ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳ ಜೊತೆ ಯುವತಿ ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ರೀಲ್ಸ್ ಮಾಡಿದ್ದ ಯುವತಿಯನ್ನು ಹುಡುಕಿ ದಂಡ ಹಾಕುವುದಕ್ಕೆ ಮುಂದಾಗಿದೆ.
ದಸರಾ ಆನೆ ಜೊತೆ ರೀಲ್ಸ್ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದಂತೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ನಡೆಯಲು ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಕಮೆಂಟ್ ಮಾಡಿದ್ದರು. ವಿಡಿಯೋ ಫುಲ್ ವೈರಲ್ ಆಗುತ್ತಿದ್ದಂತೆ ಯುವತಿ ರೀಲ್ಸ್ ಡಿಲೀಟ್ ಮಾಡಿದ್ದಳು.
ಇದೀಗ ಈ ಪ್ರಕರಣದಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ರೀಲ್ಸ್ ಮಾಡಿದ್ದ ಯುವತಿಯನ್ನು ಹುಡುಕಿ ದಂಡ ಹಾಕುವುದಕ್ಕೆ ಮುಂದಾಗಿದ್ದಾರೆ. ಜೊತೆಗೆ ಮಾವುತ ಹಾಗೂ ಕಾವಾಡಿ ಸೇರಿದಂತೆ ಅವರ ಕುಟುಂಬದವರನ್ನು ಹೊರತುಪಡಿಸಿ ಬೇರೆ ಸಾರ್ವಜನಿಕರಿಗೆ ಆನೆ ಶಿಬಿರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಅನುಮತಿ ಇಲ್ಲದೆ ಆನೆಗಳ ಬಳಿ ತೆರಳಿದ್ದಕ್ಕೆ ಈಗಾಗಲೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಮೂವರಿಗೆ ದಂಡ ವಿಧಿಸಲಾಗಿದ್ದು, ನಾಡಹಬ್ಬ ಯಶಸ್ವಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಡಿಸಿಎಫ್ ಪ್ರಭುಗೌಡ ಮನವಿ ಮಾಡಿದ್ದಾರೆ.





