ಬೆಂಗಳೂರು : ನಾನು, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹದೇವಪ್ಪ ಆಗಿಂದ್ದಾಗ್ಗೆ ಸೇರುತ್ತಿರುತ್ತೇವೆ. ಬೇರೆ ಸ್ನೇಹಿತರೆಲ್ಲ ಭೇಟಿಯಾಗುತ್ತೇವೆ. ಅದೆಲ್ಲ ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತಮ್ಮ ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಲಿತ ಸಚಿವರ ರಹಸ್ಯ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ‘ಅಂಥದ್ದೇನೂ ಆಗಿಲ್ಲ. ನಿಮ್ಮ ಕಣ್ಣಿಗೆ ಹೇಗೆ ಕಾಣಿಸುತ್ತೋ ಗೊತ್ತಿಲ್ಲ. ಇದೇನು ಮೊದಲ ಸಲ ಅಲ್ಲ. ಅನೇಕ ಬಾರಿ ನಾವು ಸೇರಿದ್ದೇವೆ ಎಂದರು.
ಇದನ್ನು ಓದಿ: ಸಂವಿಧಾನದಲ್ಲಿ ಸಾಂದರ್ಭಿಕ ಬದಲಾವಣೆ ಅಗತ್ಯ : ಮುಖ್ಯಮಂತ್ರಿ ಚಂದ್ರು ಅಭಿಮತ
ಸಚಿವ ಸಂಪುಟದಲ್ಲಿ ಕೆಲವು ವಿಷಯಗಳಿದ್ದವು. ಆ ಬಗ್ಗೆ ಕ್ಯಾಶುಯಲ್ ಮೀಟಿಂಗ್ ಅಷ್ಟೇ. ಇದರಲ್ಲಿ ಹೊಸದೇನೂ ಇಲ್ಲ. ಜಾರಕಿಹೊಳಿ ಹಾಗೂ ಮಹದೇವಪ್ಪ ಅವರ ಮನೆಯಲ್ಲಿ ಭೇಟಿ ಮಾಡುತ್ತೇವೆ. ದಲಿತ ನಾಯಕರ ಬೇಡಿಕೆ ಈಡೇರಿಲ್ಲ ಅಂದಿದ್ದು ಯಾರು? ಹೆಚ್ಚುವರಿ ಡಿಸಿಎಂ ಬಗ್ಗೆ ನಾನು ಒತ್ತಾಯ ಮಾಡಿಲ್ಲ. ಆ ಬಗ್ಗೆ ಸತೀಶ್ ಜಾರಕಿಹೊಳಿ, ರಾಜಣ್ಣ ಮಾತನಾಡಿದ್ದರು. ಈಗಲೇ ಆಗಬೇಕು ಅಂತ ಅಲ್ಲ‘ ಎಂದು ತಿಳಿಸಿದರು.
ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ‘ಅದನ್ನು ಸಿಎಂ ಹತ್ತಿರವೇ ಕೇಳಬೇಕು. ಸಚಿವರ ಮೌಲ್ಯಮಾಪನದ ಬಗ್ಗೆ ಗೊತ್ತಿಲ್ಲ. ಇದು ನಿರಂತರ ಪ್ರಕ್ರಿಯೆ. ಪುನಾರಚನೆಗೆ ಅದನ್ನು ಅಟ್ಯಾಚ್ ಮಾಡುವುದು ಸರಿಯಲ್ಲ. ನವೆಂಬರ್ ಕ್ರಾಂತಿ ಯಾರು ಹೇಳಿದ್ದು?‘ ಎಂದು ಮರು ಪ್ರಶ್ನಿಸಿದರು.
‘ಒಳ ಮೀಸಲಾತಿ ಗೊಂದಲ ಇತ್ತು. ಅದನ್ನು ಸರಿ ಮಾಡಿದ್ದೇವೆ. ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆದಿದೆ. ಮೋದಿ ೨ ಕೋಟಿ ಉದ್ಯೋಗ ಕೊಡುತ್ತೇವೆ ಅಂದಿದ್ದರು. ಅವರು ಕೊಟ್ಟಿಲ್ಲ, ಅದಕ್ಕೆ ಟೀಕೆ ಮಾಡುತ್ತೇವೆ. ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಅದನ್ನು ನಾವು ಜಾರಿ ಮಾಡಿದ್ದೇವೆ‘ ಎಂದರು.





