Mysore
29
clear sky

Social Media

ಮಂಗಳವಾರ, 20 ಜನವರಿ 2026
Light
Dark

ಮರಳಾಪುರದಲ್ಲಿ ವೃದ್ಧೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

ಸ್ಮಶಾನ ಜಾಗ ಒತ್ತುವರಿ ತೆರವಿಗೆ ಆಗ್ರಹ  ಗ್ರಾಮಸ್ಥರ ಮನವೊಲಿಸಿ ಅಂತ್ಯ ಸಂಸ್ಕಾರ ಮಾಡಿಸಿದ ತಹಸಿಲ್ದಾರ್

ಗುಂಡ್ಲುಪೇಟೆ : ತಾಲ್ಲೂಕಿನ ಮರಳಾಪುರದಲ್ಲಿ ನಿಧನರಾಗಿದ್ದ ವಯೋವೃದ್ಧೆಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಒತ್ತುವರಿಯಾಗಿರುವ ಸ್ಮಶಾನ ಜಾಗವನ್ನು ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ.

ಗ್ರಾಮದ ಸುಬ್ಬಮ್ಮ (೯೮) ಎಂಬವರು ಶನಿವಾರ ರಾತ್ರಿ ನಿಧನರಾಗಿದ್ದರು. ಭಾನುವಾರ ಅವರ ಅಂತ್ಯಸಂಸ್ಕಾರ ನೆರವೇರಿಸಲು ಈ ಹಿಂದೆ ನಿಗದಿಯಾಗಿದ್ದ ಸ್ಮಶಾನ ಜಾಗಕ್ಕೆ ತರಲಾಯಿತು. ಆದರೆ, ಆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿ ತೋಟ ಮಾಡಿಕೊಂಡಿದ್ದರು.

ಇದನ್ನು ಗಮನಿಸಿ ಆಕ್ರೋಶಗೊಂಡ ಗಾಮಸ್ಥರು ಸ್ಮಶಾನ ಜಾಗವನ್ನು ಬಿಡಿಸಿಕೊಡಬೇಕು. ಅಲ್ಲಿಯವೆರೆಗೆ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಶವವನ್ನು ಸ್ಥಳದಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ತಹಸಿಲ್ದಾರ್, ಕಂದಾಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿ ಆಗಮಿಸಬೇಕೆಂದು ಪಟ್ಟು ಹಿಡಿದರು.

ಮರಳಾಪುರ ಸಮೀಪದ ಶೀಗೇವಾಡಿ ಗ್ರಾಮದ ಸರ್ವೆ ನಂ. ೧೩೨ ರಲ್ಲಿ ಇರುವ ೬ ಎಕರೆ ೨ ಗುಂಟೆ ಸರ್ಕಾರಿ ಭೂಮಿಯ ಪೈಕಿ ೨ ಎಕರೆ ೨೦ ಗುಂಟೆ ಭೂಮಿಯನ್ನು ಗ್ರಾಮದ ಸ್ಮಶಾನಕ್ಕೆಂದು ೧೯೯೨ರಲ್ಲೇ ಮಂಜೂರು ಮಾಡಲಾಗಿದೆ. ಆದರೆ, ವ್ಯಕ್ತಿಯೊಬ್ಬರು ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿ ಬೇಲಿ ಹಾಕಿಕೊಂಡು ತೋಟ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಸ್ಮಶಾನ ಭೂಮಿಗೆ ಕಂದಾಯ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಬಗ್ಗೆ ಹಲವು ಬಾರಿ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಕರೂರು ಕಾಲ್ತುಳಿತ: ದುರಂತಕ್ಕೆ ಹೊಣೆ ಯಾರು?

ವಿಷಯ ತಿಳಿದು ಸ್ಥಳಕ್ಕೆ ತಹಸಿಲ್ದಾರ್ ಉಲ್ಲಾಸ್, ಕಂದಾಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಸ್ಮಶಾನ ಜಾಗ ಒತ್ತುವರಿ ತೆರವು ಮಾಡಿಸಬೇಕು, ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕೆಂದು ಪಟ್ಟು ಹಿಡಿದರು.

ತಕ್ಷಣ ಒತ್ತುವರಿ ತೆರವು ಮಾಡಿಸಲು ಸಾಧ್ಯವಿಲ್ಲ, ಕಾಲಾವಕಾಶ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಬೇಕು. ಆದ್ದರಿಂದ ಇವತ್ತು ಶವ ಸಂಸ್ಕಾರ ಮುಗಿಸಿ. ಸೋಮವಾರ ಗ್ರಾಮಸ್ಥರು ತಹಸಿಲ್ದಾರ್ ಕಚೇರಿಗೆ ಬನ್ನಿ ಎಂದು ಮನವಿ ಮಾಡಿದರು. ಬಳಿಕ ಗ್ರಾಮಸ್ಥರು ಒತ್ತುವರಿ ಆಗಿರುವ ಸ್ಮಶಾನ ಜಾಗದ ಗೇಟ್ ಬಳಿಯೇ ಸುಬ್ಬಮ್ಮ ಅವರ ಶವವನ್ನು ಸುಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದರು.

” ಸೋಮವಾರ ಸ್ಮಶಾನ ಜಾಗದ ಸಂಬಂಧದ ದಾಖಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆಯುತ್ತೇನೆ. ಒತ್ತುವರಿದಾರರಿಂದಲೂ ವಿವರಣೆ ಪಡೆಯುತ್ತೇನೆ. ಅವರ ಬಳಿ ಏನಾದರೂ ದಾಖಲೆಗಳಿವೆಯೇ ಎಂದು ಪರಿಶೀಲಿಸುತ್ತೇನೆ. ಗ್ರಾಮಸ್ಥರು ಸೋಮವಾರ ನಮ್ಮ ಕಚೇರಿಗೆ ಬನ್ನಿ ಪರಿಹರಿಸೋಣ.”

 – ಉಲ್ಲಾಸ್,
ತಹಸಿಲ್ದಾರ್, ಗುಂಡ್ಲುಪೇಟೆ

Tags:
error: Content is protected !!