಷೇತ್ರದಲ್ಲಿಯೂ ವೋಟ್ ಚೋರಿ ನಡೆದಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಹಿರಂಗಪಡಿಸಿದ್ದಾರೆ.

ಹೆಬ್ಬಾಳ ಕ್ಷೇತ್ರದ ಆರ್.ಟಿ.ನಗರದಲ್ಲಿ ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೋಟ್ ಚೋರಿ ವಿರುದ್ಧ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಸಚಿವರು ಈ ಗಂಭೀರ ಆರೋಪ ಮಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳದಲ್ಲಿ 20 ಸಾವಿರಕ್ಕೂ ಅಧಿಕ ಮತಗಳ ಕಳವು ನಡೆದಿದೆ. ಆದಾಗ್ಯೂ ನಮ್ಮ ಮತ ಕ್ಷೇತ್ರದ ಜನತೆ ಮತ್ತು ಮತದಾರರು ನನ್ನನ್ನು ಕೈಬಿಡಲಿಲ್ಲ. 32 ಸಾವಿರಕ್ಕೂ ಹೆಚ್ಚ ಮತಗಳ ಅಂತರದಿಂದ ಗೆಲುವು ತಂದುಕೊಟ್ಟರು. ಅವರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.

ಪ್ರಜಾಪ್ರಭುತ್ವದ ಹತ್ಯೆ
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಒಂದೇ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ. ಆ ಒಂದು ಮತವನ್ನೇ ಕಸಿದುಕೊಳ್ಳುವಂತಹ ಪ್ರಯತ್ನವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಈ ಮೂಲಕ ಪ್ರಜಾಪ್ರಭುತ್ವದ ಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರದಲ್ಲಿ ವಾಸವಿಲ್ಲದಿದ್ದರೂ ಚುನಾವಣೆ ಸಂದರ್ಭದಲ್ಲಿ ಸಾವಿರಾರು ಜನ ಪ್ರತ್ಯಕ್ಷರಾಗುತ್ತಾರೆ. ಬೆಂಗಳೂರು ಹೊರವಲಯದ ಪಟ್ಟಣಗಳಿಂದ ಇಲ್ಲಿಗೆ ಬಂದು ವೋಟ್ ಹಾಕಿ ಹೋಗುತ್ತಾರೆ. ಮತ್ತೆ ಅವರು ಬರುವುದು ಮುಂದಿನ ಚುನಾವಣೆ ವೇಳೆಗೆ ಎಂದು ಹೇಳಿದ ಅವರು, ಗಂಗೇನಹಳ್ಳಿ ವಾರ್ಡ್ ನ ವಿಳಾಸ ಹೊಂದಿದ ಸಾವಿರಕ್ಕೂ ಅಧಿಕ ಜನರು ಬಂದು ಮತ ಹಾಕುತ್ತಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:-ಮೈಸೂರು | ರೈತನ ಮೇಲೆ ಹುಲಿ ದಾಳಿ, ಸ್ಥಿತಿ ಗಂಭೀರ

ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತುತ್ತಾ ದೇಶ ಮತ್ತು ರಾಜ್ಯಗಳನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಈ ಪಕ್ಷಕ್ಕೆ ದೇವಸ್ಥಾನ, ಮಸೀದಿ ವಿಚಾರಗಳನ್ನು ಬಿಟ್ಟರೆ ಯಾವುದೇ ವಿಷಯ ಸಿಗುತ್ತಿಲ್ಲ. ಆ ಪಕ್ಷದ ಯಾವೊಬ್ಬ ನಾಯಕನೂ ದೇಶ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವುದೇ ಇಲ್ಲ. ಅದರ ಬದಲಿಗೆ ದ್ವೇಷವನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಬೈರತಿ ಸುರೇಶ್, ಬಡವರು, ದೀನದಲಿತರು, ದುರ್ಬಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸುವ ಪಕ್ಷವೆಂದರೆ ಕಾಂಗ್ರೆಸ್. ದೇಶ ಮತ್ತು ರಾಜ್ಯದ ನಿರ್ಮಾಣ ನಮ್ಮ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಪಾಲಿಕೆ ಚುನಾವಣೆಯಲ್ಲಿ ಎಚ್ಚರ ವಹಿಸಿ
ಎಲ್ಲಾ ಕಡೆ ಮತಗಳವು ಆಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನರು ಎಚ್ಚರಿಕೆ ವಹಿಸಬೇಕು. ಮತಗಳವು ಪ್ರಕರಣಗಳನ್ನು ಪತ್ತೆ ಮಾಡಿ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕು. ಮುಂಬರುವ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರಪಾಲಿಕೆಗಳಿಗೆ ಚುನಾವಣೆ ನಡೆಯಲಿದ್ದು, ಅತ್ಯಂತ ಎಚ್ಚರದಿಂದ ಮತದಾರರ ಪಟ್ಟಿಗಳನ್ನು ಪರಿಶೀಲಿಸಿ, ಮತಗಳವನ್ನು ತಡೆಗಟ್ಟಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಪಾಳ್ಗೊಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!