Mysore
20
clear sky

Social Media

ಶನಿವಾರ, 24 ಜನವರಿ 2026
Light
Dark

ಕಾನೂನು ಉಲ್ಲಂಘಿಸಿ ಪ್ರಯೋಗಿಕವಾಗಿ ಕಾವೇರಿ ಆರತಿ

ಮಂಡ್ಯ : ಕೆ.ಆರ್.ಎಸ್. ಅಣೆಕಟ್ಟೆ ಬಳಿ ಪ್ರಾಯೋಗಿಕವಾಗಿ ಕಾವೇರಿ ಆರತಿ ಮಾಡುವ ಮೂಲಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರಿಗೆ ದ್ರೋಹ ಹಾಗೂ ಕಾನೂನುಭಂಗವುಂಟು ಮಾಡಿದ್ದಾರೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದರು.

ಕೆ.ಆರ್.ಎಸ್. ಅಣೆಕಟ್ಟೆ ಬಳಿ ರಾಜ್ಯ ಸರ್ಕಾರದ ಕಾವೇರಿ ನೀರಾವರಿ ನಿಗಮದ ವತಿಯಿಂದ ಪ್ರಾಯೋಗಿಕವಾಗಿ ೧೩ ಮಂದಿ ಪುರೋಹಿತರನ್ನು ಇಟ್ಟುಕೊಂಡು ಕಾವೇರಿ ಆರತಿ ಮಾಡುವ ಮೂಲಕ ಇಡೀ ಪ್ರಕ್ರಿಯೆಗೆ ದ್ರೋಹ, ಮಾಡಲಾಗಿದೆ. ಅಣೆಕಟ್ಟೆ ನಿಷೇಧಿತ ಪ್ರದೇಶ, ಪ್ರವಾಸೋದ್ಯಮ ಚಟುವಟಿಕೆಯನ್ನು ಅಣೆಕಟ್ಟೆ ಬಳಿ ಮಾಡಲಾಗದು. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆ ಸಂಬಂಧ ಪ್ರಕರಣ ಇದ್ದರೂ ಆಡಳಿತಾರೂಢ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಕಾವೇರಿ ಆರತಿ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಇದನ್ನು ಓದಿ ; ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ : ಸಮೀಕ್ಷೆಗೆ ಚಾಲನೆ ನೀಡಿ ಸಚಿವ ಚಲುವರಾಯಸ್ವಾಮಿ ಅಭಿಮತ

ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್. ಅಣೆಕಟ್ಟೆಯನ್ನು ನಾಶ ಮಾಡಲು ಇಬ್ಬರು ವ್ಯಕ್ತಿಗಳು ಕಂಕಣ ತೊಟ್ಟಿದ್ದಾರೆ. ಒಬ್ಬರು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ, ಕಾವೇರಿ ಆರತಿ ಯೋಜನೆ ರೂವಾರಿ ಡಿ.ಕೆ. ಶಿವಕುಮಾರ್, ಮತ್ತೊಬ್ಬರು ಅಣೆಕಟ್ಟೆ ಹಿನ್ನೀರಿನಲ್ಲಿ ವಿಮಾನಯಾನ (ಸೀಪ್ಲೇಸ್) ಯೋಜನೆ ರೂವಾರಿ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಮಂಡ್ಯದ ಜನರನ್ನು ಕುರಿಗಳು, ಹಿಂಬಾಲಕರೆಂಬ ಧೋರಣೆಯವರಾಗಿದ್ದಾರೆ. ಖಾಸಗಿ ಲಾಬಿಗೋಸ್ಕರ ಕೆ.ಆರ್.ಎಸ್. ಅಣಕಟ್ಟೆ ಪ್ರದೇಶಗಳಲ್ಲಿ ಖಾಸಗೀಕರಣಕ್ಕೆ ನೀಡಲು ಬದ್ಧರಾಗಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿ ಜನಪ್ರತಿನಿಧಿಗಳ ಮುಖವಾಣಿ:
ಕೆ.ಆರ್.ಎಸ್.ನಲ್ಲಿ ಕಾವೇರಿ ಆರತಿ ಮಾಡುತ್ತಿದ್ದರೂ, ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಜನಪ್ರತಿನಿಗಳ ಮುಖವಾಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ ಮಾಡುತ್ತೇವೆ ಎನ್ನುತ್ತಾರೆಯೇ ವಿನಾ, ಇಂತಹ ಕಾನೂನುಬಾಹಿರ ಕೃತ್ಯಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಇದನ್ನು ಓದಿ ; ಮಡಿಕೇರಿ ದಸರಾ ಮಹೋತ್ಸವದಲ್ಲಿ ನಾಳೆ ಕಾಫಿ ಘಮಲು

ಸರ್ವಾಧಿಕಾರಿ ಧೋರಣೆ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ. ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಆಡಳಿತ ಸುಧಾರಣೆ ಮಾಡಿ ಅಭಿವೃದ್ಧಿಗೆ ಒತ್ತು ನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನಾವು ಎಷ್ಟೋ ಮಂದಿ ಉಸ್ತುವಾರಿ ಸಚಿವರನ್ನು ನೋಡಿದ್ದೇವೆ. ಧೋರಣೆ ಬದಲಿಸದಿದ್ದರೆ ಅವರನ್ನು ಹಿಡಿದು ಕೇಳುವ ಕೆಲಸವನ್ನು ರೈತರೊಂದಿಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಪದಾಧಿಕಾರಿಗಳಾದ ಕೆ.ಬೋರಯ್ಯ, ಎಚ್.ಕೆಂಪೂಗೌಡ, ಎಚ್. ಚಂದ್ರಶೇಖರ್, ಎಂ.ವಿ. ಕೃಷ್ಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!