ಕೆಲವು ವರ್ಷಗಳ ಹಿಂದಿನ ಮಾತು. ನಟಿ-ನಿರ್ಮಾಪಕಿ-ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್, ‘ಕೊರಗಜ್ಜ’ ಎಂಬ ಚಿತ್ರ ಮಾಡಬೇಕು ಎಂದು ಹೊರಟರು. ಕೆಲವು ದಿನಗಳ ಕಾಲ ಚಿತ್ರೀಕರಣ ನಡೆದರೂ ಕಾರಣಾಂತರಗಳಿಂದ ಮುಂದುವರೆಯಲಿಲ್ಲವಂತೆ. ಕೊನೆಗೆ ಈ ಚಿತ್ರವನ್ನು ಅವರು ಕೈಬಿಟ್ಟಿದ್ದಾರೆ.
ಈಗ್ಯಾಕೆ ಈ ಮಾತು ಎಂದರೆ, ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಚಿತ್ರವು ಹಲವು ಅಡೆತಡೆಗಳನ್ನು ದಾಟಿ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ತ್ರಿವಿಕ್ರಮ ಸಪಲ್ಯ ನಿರ್ಮಿಸಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ 3ಡಿ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ದಕ್ಷಿಣ ಕನ್ನಡದ ವಾದ್ಯ ಹಿಮ್ಮೇಳ ಹಾಗೂ ಉಡುಪಿಯ ಮಹಿಳಾ ತಂಡದವರ ಹುಲಿ ನೃತ್ಯದ ಮೆರವಣಿಗೆಯಲ್ಲಿ ಸಾಗಿಬಂದ ‘ಕೊರಗಜ್ಜ’ ಚಿತ್ರದ ಎರಡು ಕಟೌಟ್‍ಗಳನ್ನು ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ಮಾಜಿ ಸಚಿವೆ ಮೋಟಮ್ಮ, ವಿಜಯಲಕ್ಷ್ಮಿ ಸಿಂಗ್, ಭವ್ಯ, ಶ್ರುತಿ ಮುಂತಾದವರು ಹಾಜರಿದ್ದರು.
ಇದನ್ನು ಓದಿ: ಮಕ್ಕಳ ದಿನದಂದು ತೆರೆಗೆ ಬರಲಿದೆ ‘ಪಾಠಶಾಲಾ’
‘ಕೊರಗಜ್ಜ’ ಕುರಿತು ಮಾತನಾಡಿದ ಸುಧೀರ್ ಅತ್ತಾವರ್, ‘ಮೂರು ವರ್ಷಗಳ ಹಿಂದೆ ಆರಂಭವಾದ ಸಿನಿಮಾ ಈಗ ಅನೇಕ ಅಡೆತಡೆಗಳನ್ನು ದಾಟಿ ಬಿಡುಗಡೆಯ ಹಂತ ತಲುಪಿದೆ. ಕೊರಗಜ್ಜನ ಆಶೀರ್ವಾದದಿಂದ ಸಿನಿಮಾ ಅಂದುಕೊಂಡ ಹಾಗೆ ಬಂದಿದೆ. ಯಾವುದೇ ಕೊರತೆ ಬಾರದ ಹಾಗೆ ತ್ರಿವಿಕ್ರಮ ಸಪಲ್ಯ ನಿರ್ಮಿಸಿದ್ದಾರೆ. ನಮ್ಮ ಚಿತ್ರದಲ್ಲಿ ಒಟ್ಟು 31 ಹಾಡುಗಳಿದೆ (ಆರು ಭಾಷೆಗಳಿಂದ). ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ದ ಗಾಯಕ – ಗಾಯಕಿಯರು ಈ ಹಾಡುಗಳನ್ನು ಹಾಡಿದ್ದಾರೆ’ ಎಂದರು.
ಇದು ನಾನು, ಜೈ ಜಗದೀಶ್ ಆರಂಭಿಸಿದ ಸಿನಿಮಾ ಎಂದು ನೆನಪಿಸಿಕೊಂಡ ವಿಜಯಲಕ್ಷ್ಮೀ ಸಿಂಗ್, ‘ಸುಮಾರು 25 ಸಿನಿಮಾ ನಿರ್ಮಾಣ ಮಾಡಿರುವ ನಮಗೆ ಈ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗದೆ, ಈ ಚಿತ್ರದಿಂದ ಹಿಂದೆ ಸರಿದೆವು. ಆದರೆ, ಈಗ ಅದು ಸುಧೀರ್ ಅತ್ತಾವರ್ ಅವರಿಗೆ ಇದು ಒಲಿದಿದೆ’ ಎಂದು ತಿಳಿದರು.
ತನ್ನ ವೃತ್ತಿಜೀವನದಲ್ಲೇ ಇದು ವಿಭಿನ್ನವಾದ ಸಿನಿಮಾ ಎಂದ ಶ್ರುತಿ, ‘ನಾನು ಈ ಚಿತ್ರದಲ್ಲಿ ಕೊರಗಜ್ಜನ ಸಾಕು ತಾಯಿಯ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರಕ್ಕಾಗಿ ಸತತ 28 ತಾಸುಗಳ ಚಿತ್ರೀಕರಣ ಮಾಡಿದ್ದೇನೆ. ಇದು ಮರೆಯಲಾರದ ಅನುಭವ. ಕೊರಗಜ್ಜನ ಆಶೀರ್ವಾದದಿಂದ ಚಿತ್ರ ಯಶಸ್ವಿಯಾಗಲೆಂದು’ ಹಾರೈಸಿದರು.
ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಕೂಡಾ ಕೊರಗಜ್ಜನನ್ನು ಆರಾಧಿಸುವ ಕುಟುಂಬದವರಂತೆ. ಹಾಗಾಗಿ, ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನವೆಂಬರ್ ಕೊನೆಗೆ ಚಿತ್ರವನ್ನು ಬಿಡುಗಡೆ ಆಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಕಬೀರ್ ಬೇಡಿ, ಭವ್ಯಾ, ಶ್ರುತಿ ಮುಂತಾದವರು ಅಭಿನಯಿಸಿದ್ದಾರೆ.





