Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಮಡಿಕೇರಿ ದಸರಾ ಮಹೋತ್ಸವದಲ್ಲಿ ನಾಳೆ ಕಾಫಿ ಘಮಲು

Coffee

ನವೀನ್ ಡಿಸೋಜ

ಕಾಫಿ ಕೃಷಿ ಮಾಹಿತಿ, ಸಾಧಕ ಕೃಷಿಕರಿಗೆ ಸನ್ಮಾನ, ಕಾಫಿ ಖಾದ್ಯ ಸ್ಪರ್ಧೆ, ಸಮಿತಿಯಿಂದ ಸಿದ್ಧತೆ

ಮಡಿಕೇರಿ: ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.೨೪ರಂದು ಬುಧವಾರ ಕಾಫಿ ದಸರಾ ಸಂಭ್ರಮ ಮೇಳೈಸಲಿದ್ದು, ಕಾಫಿ ಕೃಷಿಕರಿಗೆ ಸನ್ಮಾನ ಮತ್ತು ಕಾಫಿ ಕೃಷಿ ಸಂಬಂಧಿತ ಮಾಹಿತಿ ದೊರಕಲಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಪರಿಕಲ್ಪನೆಯಲ್ಲಿ ಕಳೆದ ವರ್ಷ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾಕ್ಕೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಈ ವರ್ಷವೂ ಕಾಫಿ ದಸರಾ ಆಯೋಜಿಸಲಾಗಿದೆ. ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜನೆಗೊಂಡಿರುವ ಎರಡನೇ ವರ್ಷದ ಕಾಫಿ ದಸರಾ ಸೆ.೨೪ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಕಾಫಿ ದಸರಾ ಅಂಗವಾಗಿ ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆ ಆಯೋಜಿಸಲಾಗಿದೆ. ಕಾಫಿ ದಸರಾ ಅಂಗವಾಗಿ ಈ ವರ್ಷವೂ ೩೫ ಮಳಿಗೆಗಳು ಇರಲಿದ್ದು, ಕಾಫಿ ಸಂಬಂಧಿತ ಮಾಹಿತಿಯನ್ನು ನೀಡಲಿವೆ. ಕೊಡಗಿನ ಅನೇಕ ಕಾಫಿ ಕೆಫೆಗಳಲ್ಲಿ ಸ್ವಾದಿಷ್ಟ ಕಾಫಿ ಸವಿಯನ್ನೂ ಸವಿಯಬಹುದಾಗಿದೆ. ಭಾರತೀಯ ಕಾಫಿ ಮಂಡಳಿ, ಕೃಷಿ ಇಲಾಖೆ, ಪಶುವೈದ್ಯಕೀಯ ಇಲಾಖೆ, ತೋಟಗಾರಿಕಾ ಇಲಾಖೆ, ಕೈಗಾರಿಕಾ ಇಲಾಖೆ, ಹಾಪ್ ಕಾಮ್ಸ್, ನಂದಿನಿ ಹಾಲಿನ ಉತ್ಪನ್ನಗಳು, ಮೀನುಗಾರಿಕಾ ಇಲಾಖೆ,, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಸೇರಿದಂತೆ ಕಾಫಿ ಸಂಬಂಧಿತ ಅನೇಕ ಸಂಘಸಂಸ್ಥೆಗಳು, ಕಾಫಿ ಕೆಫೆಗಳು ಈ ವರ್ಷದ ದಸರಾದಲ್ಲಿ ಪಾಲ್ಗೊಳ್ಳಲಿವೆ ಎಂದು ಸಂಚಾಲಕ ಹೆಚ್. ಟಿ.ಅನಿಲ್ ಮಾಹಿತಿ ನೀಡಿದ್ದಾರೆ.

“ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಪರಿಕಲ್ಪನೆಯಲ್ಲಿ ಈ ಬಾರಿಯೂ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ಕಾಫಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಫಿ ಕೃಷಿಕರಿಗೆ ಸನ್ಮಾನ, ಉಪನ್ಯಾಸ, ಕಾಫಿ ಖಾದ್ಯಗಳ ಸ್ಪರ್ಧೆ ಸೇರಿದಂತೆ ಹಲವು ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.”

-ಹೆಚ್.ಟಿ.ಅನಿಲ್, ಕಾಫಿ ದಸರಾ ಸಂಚಾಲಕ

ಸಾಧಕ ಕೃಷಿಕರಿಗೆ ಸನ್ಮಾನ:  ಕಾಫಿ ದಸರಾ ಅಂಗವಾಗಿ ಜಿಲ್ಲೆಯ ೧೦ ಸಾಧಕ ಕೃಷಿಕರಿಗೆ ಮಧ್ಯಾಹ್ನ ೧ ಗಂಟೆಗೆ ಸನ್ಮಾನ ನೆರವೇರಲಿದೆ. ಸುಂಟಿಕೊಪ್ಪ ಬಳಿಯ ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ, ಕಿರಗಂದೂರು ಹಿರಿಯ ಕೃಷಿಕ ಎಸ್.ಎಂ.ಚಂಗಪ್ಪ, ಪ್ರಗತಿಪರ ಬೆಳೆಗಾರ ಲವ ಎಡದಂಟೆ, ಪೊನ್ನಂಪೇಟೆ ಹುದೂರು ಗ್ರಾಮದ ಕೃಷಿಕ ಬಿ.ಪಿ.ರವಿ ಶಂಕರ್, ಕೊಡ್ಲಿಪೇಟೆಯ ಕಾಫಿ ನರ್ಸರಿ ಮಾಲೀಕ ಡಿ.ವೈ.ರಜಾಕ್, ಕಾಫಿ ಉದ್ಯಮಿ ಮಡಿಕೇರಿಯ ನಿಜಾಮುದ್ದೀನ್ ಸಿದ್ದಿಕಿ, ತಾಕೇರಿಯ ಸಿರಿ ಸ್ವಸಹಾಯ ಮಹಿಳಾ ಸಂಘ, ಪ್ರಗತಿಪರ ಕೃಷಿಕ ಕೊಡಂದೇರ ನರೇನ್ ಕುಟ್ಟಯ್ಯ, ಚೆಟ್ಟಳ್ಳಿ ಪೊನ್ನತ್ತ ಮೊಟ್ಟೆಯ ಮಿಶ್ರಬೆಳೆ ಕೃಷಿಕ ರಾಬರ್ಟ್ ಅವರನ್ನು ಸನ್ಮಾನಿಸಲಾಗುವುದು.

Tags:
error: Content is protected !!