Mysore
19
broken clouds

Social Media

ಭಾನುವಾರ, 25 ಜನವರಿ 2026
Light
Dark

ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಳಿಕೆ ನಿರ್ಲಕ್ಷ್ಯ ಸಹಿಸಲ್ಲ : ನಾಗಲಕ್ಷ್ಮಿ ಚೌಧರಿ

ಕೆ.ಆರ್.ಪೇಟೆ : ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆದರೂ ಪೊಲೀಸ್ ಇಲಾಖೆಯು ದೌರ್ಜನ್ಯ ಮಾಡಿದವರ ವಿರುದ್ದ ಎಫ್.ಐ.ಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದರೆ ರಾಜ್ಯ ಮಹಿಳಾ ಆಯೋಗವು ಸಹಿಸುವುದಿಲ್ಲ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಖಡಕ್ ಎಚ್ಚರಿಕೆ ನೀಡಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಸುಲೋಚನಮ್ಮ ರಾಮದಾಸ್ ಸಭಾಂಗಣದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಧ್ವಜ ಸ್ತಂಭ ಲೋಕಾರ್ಪಣೆ ಕಾರ್ಯಕ್ರಮನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ, ಅದೇ ವೇದಿಕೆಯಲ್ಲಿ ಮಹಿಳೆಯರ ಕುಂದು-ಕೊರತೆ ಆಲಿಸಿ ಮಾತನಾಡಿ ಮಾಂಬಹಳ್ಳಿ ಎಂಬ ಗ್ರಾಮದಲ್ಲಿ ಸುಲೋಚನ ಎಂಬ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ 307ಸೆಕ್ಷನ್ ದಾಖಲಿಸದೇ, ಲಘು ಪ್ರಕರಣ ದಾಖಲಿಸಿರುವುದರ ಬಗ್ಗೆ ಅವರ ಮಕ್ಕಳಾದ ಯಶಸ್ವಿನಿಗೌಡ ಮತ್ತು ಹರ್ಷವರ್ಧಿನಿಗೌಡ ಅವರಿಂದ ದೂರು ಪತ್ರ ಸ್ವೀಕರಿಸಿ ಮಹಿಳೆಯ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಘಟನೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಆನಂದೇಗೌಡ ಅವರಿಗೆ ಮೊಬೈಲ್ ಕರೆ ಮಾಡಿ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಬೇಕು ಚಾರ್ಜ್ಶೀಟ್ ನಲ್ಲಿ ಸರಿಯಾದ ಸೆಕ್ಷನ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಅಲ್ಲದೇ ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆದೇಶ ನೀಡಿದರು.

ಹೊಸಹೊಳಲು ಗ್ರಾಮದ ದಲಿತ ಮಹಿಳೆ ರತ್ನಮ್ಮ ತಮ್ಮ ಗಂಡ ನಂದೀಶ್ ಎಂಬಾತ ನನ್ನೊಂದಿಗೆ 17ವರ್ಷಗಳ ಸಂಸಾರ ಮಾಡಿ ಈಗ ನೀನು ಕೆಳ ಜಾತಿಯವಳು ಎಂದು ನನ್ನಿಂದ ದೂರವಿದ್ದಾರೆ. ಈ ಬಗ್ಗೆ ಟೌನ್ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿ ಮಾಡಿದಾಗ ತಕ್ಷಣ ಸ್ಥಳದಲ್ಲಿಯೇ ಇದ್ದ ಇನ್ಸ್ಪೆಕ್ಟರ್ ಸುಮಾರಾಣಿ ಮತ್ತು ಸಿಡಿಪಿಓ ವಿದ್ಯಾವತಿ ಅವರಿಗೆ ಕೂಡಲೇ ಸಮಸ್ಯೆ ಬಗೆಹರಿಸಿ ವರದಿ ನೀಡಬೇಕು. ಇಲ್ಲವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.

ಹೊಸಹೊಳಲು ರೇಣುಕಾ ಎಂಬುವವರನ್ನು ಅದೇ ಗ್ರಾಮ ಮಂಜುನಾಥ್ ಎಂಬಾತ ಪೋಷಕರ ಸಮ್ಮುಖದಲ್ಲಿ ಶಾಸ್ತೋಕ್ತವಾಗಿ ವಿವಾಹವಾದರೂ ಸಹ ವಿವಾಹವಾದ ಎರಡನೇ ತಿಂಗಳಿಗೆ ನನ್ನನ್ನು ದೂರ ಮಾಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ಕೈಗೊಂಡು ನನ್ನ ಗಂಡನಿಂದ ಅನ್ಯಾಯವಾಗಿದ್ದು ಸೂಕ್ತ ನ್ಯಾಯ ಕೊಡಿಸುವಂತೆ ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಹೆಣ್ಣು ಸಿಗುತ್ತಿಲ್ಲವಲ್ಲ ಅಂತಾ ಗಂಡು ಮಕ್ಕಳು ಪರದಾಡುತ್ತಿರುವ ಈ ಸಂದರ್ಭದಲ್ಲಿ ಕಟ್ಟಿಕೊಂಡ ಹೆಂಡತಿಯನ್ನು ಕೇವಲ ಎರಡೇ ತಿಂಗಳಿಗೆ ದೂರ ಮಾಡಿದ್ದಾರೆ ಎಂದರೆ ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾಧಿಸಿದರು.

ಈ ಬಗ್ಗೆ ಆರೋಪಿ ಮಂಜುನಾಥನ ವಿರುದ್ದ ಸೂಕ್ತ ಪೊಲೀಸ್ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:-JOB ALERTS | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿ ನೇಮಕಾತಿ

ಹೀಗೆ ಹತ್ತಾರು ಸಮಸ್ಯೆಗಳನ್ನು ಆಲಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡಿಸಲು ಪ್ರಯತ್ನಿಸಿದ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಹಿಳೆಯರಿಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಸಹ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ನಮ್ಮ ನಾಡು ನುಡಿಯ ಬಗ್ಗೆ ಎಲ್ಲರೂ ಹೆಚ್ಚು ಗೌರವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಯುವ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಸುನಿಲ್ ನೇತೃತ್ವದ ತಂಡವು ಕೆಲಸ ಮಾಡಲಿ ಎಂದು ನಾಗಲಕ್ಷ್ಮಿ ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಭುನವೇಶ್ವರಿ ಭಾವಚಿತ್ರವನ್ನು ಕರ್ನಾಟಕ ಕೈಮಗ್ಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅನಾವರಣ ಮಾಡಿದರು. ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಎಸ್.ಸುನಿಲ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಕರ್ನಾಟಕ ಯುವ ರಕ್ಷಣಾ ವೇದಿಕೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಗಂಗಾಧರಶಿವಾಚಾರ್ಯ ಸ್ವಾಮೀಜಿ, ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಬೆಡದಹಳ್ಳಿ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮ ದಿವ್ಯ ಸಾನಿದ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಡಾ.ಜೆ.ಎನ್.ರಾಮಕೃಷ್ಣಗೌಡ, ಸಮಾಜ ಸೇವಕರಾದ ಆರ್.ಟಿ.ಓ. ಮಲ್ಲಿಕಾರ್ಜುನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾಅಜಿತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾವತಿಗೌಡ, ಶಾಂತವ್ವ, ಕರ್ನಾಟಕ ಯುವ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆಟೋ ಜಾವಿದ್, ಕಾರ್ಯಾಧ್ಯಕ್ಷ ಮೋಹನ್, ರಾಜ್ಯ ಉಪಾಧ್ಯಕ್ಷ ಬಸವರಾಜು ಮೈಸೂರು ಜಿಲ್ಲಾಧ್ಯಕ್ಷ ಸುಧಾಕರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಿಸಾರ್ ಅಹಮದ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರೋಷನ್ ಭಾನು, ಉಪಾಧ್ಯಕ್ಷೆ ಲೀಲಾವತಿ, ನಗರ ಘಟಕದ ಅಧ್ಯಕ್ಷ ಮಂಜುನಾಥ್, ನಗರ ಕಾರ್ಯದರ್ಶಿ ರಾಧಾ, ಪದಾಧಿಕಾರಿಗಳಾದ ಭಾಸ್ಕರ್, ಶ್ರೀಕಾಂತ್, ದೇವೀರಮ್ಮ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!