Mysore
14
broken clouds

Social Media

ಗುರುವಾರ, 22 ಜನವರಿ 2026
Light
Dark

ಮೇಲುಕೋಟೆ: ಪ್ರವಾಸಿಗರಿಗೆ ತ್ಯಾಜ್ಯದ ದರ್ಶನ

ನಿರ್ವಹಣೆ ಮಾಡದ ಗ್ರಾಪಂ ವಿರುದ್ಧ ಸಾರ್ವಜನಿಕರು ಅಸಮಾಧಾನ 

ಮೇಲುಕೋಟೆ: ಅಶುಚಿತ್ವದಿಂದ ಗಬ್ಬೆದ್ದು ನಾರುತ್ತಿರುವ ಮೇಲುಕೋಟೆಗೆ ಸ್ವಚ್ಛತೆಯ ಕಾಯಕಲ್ಪ ಬೇಕಿದೆ. ಚೆಲುವನ ದರ್ಶನಕ್ಕೆ ಬರುವ ಭಕ್ತರಿಗೆ ಅಶುಚಿತ್ವದ ದರ್ಶನವಾಗುತ್ತಿದ್ದು, ಬಂದವರು ಸರ್ಕಾರವನ್ನು ದೂರುತ್ತಿದ್ದಾರೆ. ಶುಚಿತ್ವದ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ಆಗಬೇಕಿದೆ.

ಮೇಲುಕೋಟೆಪ್ರವಾಸಿ ತಾಣವಾಗಿದ್ದರೂ ಈವರೆಗೆ ಸ್ವಚ್ಛತೆಯ ಕಡೆಗೆ ಹೆಚ್ಚು ನಿಗಾ ವಹಿಸಿಲ್ಲ. ಬೀದಿ ಬೀದಿಗಳ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ಗಬ್ಬೆದ್ದು ನಾರುತ್ತಿದೆ. ಪ್ರಮುಖ ಬೀದಿಗಳ ಚರಂಡಿಗಳಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಚೆಲುವನಾರಾಯಣಸ್ವಾಮಿ ಮತ್ತು ಯೋಗಾನರಸಿಂಹಸ್ವಾಮಿ ದೇವಾಲಯಗಳ ಬಳಿ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿದೆ. ಗ್ರಾಮ ಪಂಚಾಯಿತಿಗೆ ಹೋಗುವ ದಾರಿಯಲ್ಲೇ ಕಸದ ರಾಶಿ ಬಿದ್ದಿದ್ದು, ಎಲ್ಲರನ್ನು ಸ್ವಾಗತಿಸುವಂತಿದೆ. ಗಾಂದಿ ಗ್ರಾಮ ಪುರಸ್ಕಾರ ಪಡೆದ ಮೇಲುಕೋಟೆ ಪಂಚಾಯಿತಿ ಸ್ವಚ್ಛತೆಗೆ ಸಮರ್ಪಕ ವ್ಯವಸ್ಥೆ ಮಾಡದಿರುವುದು ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇದನ್ನು ಓದಿ : ಬೆರಗು ಮೂಡಿಸುವ ಗ್ರಾಮೀಣಾಭಿವೃದ್ಧಿ ಮಳಿಗೆ

ಕ್ಷೇತ್ರಕ್ಕೆ ಬರುವ ಪ್ರವಾಸಿಗರ ವಾಹನಗಳಿಂದ ಶುಲ್ಕ ಪಡೆಯುವ ಗ್ರಾಮ ಪಂಚಾಯಿತಿ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದರೂ ಸ್ವಚ್ಛತೆಯ ಕಡೆ ಗಮನಹರಿಸದಿರುವುದು ಬೇಸರದ ಸಂಗತಿ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇಲುಕೋಟೆಯ ಸ್ವಚ್ಛತೆಗೆ ಮೇಲಧಿಕಾರಿಗಳು ಯೋಜನೆ ರೂಪಿಸಬೇಕು, ಸ್ಥಳೀಯ ಪೌರಕಾರ್ಮಿಕರಿಗೆ ಸೇವಾಭದ್ರತೆ ಒದಗಿಸಿ ಕೆಲಸಕ್ಕೆ ತಕ್ಕ ಸಂಭಾವನೆ ನೀಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

” ಹಂಗಾಮಿ ಪೌರಕಾರ್ಮಿಕರಿಗೆ ಮನರೇಗ ಮೂಲಕ ಕೂಲಿ ನೀಡುತ್ತಿದ್ದರೂ ಸಮರ್ಪಕವಾಗಿ ಸ್ವಚ್ಛತಾಕಾರ್ಯ ನಿರ್ವಹಿಸುತ್ತಿರಲಿಲ್ಲ . ಇದೀಗ ಕೆಲಸಕ್ಕೆ ಬಾರದ ಕಾರಣ ಸ್ವಚ್ಛಮಾಡಲು ಬೇರೆ ಕಡೆಯಿಂದ ಪೌರಕಾರ್ಮಿಕರನ್ನು ಕರೆಸಲು ಮುಂದಾಗಿದ್ದೇವೆ. ಸ್ವಚ್ಛತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮೇಲಽಕಾರಿಗಳ ಅನುಮತಿ ಪಡೆದು ವಾರ್ಷಿಕ ಟೆಂಡರ್ ಕರೆಯಲಾಗುತ್ತದೆ.”

-ರಾಜೇಶ್ವರ್, ಮೇಲುಕೋಟೆ ಗ್ರಾಪಂ ಪಿಡಿಒ

” ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಬಂದ ನಮಗೆ ಎಲ್ಲ ಕಡೆ ಕಸದ ರಾಶಿಯ ದರ್ಶನವಾಗುತ್ತಿದೆ. ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಆಡಳಿತ ಅದೇ ಹಣದಲ್ಲಿ ಸ್ವಚ್ಛತೆ ನಿರ್ವಹಿಸಲು ಗಮನಹರಿಸಬೇಕು. ದೇವಾಲಯ ಮತ್ತು ಕಲ್ಯಾಣಿ ಹಾಗೂ ಬೆಟ್ಟದ ದೇವಾಲಯಗಳ ಬಳಿ ಸ್ವಚ್ಛತೆ ನಿರಂತರವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ.”

-ಸತೀಶ್, ಬೆಂಗಳೂರು

Tags:
error: Content is protected !!