Mysore
17
clear sky

Social Media

ಬುಧವಾರ, 21 ಜನವರಿ 2026
Light
Dark

ಜ್ಞಾನ ಹಾಗೂ ಜ್ಞಾಪಕಶಕ್ತಿಯ ಸಂಗಮ ಥಟ್ ಅಂತ ಹೇಳಿ: ಈಶ್ವರ ಖಂಡ್ರೆ

ಬೆಂಗಳೂರು: ಜ್ಞಾನ ಮತ್ತು ಜ್ಞಾಪಕಶಕ್ತಿಯ ಸಮ್ಮಿಲನವೇ ರಸಪ್ರಶ್ನೆ ಸ್ಪರ್ಧೆ. ಇದು ಬುದ್ಧಿ, ಭಾವಕ್ಕೆ ಕಸರತ್ತು ನೀಡುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನ ಜಿಕೆವಿಕೆಯ ಸಭಾಂಗಣದಲ್ಲಿಂದು ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗುವ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮ 5000 ಸಂಚಿಕೆಯೊಂದಿಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರುತ್ತಿರುವ ಸಂದರ್ಭಕ್ಕೆ ಸಾಕ್ಷಿಯಾಗಿ ಮಾತನಾಡಿದ ಅವರು, ಮಾಹಿತಿ ಮತ್ತು ಮನರಂಜನೆ ನೀಡುವ ಈ ಕಾರ್ಯಕ್ರಮ ಕಳೆದ 23 ವರ್ಷಗಳಿಂದ ವೀಕ್ಷಕರ ಜ್ಞಾನದಾಹ ತಣಿಸುತ್ತಿದೆ ಎಂದರು.

ಬೆಂಗಳೂರು ದೂರದರ್ಶನ ಆರಂಭವಾದ 1980ರ ದಶಕದಿಂದಲೂ ತನ್ನ ಗಾಂಭೀರ್ಯತೆ, ವೃತ್ತಿ ನಿಷ್ಠೆ ಉಳಿಸಿಕೊಂಡಿದೆ. ವಿಚಾರಪೂರ್ಣ ಮಾಹಿತಿ, ಆರೋಗ್ಯಕರ ಮನರಂಜನೆಯನ್ನು ಉಚಿತವಾಗಿ ಸಮಸ್ತ ಜನತೆಗೆ ನೀಡುತ್ತಿದೆ. ಹಲವು ಪ್ರತಿಭೆಗಳ ಪ್ರಕಾಶಕ್ಕೆ ಅನುವು ಮಾಡಿಕೊಟ್ಟಿದೆ ಎಂದರು.

ಇದನ್ನು ಓದಿ : ಓದುಗರ ಪತ್ರ: ಗಿನ್ನಿಸ್ ದಾಖಲೆಯತ್ತ ‘ಥಟ್ ಅಂತ ಹೇಳಿ’‌

ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. 75 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದು ಅಚ್ಚರಿ ಎನಿಸಿತು. ಮಾಧ್ಯಮ ತಜ್ಞರಾದ ಡಾ. ನಾ. ಸೋಮೇಶ್ವರ್ ಅಭಿನಂದನಾರ್ಹರು ಎಂದರು.

ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿಯೂ ನಡೆಸಲಾಗಿತ್ತು. ಪ್ರಕೃತಿ, ಪರಿಸರ, ವನ್ಯಜೀವಿಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದಲೂ ಮಾಹಿತಿ ಆಹ್ವಾನಿಸಿ ಅದನ್ನು ತಿಳಿಯಪಡಿಸಲಾಗುತ್ತಿದೆ. ಒಟ್ಟಾರೆ ಥಟ್ ಅಂತ ಹೇಳಿ ಕಾರ್ಯಕ್ರಮ ಒಂದು ಜ್ಞಾನಭಂಡಾರ ಎಂದು ಈಶ್ವರ ಖಂಡ್ರೆ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ನಾಡೋಜ ವೊಡೇ ಪಿ ಕೃಷ್ಣ, ಕಲಬುರ್ಗಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಶಿಕಾಂತ್ ಉಡಿಕೇರಿ, ವಿದುಷಿ ರೇವತಿ ಕಾಮತ್ ಮೊದಲಾದವರು ಪಾಲ್ಗೊಂಡಿದ್ದರು.

Tags:
error: Content is protected !!