ಮೈಸೂರು : ಬಣ್ಣ ಬಣ್ಣಗಳ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆಯಲ್ಲಿ ಮೈಸೂರಿನ ಶ್ರೀಹರ್ಷ ಹಾಗೂ ರಶ್ಮಿ ಚಿಕ್ಕಮಗಳೂರು ಅವರು ಭಾವಗೀತೆಗಳ ಗಾನಸುಧೆಯ ಮೂಲಕ ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಪ್ರೇಕ್ಷಕರ ಮನತಣಿಸಿದರು.
ಗಾಯಕ ಶ್ರೀ ಹರ್ಷ ಮೈಸೂರು ರಾಜ ಮನೆತನದ ಗೀತೆ ಕಾಯೋ ಶ್ರೀ ಗೌರಿ ಗಾಯನದ ಮೂಲಕ ಪ್ರಾರಂಭಿಸಿ ರಾಷ್ಟ್ರ ಕವಿ ಕುವೆಂಪುರವರ ಬಾ ಇಲ್ಲಿ ಸಂಭವಿಸು ನಿತ್ಯಾವತಾರ, ಎಲ್ಲಿ ಜಾರಿತು ಮನವೂ ಎಲ್ಲೆ ಮೀರಿತು, ನಿಸ್ಸಾರ್ ಅಹಮದ್ ಅವರ ನಿತ್ಯೋತ್ಸವ ತಾಯಿ ನಿತ್ಯೋತ್ಸವ, ಕುರಿಗಳು ಸರ್ ಕುರಿಗಳು, ನರಸಿಂಹ ಸ್ವಾಮಿ ಅವರ ದೀಪವು ನಿನ್ನದೇ ಗಾಳಿಯೂ ನಿನ್ನದೇ, ಜಿ ಪಿ ರಾಜರತ್ನಂ ಹೆಂಡ ಹೆಂಡ್ತಿ ಕನ್ನಡ ಪದದೂಲ್‌ಅವರ ಹೀಗೆ ಹಲವು ಕನ್ನಡ ಸಾಹಿತ್ಯ ಲೋಕದ ಖ್ಯಾತ ಕವಿಗಳ ಭಾವಗೀತೆಗಳನ್ನು ಹಾಡಿ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದರು.
ಇದಕ್ಕೂ ಮುನ್ನ ಡಾ.ಮೋಹಿಸಿನ್ ಖಾನ್ ಮತ್ತು ತಂಡದಿಂದ ಸಿತಾರ್ ವಾದನ ನಡೆಯಿತು ಹಾಗೂ ಮೈಸೂರಿನ ವಿದ್ವಾನ್ ರಘು ನಂದನ್ ಹಾಗೂ ಸುಮುಖ ತಂಡದಿಂದ ಕರ್ನಾಟಕ ಶಾಸ್ತ್ರಿಯ ಸಂಗೀತದ ಮೂಲಕ ಪ್ರೇಕ್ಷಕರನ್ನು ತಲೆದೂಗುವಂತೆ ಮಾಡಿದರು.
ಇದನ್ನೂ ಓದಿ:-Mysuru Dasara | ದಸರಾಗೆ ಮತ್ತಷ್ಟು ಮೆರಗು ತಂದ ಏರ್ ಶೋ ; ಸಾಹಸಮಯ ಪ್ರದರ್ಶನ
ಇದೇ ವೇಳೆ ಅರಮನೆ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂಪತ್ ಕೃಷ್ಣ ಅಯ್ಯಂಗಾರ್ ದಂಪತಿಗಳಿಗೆ ಸಾಂಸ್ಕ ತಿಕ ಕಾರ್ಯಕ್ರಮ ಉಪ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು, ವಿಧಾನಪರಿಷತ್ ಸದಸ್ಯರಾದ ಶಿವಕುಮಾರ್ ಹಾಗೂ ಉಪ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತಿದ್ದರು.
ರಂಜಿಸಿದ ಶಿವತಾಂಡವ ವೈಭವ ಬಳಿಕ ಮೈಸೂರಿನ ಹೆಸರಾಂತ ಭರತನಾಟ್ಯ ಕಲಾವಿದ ಶ್ರೀಧರ್ ಜೈನ್ ತಂಡದಿಂದ ಶಿವ ತಾಂಡವ ನೃತ್ಯ ಮಾಡಲಾಯಿತು. ಅವರ ನೃತ್ಯಕ್ಕೆ ಇಡೀ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.





